ADVERTISEMENT

ಎಲ್‌.ಎಲ್‌.ಬಿ ಪ್ರಶ್ನೆಪತ್ರಿಕೆ ಬಹಿರಂಗ: ಜ.6ಕ್ಕೆ ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 16:48 IST
Last Updated 26 ಡಿಸೆಂಬರ್ 2018, 16:48 IST

ಬೆಂಗಳೂರು: ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎಲ್‌.ಎಲ್‌ಬಿ. ಕೋರ್ಸ್‌ನ ಕಂಪನಿ ಲಾ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗವಾಗಿದ್ದರಿಂದ ಬುಧವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಜ.6ಕ್ಕೆ ಮುಂದೂಡಲಾಗಿದೆ.

‘ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಕಾನೂನು ಕಾಲೇಜು ಒಂದರ ಸಿಬ್ಬಂದಿ ನಿರ್ಲಕ್ಷ್ಯದಿಂದ ಕಂಪನಿ ಲಾ ವಿಷಯದ ಪ್ರಶ್ನೆಪತ್ರಿಕೆಗಳಿದ್ದ ಬಂಡಲ್‌ ಅನ್ನು ಸೋಮವಾರವೇ (ಡಿ.24) ಬಿಚ್ಚಿದ್ದರು. ಬಳಿಕ ತಪ್ಪನ್ನು ವಿಶ್ವವಿದ್ಯಾಲಯದ ಗಮನಕ್ಕೆ ತಂದರು. ಇದನ್ನು ತಾಂತ್ರಿಕ ಲೋಪವೆಂದು ಪರಿಗಣಿಸಿವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಿದ್ದೇವೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಜಿ.ಬಿ.ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಯಾವ ಜಿಲ್ಲೆಯ, ಯಾವ ಕಾನೂನು ಕಾಲೇಜಿನ ಸಿಬ್ಬಂದಿಯಿಂದ ಈ ಲೋಪವಾಗಿದೆ ಎಂಬ ಮಾಹಿತಿ ನೀಡಲು ಅವರು ನಿರಾಕರಿಸಿದರು. ಪತ್ರಿಕೆ ಬಹಿರಂಗದ ತನಿಖೆ ನಡೆಸಿ, ಶಿಸ್ತುಕ್ರಮ ಜರುಗಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ.

ADVERTISEMENT

ಪರೀಕ್ಷೆ ಮುಂದೂಡಿಕೆಯ ಮಾಹಿತಿಯನ್ನು ವಿಶ್ವವಿದ್ಯಾಲಯದ ವ್ಯಾಪ್ತಿಯ 92 ಕಾಲೇಜುಗಳಿಗೆ ದೂರವಾಣಿ ಮತ್ತು ಇ–ಮೇಲ್‌ ಮೂಲಕ ತಿಳಿಸಲಾಯಿತು. ಮಂಗಳವಾರ ಕ್ರಿಸ್‌ಮಸ್‌ ರಜೆ ಇದ್ದ ಕಾರಣ, ಎಲ್ಲ ಪರೀಕ್ಷಾರ್ಥಿಗಳಿಗೆ ಈ ವಿಷಯ ತಿಳಿಯಲಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬುಧವಾರ ಬಂದು ಮರಳಬೇಕಾಯಿತು.

ಪರೀಕ್ಷಾ ದಿನಾಂಕ ಬದಲಾವಣೆಗೆ ಒತ್ತಾಯ: ಕಾನೂನು ವಿಶ್ವವಿದ್ಯಾಲಯ ಕಂಪನಿ ಲಾ ವಿಷಯದ ಪರೀಕ್ಷೆಯನ್ನು ಜ.6ರಂದು (ಭಾನುವಾರ) ನಡೆಸಲು ನಿರ್ಧರಿಸಿದೆ. ಅದೇ ದಿನ, ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಎಂಜಿನಿಯರಿಂಗ್‌ ಸರ್ವಿಸಸ್‌ನ ಪೂರ್ವಭಾವಿ ಪರೀಕ್ಷೆ ನಡೆಸುತ್ತಿದೆ. ‘ಕಾನೂನು ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಕೆಲವರು ಯುಪಿಎಸ್ಸಿಯ ಪರೀಕ್ಷೆಗೂ ತಯಾರಿ ಮಾಡಿಕೊಂಡಿದ್ದಾರೆ. ಹಾಗಾಗಿ ವಿಶ್ವವಿದ್ಯಾಲಯವು ಪರೀಕ್ಷೆ ದಿನ ಬದಲಾಯಿಸಬೇಕು’ ಎಂದು ಕೆಲವು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಕಚೇರಿಗೆ ಕರೆ ಮಾಡಿ, ಅಳಲು ಹೇಳಿಕೊಂಡರು.

‘ಕಾನೂನು ಓದಲು ಬಂದವರು ವಕೀಲರಾಗಲು ಆದ್ಯತೆ ನೀಡಲಿ. ನಾವು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿರ್ದೇಶನದಂತೆ ವಾರ್ಷಿಕ ವೇಳಾಪಟ್ಟಿ ಹಾಕಿಕೊಂಡಿದ್ದೇವೆ. ಅದು ಅಸ್ತವ್ಯಸ್ತ ಆಗಬಾರದೆಂದೇ ಭಾನುವಾರ ಪರೀಕ್ಷೆ ನಡೆಸುತ್ತಿದ್ದೇವೆ. ಯುಪಿಎಸ್ಸಿ ಪರೀಕ್ಷೆ ಇದೆಯಂದು ನಾವು ಮತ್ತೆ ದಿನಾಂಕ ಬದಲಾಯಿಸುವುದಿಲ್ಲ’ ಎಂದು ಜಿ.ಬಿ.ಪಾಟೀಲ ಸ್ಪಷ್ಟಪಡಿಸಿದರು.

ಜನವರಿ 6ರಂದು ಪರೀಕ್ಷೆ

ಡಿ.26ರ ಮಧ್ಯಾಹ್ನ 2ರಿಂದ 5ರ ವರೆಗೆ ನಡೆಯಬೇಕಿದ್ದ 3 ವರ್ಷದ ಎಲ್‌.ಎಲ್‌.ಬಿ. ಕೋರ್ಸ್‌ನ(2ನೇ ಸೆಮಿಸ್ಟರ್‌) ಹಾಗೂ 5 ವರ್ಷದ ಬಿ.ಎ.ಎಲ್‌.ಎಲ್‌.ಬಿ. ಕೋರ್ಸ್‌ನ(6ನೇ ಸೆಮಿಸ್ಟರ್‌) ಕಂಪನಿ ಲಾ ವಿಷಯದ ಪರೀಕ್ಷೆಯನ್ನು ಜನವರಿ 6ರ ಬೆಳಿಗ್ಗೆ 9.30ರಿಂದ 12.30ರ ವರೆಗೆ ನಡೆಸಲಾಗುತ್ತದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.