ADVERTISEMENT

ಗೆಲ್ಲುವ ಸಾಧ್ಯತೆ ಆಧಾರದ ಮೇಲೆ ಸೀಟು ಹಂಚಿಕೆ: ಸಿದ್ದರಾಮಯ್ಯ

ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿ ಬರೆದಿಟ್ಟುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:17 IST
Last Updated 21 ಫೆಬ್ರುವರಿ 2019, 19:17 IST
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು– ಪ್ರಜಾವಾಣಿ ಚಿತ್ರ
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಗೆಲ್ಲುವ ಸಾಧ್ಯತೆಯ ಆಧಾರದ ಮೇಲೆ ಜೆಡಿಎಸ್– ಕಾಂಗ್ರೆಸ್ ಲೋಕಸಭಾ ಸೀಟು ಸೀಟು ಹಂಚಿಕೆ ನಡೆಯಲಿದೆ. ನಮಗಿಷ್ಟು ಅವರಿಗಿಷ್ಟು ಎಂದು ಹಂಚಿಕೊಳ್ಳುವುದಿಲ್ಲ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಸೀಟು ಹಂಚಿಕೆ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘12 ಸೀಟುಗಳು ಬೇಕು ಎಂದು ಸಚಿವ ರೇವಣ್ಣ ಹೇಳಿಕೆ ನೀಡಿದ್ದಾರೆ. ಸೀಟು ಹಂಚಿಕೆ ಕುರಿತು ದೇವೇಗೌಡರೊಂದಿಗೆ ಚರ್ಚೆ ನಡೆಸಲಾಗುವುದು. ಇದೊಂದು ಸಮ್ಮಿಶ್ರ ಸರ್ಕಾರವಾಗಿದ್ದು, ಇಲ್ಲಿ ಭಿಕ್ಷೆಯ ಪ್ರಶ್ನೆ ಬರುವುದಿಲ್ಲ. ಕಾಂಗ್ರೆಸ್ ಚುನಾವಣಾ ಸಮಿತಿಯ ಒಂದು ಸಭೆ ಮಾತ್ರ ನಡೆದಿದೆ. ಪರಸ್ಪರ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಸೀಟು ಹಂಚಿಕೆ ನಡೆಯಲಿದೆ’ ಎಂದರು.

‘ಸುಮಲತಾ ಅವರು ನನ್ನನ್ನು ಭೇಟಿ ಮಾಡಿ ಮಂಡ್ಯ ಕಾರ್ಯಕರ್ತರ ಅಭಿಪ್ರಾಯದ ಬಗ್ಗೆ ಚರ್ಚೆ ನಡೆಸಿದರು. ಆ ಬಗ್ಗೆ ನೋಡೋಣ ಎಂದು ಹೇಳಿದ್ದೇನೆ. ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಮಯ ನೀಡಿದರೆ ರಾಜ್ಯಕ್ಕೆ ಪ್ರಚಾರಕ್ಕೆ ಕರೆಸಲಾಗುವುದು’ ಎಂದರು.

ADVERTISEMENT

‘ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಆಡಳಿತ ವಿರೋಧಿ ಅಲೆ ಇರುವುದರಿಂದಲೇ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ ಎಂದು ಹೇಳಿದ್ದೇನೆ. ಅಲ್ಲದೆ ಹಿಂದಿನ ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವೊಂದು ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿಲ್ಲ. ರಾಹುಲ್ ಗಾಂಧಿ ಅವರೇ ಮುಂದಿನ ಪ್ರಧಾನಿ ಬರೆದಿಟ್ಟುಕೊಳ್ಳಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.