ADVERTISEMENT

ಜಾತಿ ರಾಜಕೀಯದ ಕಿಡಿ

ಸಿದ್ದರಾಮಯ್ಯ– ಎಚ್‌.ಡಿ. ಕುಮಾರಸ್ವಾಮಿ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 1:24 IST
Last Updated 29 ಅಕ್ಟೋಬರ್ 2019, 1:24 IST
   

ಬೆಂಗಳೂರು/ಹುಬ್ಬಳ್ಳಿ: ಜಾತಿ ಪ್ರೀತಿ, ಜಾತ್ಯತೀತತೆ ಕುರಿತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಮಧ್ಯೆ ತೀವ್ರ ವಾಗ್ವಾದ ನಡೆದಿದೆ.

ಡಿ.ಕೆ. ಶಿವಕುಮಾರ್ ಜೆಡಿಎಸ್ಬಾವುಟ ಹಿಡಿದುಕೊಂಡ ವಿಷಯದಮೇಲಿನ ಚರ್ಚೆ ಈಗ ಜಾತಿ ರಾಜಕಾರಣದ ವಾದ–ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ತಮ್ಮ ಪಕ್ಷದ ಮುಖಂಡರ ಜತೆ ಲೋಕಾಭಿರಾಮವಾಗಿ ಮಾತನಾಡಿದ ಸಿದ್ದರಾಮಯ್ಯ, ‘ಎಲ್ಲ ಲಿಂಗಾಯತರು ಯಡಿಯೂರಪ್ಪನವರ ಜತೆಗೆ ಹಾಗೂ ಒಕ್ಕಲಿಗರೆಲ್ಲರೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಜತೆಗೆ ಮೊದಲಿನಂತೆ ಇಲ್ಲ’
ಎಂದು ಹೇಳಿದ್ದರು. ಈ ಖಾಸಗಿ ಮಾತುಕತೆಯ ವಿಡಿಯೊ ಸೋರಿಕೆಯಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ,‘ನಾನು ಹಿಂದೆ ಕೋಮುವಾದಿ ಪಕ್ಷದ ಜತೆ ಕೈಜೋಡಿಸಿದ್ದಾಗಿ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದಾರೆ. ಅವರು ಜಾತ್ಯತೀತ ವ್ಯಕ್ತಿಯಾಗಿದ್ದರೆ,ಜಾತಿ–ಧರ್ಮಗಳ ಹೆಸರುಗಳಲ್ಲೇ ಯಾಕೆ ಟೀಕೆ ಮಾಡುತ್ತಿದ್ದಾರೆ. ಅವರು ಜಾತಿವಾದಿಯೋ, ಕೋಮುವಾದಿಯೋ ಎಂಬುದು ಜನರಿಗೆ ಅರ್ಥವಾಗಿದೆ’ ಎಂದು ಕುಟುಕಿದರು.

ADVERTISEMENT

ಇದಕ್ಕೆ ಟ್ವೀಟ್‌ನಲ್ಲೇ ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ,‘ನಾನು ಜಾತಿವಾದಿ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವ ನಾನು ಅಂಬೇಡ್ಕರ್, ಗಾಂಧೀಜಿ, ಬಸವಣ್ಣ ಮತ್ತು ಕುವೆಂಪು ಚಿಂತನೆಯಿಂದ ಪ್ರೇರಿತನಾದ ಜಾತ್ಯತೀತ. ಅವರ ಚಿಂತನೆಗಳ ಫಲವೇ ನನ್ನ ಸರ್ಕಾರದ ಯೋಜನೆಗಳಾಗಿದ್ದವು.ಇದು ನನ್ನ ಜಾತಿವಿನಾಶದ ಹಾದಿ. ನಿಮ್ಮದು ಯಾವ ಹಾದಿ?’ ಎಂದು ಕೆಣಕಿದ್ದಾರೆ.

