ADVERTISEMENT

ಮುಖ್ಯ ಎಂಜಿನಿಯರ್‌ ಹುದ್ದೆಗೆ ಶಾಂತರಾಜಣ್ಣ: ಸುಪ್ರೀಂ ಆದೇಶ ಉಲ್ಲಂಘಿಸಿತೇ ಸರ್ಕಾರ?

ಮುಖ್ಯ ಎಂಜಿನಿಯರ್‌ ಹುದ್ದೆಗೆ ಶಾಂತರಾಜಣ್ಣ ವರ್ಗ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 20:08 IST
Last Updated 26 ಸೆಪ್ಟೆಂಬರ್ 2021, 20:08 IST
   

ಬೆಂಗಳೂರು: ವರ್ಗಾವಣೆಗೊಂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರಿಂಗ್‌ ಸದಸ್ಯ ಡಾ.ಎಚ್.ಆರ್‌.ಶಾಂತರಾಜಣ್ಣ ಅವರನ್ನು ಮತ್ತೆ ಅದೇ ಹುದ್ದೆಗೆ ಮರು ವರ್ಗಾವಣೆ ಮಾಡಬೇಕು ಎಂಬ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಧಿಕ್ಕರಿಸಿ ಸರ್ಕಾರವು ಅವರನ್ನು ಪ್ರಾಧಿಕಾರದಲ್ಲಿ ಹೊಸತಾಗಿ ಸೃಷ್ಟಿಸಲಾದ ಮುಖ್ಯ ಎಂಜಿನಿಯರ್‌ ಹುದ್ದೆಗೆ ವರ್ಗ ಮಾಡಿದೆ.

ಬಿಡಿಎ ಶಿವರಾಮ ಕಾರಂತ ಬಡಾವಣೆಯನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಈ ಬಡಾವಣೆಯ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ವರ್ಗ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿದ್ದ ಪೀಠ ಆ.19ರಂದು ಆದೇಶ ಮಾಡಿತ್ತು. ಈ ಆದೇಶವನ್ನು ಧಿಕ್ಕರಿಸಿ ರಾಜ್ಯ ಸರ್ಕಾರವು 2021ರ ಆ 31ರಂದು ಶಾಂತರಾಜಣ್ಣ ಅವರನ್ನು ಗೋರೂರಿನ ಹೇಮಾವತಿ ಯೋಜನಾ ವಲಯಕ್ಕೆ ವರ್ಗ ಮಾಡಿ, ಅವರ ಸ್ಥಾನಕ್ಕೆ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್‌ ವಿ.ಗೋವಿಂದರಾಜು ಅವರನ್ನು ನೇಮಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ನ ಪೀಠವು ಅಸಮಾಧಾನ ವ್ಯಕ್ತಪಡಿಸಿತ್ತು.

