ADVERTISEMENT

ಕೆಎಸ್‌ಬಿಸಿಎಲ್‌ನಿಂದ‌ ಹೊಸದಾಗಿ ಮದ್ಯ ಖರೀದಿಗೆ ಅವಕಾಶ ಕೊಡಿ: ಮಾರಾಟಗಾರರ ಮನವಿ

ಸನ್ನದು ಶುಲ್ಕ ಪಾವತಿಗೆ ಸಮಯಾವಕಾಶ ಕೋರಿ ಸಿ.ಎಂಗೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 20:33 IST
Last Updated 13 ಮೇ 2020, 20:33 IST
ಮದ್ಯದಂಗಡಿಯೊಂದರ ಎದರು ಜನರ ಸಾಲು
ಮದ್ಯದಂಗಡಿಯೊಂದರ ಎದರು ಜನರ ಸಾಲು    

ಬೆಂಗಳೂರು: ‘ಷರತ್ತು ವಿಧಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಎಲ್ಲಾ ರೀತಿಯ ಸನ್ನದುದಾರರಿಗೂ ಕೆಎಸ್‌ಬಿಸಿಎಲ್‌ನಿಂದ‌(ಕರ್ನಾಟಕ ಪಾನೀಯ ನಿಗಮ) ಹೊಸದಾಗಿ ಮದ್ಯ ಖರೀದಿಗೆ ಅವಕಾಶ ನೀಡಬೇಕು’ ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

ಸಿಎಲ್– 2 (ವೈನ್‌ಶಾಪ್‌ಗಳು, ಎಂಆರ್‌ಪಿ ಔಟ್‌ಲೆಟ್‌ಗಳು) ಮತ್ತು ಸಿಎಲ್‌ 11– ಸಿ (ಎಂಎಸ್‌ಐಎಲ್‌ ಮದ್ಯದಂಗಡಿಗಳು) ಸನ್ನದು ಹೊಂದಿರುವ ಮದ್ಯದ ಅಂಗಡಿಗಳ ಮಾಲೀಕರಿಗೆ ಮಾತ್ರ ಮದ್ಯ ಮಾರಾಟ ಮತ್ತು ಮದ್ಯ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬುಧವಾರ ಭೇಟಿ ಮಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ ಹೆಗ್ಡೆ ಅವರು, ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆ ವಿವರಿಸಿದರು.

ADVERTISEMENT

‘ಅಂಗಡಿಗಳಲ್ಲಿರುವ ದಾಸ್ತಾನು ಮುಗಿಯುವ ತನಕ ಮಾತ್ರ ತೆರೆಯಬಹುದು ಹಾಗೂ ಪಾನೀಯ ನಿಗಮದಿಂದ ‌ಹೊಸದಾಗಿ ಮದ್ಯ ಖರೀದಿಸಲುಅವಕಾಶ ನೀಡದೇ ಇರುವುದರಿಂದ ಸಮಸ್ಯೆಯಾಗಿದೆ. ಸಿಎಲ್‌–2 ಮತ್ತು ಸಿಎಲ್‌ 11–ಸಿ ಸನ್ನದುದಾರರನ್ನು ಬಿಟ್ಟು ಉಳಿದ ಸನ್ನದುದಾರಿಕೆ ಹೊಂದಿರುವ ಅಂಗಡಿಗಳಲ್ಲೇ ಹೆಚ್ಚಿನ ಸಂಖ್ಯೆಯ ನೌಕರರಿದ್ದಾರೆ. ವಿದ್ಯುತ್ ಶುಲ್ಕ, ಕಟ್ಟಡ ಬಾಡಿಗೆ ಕೂಡ ಜಾಸ್ತಿ ಇದೆ. ನಿರ್ವಹಣೆ ಮಾಡಲು ಸಾಧ್ಯವಾಗದೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ವಿವರಿಸಿದರು.‌

‘ಲಾಕ್‌ಡೌನ್ ನಂತರಸನ್ನದು ಶುಲ್ಕವಾಗಿ₹70 ಕೋಟಿ, ₹350 ಕೋಟಿ ಲಾಭಾಂಶ, ₹12.13 ಕೋಟಿ ವಿದ್ಯುತ್ ಶುಲ್ಕ, ನೌಕರರ ಸಂಬಳ ₹315 ಕೋಟಿ, ಕಟ್ಟಡ ಬಾಡಿಗೆ ₹ 34 ಕೋಟಿ ಸೇರಿ ಒಟ್ಟಾರೆ ₹818.97 ಕೋಟಿ ನಷ್ಟವಾಗಿರುವ ಅಂದಾಜಿದೆ. ಹೀಗಾಗಿ, ಮದ್ಯದ ಅಂಗಡಿ ಮಾಲೀಕರ ನೆರವಿಗೆ ಸರ್ಕಾರ ಬರಬೇಕು. ಒಂದು ತಿಂಗಳ ಸನ್ನದು ಶುಲ್ಕವನ್ನು ಮುಂದಿನ ತಿಂಗಳಿಗೆ ಹೊಂದಾಣಿಕೆ ಮಾಡಿಸಬೇಕು. 2020–21ನೇ ಸಾಲಿನ ಶುಲ್ಕ ಪಾವತಿಗೆ 4 ಕಂತುಗಳನ್ನು ನೀಡಬೇಕು, ಕಟ್ಟಡ ಮತ್ತು ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.