ADVERTISEMENT

ರೋಹಿಣಿ ಸಿಂಧೂರಿಗೆ ಹೈಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 20:22 IST
Last Updated 18 ಫೆಬ್ರುವರಿ 2021, 20:22 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಜಮೀನಿನ ಖಾತೆ ಮಾಡಿಕೊಡುವ ವಿಷಯದಲ್ಲಿ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ಪಾಲನೆ ಮಾಡದ ಕಾರಣ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮೈಸೂರಿನ ಎಚ್‌.ಬಿ. ಅಶೋಕ್ ಹಾಗೂ ಇತರ ಐವರು ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ರೋಹಿಣಿ ಸಿಂಧೂರಿ, ‘ಜಮೀನು ಖಾತೆ ಮಾಡಿಕೊಡಲು ಹಲವು ಸಮಸ್ಯೆಗಳಿವೆ. ನಕಲಿ ದಾಖಲೆ ಸೃಷ್ಟಿಸಲಾಗಿದೆ. ಈ ವಿವಾದಿತ ಭೂಮಿಗೆ ಹಲವರು ಹಕ್ಕು ಮಂಡಿಸುತ್ತಿದ್ದಾರೆ. ಹೀಗಾಗಿ, ನ್ಯಾಯಾಲಯದ ಆದೇಶ ಪಾಲಿಸಲು 3 ತಿಂಗಳ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಈ ವಿಷಯದಲ್ಲಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಈ ವಿಷಯ ಹೇಳುವ ಬದಲು ಇದೀಗ ಈ ರೀತಿ ಹೇಳುತ್ತಿರುವುದೇಕೆ. ಇಂತಹ ಅಧಿಕಾರ ನಿಮಗೆ ಎಲ್ಲಿದೆ, ನ್ಯಾಯಾಲಯದ ಆದೇಶ ಪಾಲಿಸಲು ನಿಮಗೆ ಇಚ್ಛೆ ಇದ್ದಂತೆ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ತಾವು ನಡೆದಿದ್ದೇ ದಾರಿ ಎಂದು ಅವರು ಭಾವಿಸಿಕೊಂಡಂತೆ ಕಾಣಿಸುತ್ತಿದೆ. ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅಧಿಕಾರಿಗಳಿಗೆ ಹೇಳಿಕೊಡಿ’ ಎಂದು ಸರ್ಕಾರಿ ವಕೀಲರಿಗೆ ಪೀಠ ತಿಳಿಸಿತು.

ರೋಹಿಣಿ ಸಿಂಧೂರಿ ಮತ್ತು ತಹಶೀಲ್ದಾರ್ ಕೆ.ಆರ್.ರಕ್ಷಿತ್ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಮಾರ್ಚ್ 8ರ ವಿಚಾರಣೆ ವೇಳೆ ಖುದ್ದು ಹಾಜರಿರಬೇಕು ಎಂದು ಪೀಠ ಆದೇಶಿಸಿತು.

ಮೈಸೂರಿನ ಚಾಮುಂಡಿ ಬೆಟ್ಟದ ಪಕ್ಕದಲ್ಲಿರುವ ಕುರುಬರಹಳ್ಳಿಯಲ್ಲಿ ಅಶೋಕ್ ಹಾಗೂ ಇತರರು ಬಿ ಖರಾಬ್ ಜಮೀನು ಖಾತೆಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಪೀಠ, ಖಾತೆ ಮಾಡಿಕೊಡುವಂತೆ 2020ರ ಜೂನ್ 19ರಂದು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.