‘ನಮ್ಮ ಆದೇಶವನ್ನು ಧಿಕ್ಕರಿಸಿ ಶಾಂತರಾಜಣ್ಣ ಅವರನ್ನು ಬೇರೆ ಇಲಾಖೆಗೆ ವರ್ಗ ಮಾಡಲಾಗಿದೆ. ಅವರನ್ನು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಹುದ್ದೆಗೆ ಮರು ವರ್ಗ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ನ ಪೀಠವು 2021ರ ಸೆ. 7ರಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿತ್ತು. ಅವರನ್ನು ಅದೇ ಹುದ್ದೆಗೆ ಮರು ವರ್ಗ ಮಾಡುವ ಬದಲು ಸರ್ಕಾರ ಬಿಡಿಎನಲ್ಲಿ ಮುಖ್ಯ ಎಂಜಿನಿಯರ್‌ ವೃಂದ ಹೊಸ ಹುದ್ದೆಯನ್ನು ಸೃಷ್ಟಿಸಿತ್ತು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ನಿವೃತ್ತ ಮುಖ್ಯ ಎಂಜಿನಿಯರ್‌ ಒಬ್ಬರು, ‘ಸರ್ಕಾರದ ಈ ಕ್ರಮ ಸುಪ್ರೀಂ ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆ. ರಾಜಕಾರಣಿಗಳಿಂದ ಎಷ್ಟೇ ಒತ್ತಡವಿದ್ದರೂ ಅಧಿಕಾರಿಗಳು ಇಂತಹ ಆದೇಶ ಜಾರಿಗೊಳಿಸುವ ಮುನ್ನ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ತಿಳಿದುಕೊಳ್ಳಬೇಕಿತ್ತು. ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿ ಯೋಜನೆಯನ್ನು ರದ್ದುಪಡಿಸಲು ಪ್ರಭಾವಿಗಳು ಏನೇ ಪ್ರಯತ್ನ ಪಟ್ಟರೂ ಸುಪ್ರೀಂ ಕೋರ್ಟ್‌ ಅದಕ್ಕೆ ಸೊಪ್ಪು ಹಾಕಿಲ್ಲ. ಸರ್ಕಾರ ಪದೇ ಪದೇ ತನ್ನ ಆದೇಶ ಉಲ್ಲಂಘಿಸಿದರೆ ಸುಪ್ರೀಂ ಕೋರ್ಟ್‌ ಸುಮ್ಮನಿರುವ ಸಾಧ್ಯತೆ ಕಡಿಮೆ’ ಎಂದರು.

‘ಬಿಬಿಎಂಪಿ ಎಂಜಿನಿಯರ್‌ ಆಗಿದ್ದ ಪಿ. ಧನಂಜಯ ಅವರು ಬಡ್ತಿ ನೀಡದ್ದನ್ನು ಪ್ರಶ್ನಿಸಿ 1995ರಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈ ಕುರಿತು ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್‌, 3 ತಿಂಗಳ ಒಳಗೆ ಈ ಅಧಿಕಾರಿಗೆ ಬಡ್ತಿ ನೀಡುವಂತೆ ಆದೇಶಿಸಿತ್ತು. ಇದನ್ನು ಸರ್ಕಾರ ಪಾಲಿಸಿಲ್ಲ ಎಂದು ಧನಂಜಯ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಆಗ ಸುಪ್ರೀಂ ಕೋರ್ಟ್‌, ನಗರಾಭಿವೃದ್ಧಿ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಎಚ್‌. ವಾಸುದೇವನ್‌ ಅವರಿಗೆ ಒಂದು ದಿನ ಜೈಲು ಶಿಕ್ಷೆ ವಿಧಿಸಿತ್ತು’ ಎಂದು ಅವರು ನೆನಪಿಸಿಕೊಂಡರು.

‘ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ವನ್ನು ಪ್ರತಿನಿಧಿಸುವ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಅಥವಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದರ್ಜೆ ಯ ಅನೇಕ ಅಧಿಕಾರಿಗಳು ಈಗಾಗಲೇ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕೋರ್ಟ್‌ ಆದೇಶಗಳನ್ನು ತಪ್ಪಾಗಿ ಅರ್ಥೈಸುವುದನ್ನು ತಪ್ಪಿಸಲು ಹಾಗೂ ನ್ಯಾಯಾಲಯಗಳ ಆದೇಶಗಳ ಪಾಲನೆಯ ಬಗ್ಗೆ ಮೇಲ್ವಿಚಾರಣೆ ವಹಿಸಲು ನೋಡಲ್‌ ಅಧಿಕಾರಿಗಳನ್ನು ನೇಮಿಸುವಂತೆ ಸರ್ಕಾರ 2020ರ ಡಿ 17ರಂದು ಆದೇಶ ಮಾಡಿದೆ. ಆದರೂ ಪದೇ ಪದೇ ನ್ಯಾಯಾಲಯದ ಆದೇಶ ಉಲ್ಲಂಘನೆಗಳನ್ನು ನಡೆಯುತ್ತಲೇ ಇವೆ’ ಎಂದು ಇನ್ನೊಬ್ಬ ಅಧಿಕಾರಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.