ADVERTISEMENT

ಬಿಜೆಪಿ ಮುಖಂಡರು ಒಣಜಂಭ ಬಿಡಬೇಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 17:20 IST
Last Updated 21 ಅಕ್ಟೋಬರ್ 2018, 17:20 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ನನ್ನ ಬಗ್ಗೆ ಮಾತನಾಡುವ ನೈತಿಕತೆ ಶೋಭಾ ಕರಂದ್ಲಾಜೆಗೆ ಇದೆಯೇ? ಚುನಾವಣೆಯಲ್ಲಿ ಆಕೆ ಸೋತಿಲ್ಲವೇ? ಅವಳ ಹಲ್ಲೇನು ಬಿಗಿಯಾಗಿವೆಯೇ?’ ಎಂದು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಲ್ಲಿ ಭಾನುವಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

’ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಸಿದ್ದರಾಮಯ್ಯ ಹಲ್ಲಿಲ್ಲದ ಹಾವು, ಅಂತಹ ಹಾವಿಗೆ ಯಾರೂ ಹಾಲು ಹಾಕುವುದಿಲ್ಲ' ಎಂಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ನಾಯಕರು ಒಣಜಂಭ ಬಿಡಬೇಕು. ವೋಟುಗಳು ಯಡಿಯೂರಪ್ಪ, ಶೋಭಾ ಜೇಬಿನಲ್ಲಿವೆಯೇ? ಸರ್ಕಾರ ಬೀಳಿಸುವ ಸಂಬಂಧ ಬಿಜೆಪಿ ಮುಖಂಡರು ನೀಡಿದ ಹಲವು ಡೆಡ್‌ಲೈನ್‌ಗಳು ಈಗಾಗಲೇ ಮುಗಿದಿವೆ. ಮೈತ್ರಿ ಸರ್ಕಾರ ಸುಭದ್ರವಾಗಿದೆ’ ಎಂದರು.

ADVERTISEMENT

‘ಐದೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಮಂಡ್ಯ, ರಾಮನಗರ ಹಾಗೂ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಜಮಖಂಡಿ ಹಾಗೂ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ. ಎಲ್ಲ ಕ್ಷೇತ್ರಗಳ ಪ್ರಚಾರಕ್ಕೆ ನಾನು ಹೋಗುತ್ತೇನೆ. ಅ.22ರಂದು ಬಳ್ಳಾರಿಯಲ್ಲಿ ಪ್ರಚಾರ ಆರಂಭಿಸುತ್ತೇನೆ’ ಎಂದು ಹೇಳಿದರು

ದಸರೆಯಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ನಿರ್ಲಕ್ಷಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ‘ದಸರಾ ಮುಗಿದ ಅಧ್ಯಾಯ. 2019ರ ದಸರೆಯಲ್ಲಿ ನೋಡೋಣ. ನುಂಗಿದ ತುತ್ತು ರುಚಿ ಹತ್ತುವುದಿಲ್ಲ. ಹೀಗಾಗಿ, ಈ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.