‘ರಾಜ್ಯದ ಮತದಾರರು ಜಾತಿ ಬಿಟ್ಟು ಯೋಚನೆ ಮಾಡುತ್ತಿದ್ದಾರೆ. ಜನಜಾತ್ಯತೀತರಾಗುತ್ತಿದ್ದಾರೆ ಎಂದು ಹೇಳಿದ್ದರಲ್ಲಿ ಏನು ತಪ್ಪಿದೆ?ರಾಜಕೀಯ ಪಕ್ಷಗಳು ನೈತಿಕವಾಗಿ ದಿವಾಳಿಯಾದಾಗ ಇಂತಹ ಅಪಸವ್ಯಗಳು ಹುಟ್ಟಿಕೊಳ್ಳುತ್ತವೆ. ವೈಯಕ್ತಿಕ ದಾಳಿಗಳು ನನ್ನ ಸಾಮಾಜಿಕ ಬದ್ಧತೆಯನ್ನು ಗಟ್ಟಿಗೊಳಿಸಿ, ಹೋರಾಡುವ ಹುಮ್ಮಸ್ಸನ್ನುಇಮ್ಮಡಿಗೊಳಿಸುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.

ಜೆಡಿಎಸ್ ಬಾವುಟ ಹಿಡಿದ ಡಿಕೆಶಿ

ಬೆಂಗಳೂರಿಗೆ ಬಂದ ಶಿವಕುಮಾರ್‌ ಅವರನ್ನು ಸ್ವಾಗತಿಸಲು ಸೇರಿದ್ದ ಜೆಡಿಎಸ್‌ ಕಾರ್ಯಕರ್ತರು ಆ ಪಕ್ಷದ ಬಾವುಟವನ್ನು ಅವರ ಕೈಗೆ ಕೊಟ್ಟಿದ್ದರು. ಈ ಬಗ್ಗೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯನವರ ಮನೆಯಲ್ಲಿ ನಡೆದ ಅನೌಪಚಾರಿಕ ಮಾತುಕತೆಯ ವಿಡಿಯೊ ಈಗ ಗಹನ ಚರ್ಚೆಗೆ ಗ್ರಾಸವಾಗಿದೆ.

‘ಎಲ್ಲ ಲಿಂಗಾಯತರು ಯಡಿಯೂರಪ್ಪನವರ ಜತೆಗೆ, ಎಲ್ಲ ಒಕ್ಕಲಿಗರೂ ಜೆಡಿಎಸ್‌ ಜತೆಗೆ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪಿರಿಯಾಪಟ್ಟಣದ ಮಾಜಿ ಶಾಸಕ ಕೆ. ವೆಂಕಟೇಶ್‌, ‘ಇದನ್ನು ನಾವು ಎನ್‌ಕ್ಯಾಷ್ ಮಾಡಿಕೊಳ್ಳಬೇಕು. ಆದರೆ, ಶಿವಕುಮಾರ್‌ ಜೆಡಿಎಸ್‌ ಬಾವುಟ ಹಿಡಿಯುತ್ತಾರೆ ಎಂದರೆ ಏನರ್ಥ’ ಎಂದಿದ್ದರು. ಆಗ, ‘ಕರೆಕ್ಟ್‌, ಜೆಡಿಎಸ್ ಸಹವಾಸವೇ ಬೇಡ ಎಂದು ಮೊನ್ನೆ ಹೇಳಿದ್ದೆ; ಈಗ ಶಿವಕುಮಾರ್ ಜೆಡಿಎಸ್‌ ಬಾವುಟ ಹಿಡಿಯುತ್ತಾರೆ’ ಎಂದು ಸಿದ್ದರಾಮಯ್ಯ ಅತೃಪ್ತಿ ವ್ಯಕ್ತಪಡಿಸಿದ್ದರು.

‘ಸಿದ್ದರಾಮಯ್ಯ ಹಾಗೆ ಹೇಳಿರಲಾರರು’ ಎಂದು ಶಿವಕುಮಾರ್‌ ಸಮಜಾಯಿಷಿ ನೀಡಿದ್ದಾರೆ.

*****

ಉತ್ತಮ ಕೆಲಸ ಮಾಡುತ್ತಿರುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು ಎಂಬ ಕಾರಣಕ್ಕೆ ನಮ್ಮನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರಿಗೆ ಅಭಿನಂದನೆ

-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಉಪ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುವ ಸನ್ನಿವೇಶ ಎದುರಾದರೆ ಅಂತಹ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನಿಸಲಾಗುವುದು
-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.