ADVERTISEMENT

ಕಾಯ್ದೆ ಜಾರಿ: ದಲಿತ ನೌಕರರಿಗೆ ಮುಂಬಡ್ತಿ

ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆ ಅಸ್ತು

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:19 IST
Last Updated 30 ಜನವರಿ 2019, 20:19 IST
   

ಬೆಂಗಳೂರು: ಹಿಂಬಡ್ತಿಗೆ ಗುರಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಸಮಾನಾಂತರ ಹುದ್ದೆ ಕಲ್ಪಿಸಿ ನ್ಯಾಯ ಕೊಡಿಸಲು ಜಾರಿಗೆ ತಂದಿರುವ ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಗೊಳಿಸಲು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಕೊನೆಗೂ ನಿರ್ಧರಿಸಿದೆ.

ಅಹಿಂಸಾ ಸಂಘಟನೆ ಹಾಗೂ ಸಂಪುಟದ ಕೆಲವು ಸಚಿವರ ವಿರೋಧದ ನಡುವೆಯೂ ಕಾಯ್ದೆ ಅನುಷ್ಠಾನ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಪರಿಶಿಷ್ಟ ಜಾತಿ ನೌಕರರ ಸಂಘಟನೆ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ADVERTISEMENT

ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ,ಕಾಯ್ದೆ ಜಾರಿಗೊಳಿಸಲೇಬೇಕು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ಪ್ರಿಯಾಂಕ್‌ ಖರ್ಗೆ, ಸತೀಶ್‌ ಜಾರಕಿಹೊಳಿ, ಇ. ತುಕಾರಾಂ ಪಟ್ಟು ಹಿಡಿದರು. ಒಂದೊಮ್ಮೆ ಜಾರಿ ಮಾಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಹೊಡೆತ ಬೀಳಲಿದೆ ಎಂದೂ ಎಚ್ಚರಿಸಿದರು. ಸುಪ್ರೀಂ ಕೋರ್ಟ್‌ ಅಂತಿಮ ಆದೇಶ ನೀಡುವವರೆಗೆ ಕಾಯೋಣ ಎಂದು ಸಚಿವ ಎಚ್‌.ಡಿ.ರೇವಣ್ಣ ಸೇರಿದಂತೆ ಹಲವು ಸಚಿವರು ಸಲಹೆ ನೀಡಿದರು ಎಂದು ಗೊತ್ತಾಗಿದೆ.

ರಾಜ್ಯ ಸರ್ಕಾರ 2002ರಲ್ಲಿ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕಾಯ್ದೆ ಅನ್ನು ಸುಪ್ರೀಂಕೋರ್ಟ್‌ ಪೀಠ ರದ್ದುಪಡಿಸಿತ್ತು. ಸೇವಾ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ, ಬಡ್ತಿಯಿಂದ ವಂಚಿತರಾಗಿದ್ದ ಪರಿಶಿಷ್ಟ ಜಾತಿಯೇತರ ಅಧಿಕಾರಿ, ಸಿಬ್ಬಂದಿಗೆ ಮುಂಬಡ್ತಿ ನೀಡಬೇಕು ಎಂದು ಆದೇಶದಲ್ಲಿ ಹೇಳಿತ್ತು. ಇದರಿಂದ ಪರಿಶಿಷ್ಟ ಸಮುದಾಯದ 3,900ಕ್ಕೂ ಹೆಚ್ಚು ನೌಕರರು ಹಿಂಬಡ್ತಿಗೆ ಒಳಗಾಗಿದ್ದರು. ಅವರಿಗೆ ರಕ್ಷಣೆ ನೀಡಲು ಹಿಂದಿನ ಕಾಂಗ್ರೆಸ್‌ ಸರ್ಕಾರ 2017ರ ಜೂನ್‌ 23ರಂದು ತಿದ್ದುಪಡಿ ಮಸೂದೆ ರೂಪಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.

