ADVERTISEMENT

ವಿವೇಕಾನಂದ ಯುವಶಕ್ತಿ ಸಂಘ: ಇದೇ 23 ರಂದು ಬೊಮ್ಮಾಯಿ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 18:33 IST
Last Updated 19 ಮಾರ್ಚ್ 2023, 18:33 IST

ಬೆಂಗಳೂರು: ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಮಾದರಿಯಲ್ಲಿ ಯುವಕರನ್ನು ಒಗ್ಗೂಡಿಸಿ, ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಲು ಉತ್ತೇಜಿಸುವ ಗುರಿ ಹೊಂದಿರುವ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಗುರುವಾರ (ಮಾರ್ಚ್‌ 23) ಚಾಲನೆ ನೀಡಲಿದ್ದಾರೆ.

ಯೋಜನೆಯ ಪ್ರಗತಿ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಭಾನುವಾರ ಸಭೆ ನಡೆಸಿದ ಮುಖ್ಯಮಂತ್ರಿ, ಯೋಜನೆಗೆ ಚಾಲನೆ ನೀಡಲು ಅಗತ್ಯ ಸಿದ್ಧತೆ ಆರಂಭಿಸುವಂತೆ ಸೂಚಿಸಿದರು.

ರಾಜ್ಯದಲ್ಲಿ ಒಟ್ಟು 5,951 ಗ್ರಾಮ ಪಂಚಾಯಿತಿಗಳಿವೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ಎರಡು ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಲು ಮಾರ್ಚ್‌ 8 ರಂದು ಆದೇಶ ಹೊರಡಿಸಲಾಗಿದೆ. ಈವರೆಗೆ 6,509 ಗುಂಪುಗಳನ್ನು ರಚಿಸಲಾಗಿದೆ. 1,754 ಗುಂಪುಗಳಿಗೆ ತಲಾ ₹ 10,000 ದಂತೆ ಒಟ್ಟು ₹ 1.75 ಕೋಟಿ ಸುತ್ತುನಿಧಿ ಪಾವತಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರ ನೀಡಿದರು.

ADVERTISEMENT

ಜಂಟಿ ಬಾಧ್ಯತಾ ಗುಂಪುಗಳಿಗೆ ಸಾಲ ಮಂಜೂರು ಮಾಡಲು 100 ಮಾದರಿ ಪ್ರಸ್ತಾವಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲಾಗಿದೆ. ಒಟ್ಟು 551 ಯೋಜನೆಗಳನ್ನು ಅನುಮೋದನೆ ಮತ್ತು ಸಾಲ ಮಂಜೂರಾತಿಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

‘ಜಂಟಿ ಬಾಧ್ಯತಾ ಗುಂಪುಗಳ ರಚನೆ ಮತ್ತು ಸುತ್ತುನಿಧಿ ಹಂಚಿಕೆಗೆ ಅಧಿಕಾರಿಗಳ ಕೆಲಸ ಮುಗಿಯುವುದಿಲ್ಲ. ಪ್ರತಿ ಗುಂಪಿನ ಚಟುವಟಿಕೆಯನ್ನು ಪರಿಶೀಲಿಸಬೇಕು. ಅವರ ಯೋಜನೆಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಿ ಸಾಲ ಪಡೆಯಲು ನೆರವಾಗಬೇಕು. ಲಾಭದಾಯಕ ಯೋಜನೆಗಳಿದ್ದರೆ ₹ 5 ಲಕ್ಷದ ಮಿತಿಗಿಂತಲೂ ಹೆಚ್ಚಿನ ಸಾಲ ಪಡೆಯಲು ಸಹಾಯ ಮಾಡಬೇಕು’ ಎಂದು ಬೊಮ್ಮಾಯಿ ಸೂಚಿಸಿದರು.

ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಕೆ.ಸಿ.ನಾರಾಯಣ ಗೌಡ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ‍ಪ್ರಸಾದ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌, ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.