ADVERTISEMENT

ಪಿಯು ಕಾಲೇಜುಗಳಲ್ಲಿ ‘ಸೂರ್ಯ ನಮಸ್ಕಾರ’: ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ

ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ

ರಾಜೇಶ್ ರೈ ಚಟ್ಲ
Published 26 ಡಿಸೆಂಬರ್ 2021, 18:40 IST
Last Updated 26 ಡಿಸೆಂಬರ್ 2021, 18:40 IST
   

ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಜ. 1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಅಲ್ಲದೆ, ಜ 26ರಂದು ‘ಸಂಗೀತ ದೊಂದಿಗೆ ಸೂರ್ಯ ನಮಸ್ಕಾರ’ (ಮ್ಯೂಸಿಕಲ್‌ ಪರ್ಫಾರ್ಮೆನ್ಸ್‌ ಆನ್‌ ಸೂರ್ಯ ನಮಸ್ಕಾರ) ಆಯೋಜಿಸ ಬೇಕು ಎಂದೂ ತಿಳಿಸಿದೆ.

75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ‘ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿ.16 ರಂದು ಪತ್ರ ಬರೆದು ಸೂಚಿಸಿತ್ತು. ಅದರಂತೆ, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಕ್ರೋಡೀಕೃತ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು (ಶೈಕ್ಷಣಿಕ) ತಿಳಿಸಿದ್ದಾರೆ.

‘ಸೂರ್ಯ ನಮಸ್ಕಾರವುಯೋಗಾಸನದ 10 ಭಂಗಿಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ವೃದ್ದಿಗೆ ಹಾಗೂ ಮನೋಬಲ ಹೆಚ್ಚಿಸುವುದಕ್ಕೆ ನೆರವಾಗಲಿದೆ. ಕೇಂದ್ರದ ಸೂಚನೆಯಂತೆ ಜ. 1ರಿಂದ ಫೆ. 7ರವರೆಗಿನ ಒಟ್ಟು 38 ದಿನಗಳ ಪೈಕಿ, 21 ದಿನ ಬೆಳಗ್ಗಿನ ಅಸೆಂಬ್ಲಿ ಅವಧಿಯಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬೇಕಿದೆ. ಪ್ರತಿ ದಿನ 13 ಸೂರ್ಯ ನಮಸ್ಕಾರಗಳಂತೆ ಒಟ್ಟು 273 (21 ದಿನಗಳಲ್ಲಿ) ಸೂರ್ಯ ನಮಸ್ಕಾರಗಳನ್ನು ಮಾಡಿದ ವರಿಗೆ ಇ–ಪ್ರಮಾಣಪತ್ರ ನೀಡುವುದಾಗಿ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್‌ ತಿಳಿಸಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಉಪನ್ಯಾಸಕರ ಅಪಸ್ವರ: ಆದರೆ, ಪದವಿ ಪೂರ್ವ ಕಾಲೇಜುಗಳಲ್ಲಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮಕ್ಕೆ ಉಪನ್ಯಾಸಕರ ವಲಯದಿಂದ ವಿರೋಧ ವ್ಯಕ್ತವಾಗಿದೆ.

‘75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೂ ಸೂರ್ಯ ನಮಸ್ಕಾರಕ್ಕೂ ಏನು ಸಂಬಂಧ ವಿದೆ? ಸ್ವಾತಂತ್ರ್ಯ ಹೋರಾಟಗಾರರ ಜೀವನಗಾಥೆ ತಿಳಿಸುವ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಅರಳಿಸುವಂಥ ಕಾರ್ಯಕ್ರಮಗಳ ಬದಲು ಸೂರ್ಯ ನಮಸ್ಕಾರದಂಥ ಆಚರಣೆಗಳನ್ನು ಜಾರಿ ಮಾಡುವುದು ಅವಿವೇಕದ ಪರಮಾವಧಿ’ ಎಂದು ಹೆಸರು ಹೇಳಲಿಚ್ಚಿಸದ ಉಪನ್ಯಾಸಕರೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾಪ್ರಭುತ್ವಕ್ಕೆ ಕುತ್ತು: ‘ಉಪನ್ಯಾಸಕರ ಸಂಘಟನೆಗಳು, ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಈ ಬಗ್ಗೆ ಧ್ವನಿ ಎತ್ತಬೇಕು. ಸೂರ್ಯ ನಮಸ್ಕಾರ ಅಲ್ಲವೇ; ಹಾಳಾಗಿ ಹೋಗಲಿ ಎಂದು ಕೈಕಟ್ಟಿ ಕುಳಿತರೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಕುತ್ತು ಬರುವುದರಲ್ಲಿ ಸಂಶಯವಿಲ್ಲ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದ್ದಾರೆ.

ಕೇಂದ್ರದ ಪತ್ರದಲ್ಲಿ ಏನಿದೆ?

‘ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್‌ (ಎನ್‌ವೈಎಸ್‌ಎಫ್‌) ಡಿ. 9ರಂದು ಪತ್ರ ಬರೆದು 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಆಯೋಜಿಸುವ ಬಗ್ಗೆ ತಿಳಿಸಿದೆ. 30 ರಾಜ್ಯಗಳಲ್ಲಿ 30 ಸಾವಿರ ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ 75 ಕೋಟಿ ಸೂರ್ಯ ನಮಸ್ಕಾರ ಮಾಡಿಸಲು ಫೆಡರೇಷನ್‌ ನಿರ್ಧರಿಸಿದೆ.

ಜ 26ರಂದು ತ್ರಿವರ್ಣ ಧ್ವಜದ ಎದುರು ‌ಸಂಗೀತದೊಂದಿಗೆ ಸೂರ್ಯ ನಮಸ್ಕಾರದ ಮೂಲಕ ತಾಯಿ ಭಾರತಾಂಬೆಗೆ ಭಾವಪೂರ್ಣ ನಮನ ಸಲ್ಲಿಸಬೇಕು ಎಂದೂ ಫೆಡರೇಷನ್‌ ತಿಳಿಸಿದೆ. ಹೀಗಾಗಿ, ನಿಮ್ಮ ವ್ಯಾಪ್ತಿಯಲ್ಲಿರುವ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಿರ್ದೇಶನ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು’ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.