‘ಈ ಕಾಯ್ದೆ ಅನುಷ್ಠಾನಗೊಳಿಸದಂತೆ ಸುಪ್ರೀಂ ಕೋರ್ಟ್‌ ಮೌಖಿಕ ಸೂಚನೆ ನೀಡಿತ್ತು. ಹಾಗಾಗಿ, ಅದನ್ನು ತಡೆಹಿಡಿಯಲಾಗಿತ್ತು. ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಬಹುದು ಎಂದು ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ವಾದ ಮಂಡಿಸಿದ್ದರು. ಈ ಕಾಯ್ದೆಯನ್ನು ಜಾರಿಗೊಳಿಸಲೇಬೇಕು ಎಂದು ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಪತ್ರ ಬರೆದಿದ್ದರು. ಹೀಗಾಗಿ, ಕಾಯ್ದೆ ಜಾರಿಗೆ ನಿರ್ಧರಿಸಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.

‘ವಿಧಾನಮಂಡಲದಲ್ಲಿ ಮಸೂದೆ ಮಂಡಿಸಿದ ಬಳಿಕ ಜೇಷ್ಠತಾ ಪಟ್ಟಿ ಸಿದ್ಧಪಡಿಸಲಾಗಿತ್ತು. ಆ ಬಳಿಕ ಹಲವು ನೌಕರರು ನಿವೃತ್ತರಾಗಿದ್ದಾರೆ. ಹಾಗಾಗಿ, ಹೊಸ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಪಟ್ಟಿ ಸಿದ್ಧಪಡಿಸಲು ಗಡುವು ವಿಧಿಸಿಲ್ಲ. ಕೆಲವು ಇಲಾಖೆಗಳು 15 ದಿನಗಳಲ್ಲಿ ಪಟ್ಟಿ ಸಿದ್ಧಪಡಿಸಬಹುದು. ಇನ್ನೂ ಕೆಲವು ಇಲಾಖೆಗಳಿಗೆ ತಿಂಗಳು ಹಾಗೂ ಒಂದೂವರೆ ತಿಂಗಳು ಬೇಕಾಗಬಹುದು’ ಎಂದರು.

‘ಈ ಕಾಯ್ದೆ ಜಾರಿಗೊಳಿಸಬಾರದು ಎಂದು ಅಹಿಂಸಾ ಸಂಘಟನೆಯವರು ಒತ್ತಾಯಿಸಿದ್ದರು. ಅವರಿಗೆ ಅನ್ಯಾಯ ಮಾಡಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಫೆಬ್ರುವರಿ 4,5 ಹಾಗೂ 6ರಂದು ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ಕಾಯ್ದೆ ಅನುಷ್ಠಾನ ಮಾಡುತ್ತಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಈಗ ಬಡ್ತಿ ಪಡೆದಿರುವವರಿಗೆ ತೊಂದರೆಯಾಗದಂತೆ ಸಮಾನಾಂತರ ಹುದ್ದೆ ಸೃಷ್ಟಿಸುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದರು.

ಪರಿಣಾಮಗಳೇನು?

-ಪರಿಶಿಷ್ಟ ಸಮುದಾಯದ 3,900ಕ್ಕೂ ಹೆಚ್ಚು ನೌಕರಿಗೆ ಸಮಾನಾಂತರ ಹುದ್ದೆ ಸಿಗಲಿದೆ. ಈ ಹುದ್ದೆ ಅವರು ನಿವೃತ್ತಿಯಾಗುವವರೆಗೆ ಮಾತ್ರ ಇರಲಿದೆ.

-ಹಿಂಬಡ್ತಿಗೆ ಒಳಗಾದ ನೌಕರರಿಗೆ ಈ ಹಿಂದಿನ ಹುದ್ದೆಯ ವೇತನ ಶ್ರೇಣಿಗೆ ಅನುಗುಣವಾಗಿ ಸಂಬಳ ಪಾವತಿ ಮಾಡಲಾಗಿದೆ. ಹೀಗಾಗಿ, ಕಾಯ್ದೆ ಜಾರಿಯಿಂದ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಿಲ್ಲ.

-ಹಿಂಬಡ್ತಿಗೆ ಒಳಗಾದ ನೌಕರರ ಪಿಂಚಣಿಯನ್ನು ತಡೆ ಹಿಡಿಯಲಾಗಿತ್ತು. ಅವರಿಗೆ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯ ಸಿಗಲಿದೆ.

***

ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿರುವಾಗ, ಕಾಯ್ದೆ ಜಾರಿ ಎಷ್ಟು ಸರಿ? ಇದು ನ್ಯಾಯಾಂಗ ನಿಂದನೆ.

-ಬಿ.ವಿ.ಆಚಾರ್ಯ, ಹಿರಿಯ ವಕೀಲ ಹೈಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.