ADVERTISEMENT

ಟಿಕೆಟ್‌ ಆಕಾಂಕ್ಷಿಯೊಬ್ಬರಿಂದ ನನ್ನ ವಿರುದ್ಧ ಷಡ್ಯಂತ್ರ: ಶೋಭಾ ಕರಂದ್ಲಾಜೆ ಆರೋಪ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 17:04 IST
Last Updated 25 ಫೆಬ್ರುವರಿ 2019, 17:04 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಉಡುಪಿ: ನನಗೆ ಹಣಬಲ, ಬಾಹುಬಲ, ಜಾತಿ ಬಲ ಹಾಗೂ ಯಾರು ಬೆಂಬಲ ಕೊಡುವವರಿಲ್ಲ ಎಂಬ ಕಾರಣಕ್ಕಾಗಿ ಟಿಕೆಟ್‌ ಕೇಳುವ ಯಾರೋ ಒಬ್ಬರು ನನಗೆ ಅವಮಾನ ಮಾಡುತ್ತಿದ್ದಾರೆ. ನನ್ನ ವಿರುದ್ಧ ಪಕ್ಷದ ಕಾರ್ಯಕರ್ತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಉಡುಪಿಯಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ‘ಗೋ ಬ್ಯಾಕ್‌ ಶೋಭಾ ಅಭಿಯಾನ’ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇವಲ ಟಿಕೆಟ್‌ನ ಆಸೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಸ್ವಾರ್ಥದಿಂದ 10ರಿಂದ 20 ಹುಡುಗರ ಗುಂಪು ಕಟ್ಟಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೆದರುವ ಪ್ರಶ್ನೆಯೇ ಇಲ್ಲ. ಈ ರೀತಿ ಧ್ವನಿ ಎತ್ತುತ್ತಿರುವವರು ಪಕ್ಷಕ್ಕೆ ಯಾವ ಕೊಡುಗೆ ನೀಡಿದ್ದಾರೆ?. ನಾನು 25 ವರ್ಷದಿಂದ ಪಕ್ಷಕ್ಕಾಗಿ ಮಣ್ಣು ಹೊತ್ತಿದ್ದೇನೆ. ರಾಜ್ಯದಲ್ಲೆಲ್ಲಾ ಓಡಾಡಿದ್ದೇನೆ. ನೀವು ಏನೂ ಮಾಡಿದ್ದೀರಿ ಎನ್ನುವ ಕುರಿತಂತೆ ನನ್ನ ಜೊತೆ ಚರ್ಚೆಗೆ ಬನ್ನಿ. ಆಮೇಲೆ ಟಿಕೆಟ್‌ ಕೇಳಿ ಎಂದು ಪರೋಕ್ಷವಾಗಿ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಟಾಂಗ್‌ ನೀಡಿದರು.

ನಾನು ಸಂಸದೆ ಆದ ಬಳಿಕ ಉಡುಪಿಗೆ ಪಾಸ್‌ ಪೋರ್ಟ್‌ ಕಚೇರಿ ಬಂದಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಕ್ಷಣೆ ಸೇರಿದಂತೆ ವಿವಿಧ ಸವಲತ್ತುಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸಿಕೊಡುವ ರಾಜ್ಯದ ಏಕೈಕ ಸಖಿ ಕೇಂದ್ರವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಕಳೆದ 70 ವರ್ಷಗಳಲ್ಲಿ ಉಡುಪಿ–ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಇರಲಿಲ್ಲ. ಅದನ್ನು ನಿರ್ಮಿಸಿಕೊಟ್ಟಿದ್ದೇನೆ. ಆದರೆ, ಈ ಕ್ಷೇತ್ರದಲ್ಲಿ ಹಿಂದೆ ಗಂಡಸು ಸಂಸದರಾಗಿದ್ದವರು ಯಾಕೆ ಇದನೆಲ್ಲ ಮಾಡಿಲ್ಲ ಎಂದು ಸವಾಲು ಹಾಕಿದರು.

ADVERTISEMENT

ಜಿಟಿಡಿಸಿ ಕಟ್ಟಡ ಹಾಗೂ ರಾಮಕೃಷ್ಣ ಹೆಗ್ಡೆ ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದೆ. ಹುಬ್ಬಳ್ಳಿ–ಧಾರವಾಡ ಹಾಗೂ ಚಿಕ್ಕಮಗಳೂರು–ಉಡುಪಿ ಜಿಲ್ಲೆಗೆ ಕೇಂದ್ರ ರಸ್ತೆ ಸಾರಿಗೆ ನಿಧಿಯಿಂದ 550 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಎರಡು ಜಿಲ್ಲೆಯ ಎಲ್ಲ ಮುಖ್ಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನಾಗಿ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರ ಡಿಪಿಆರ್‌ ಕೂಡ ಸಿದ್ಧವಾಗಿದೆ. ಓರ್ವ ಮಹಿಳೆಯಾಗಿ ನಾನು ಇಷ್ಟೆಲ್ಲಾ ಮಾಡಿದ್ದೇನೆ. ನಿಮ್ಮ ಕೈಯಲ್ಲಿ ಆಗದ ಕೆಲಸವನ್ನು ನಾನು ಮಾಡಿದ್ದೇನೆ. ಟಿಕೆಟ್‌ನ ಆಸೆಗಾಗಿ ನಾನು ಇಷ್ಟೆಲ್ಲಾ ಮಾಡಿದ್ದಲ್ಲ ಎಂದು ಹೇಳಿದರು.

ಬೆಂಗಳೂರು ಏರ್‌ ಶೋ ಸ್ಥಳದಲ್ಲಿ ಬೆಂಕಿ ಅವಘಡಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ- ವಿವಿಧ ಇಲಾಖೆಯ ವತಿಯಿಂದ ಏರ್‌ ಶೋ ಆಯೋಜಿಸಲಾಗಿತ್ತು. ಇದಕ್ಕೆ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ರಾಜ್ಯ ಸರ್ಕಾರದ ಬೇಜವಾಬ್ದಾರಿತನವೇ ಅವಘಡಕ್ಕೆ ಕಾರಣ ಎಂದು ದೂರಿದರು.

ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತಿದೆ. ಇದಕ್ಕೆ ದೇಶ ವಿದೇಶದಿಂದ ಜನ ಬರುತ್ತಾರೆ. ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ರಕ್ಷಣೆ ಕೊಡಲು ಆಗದಿದ್ದರೆ ಏನಾರ್ಥ. ಪೊಲೀಸ್‌, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿತ್ತು. ಕಾಶ್ಮೀರದ ಫುಲ್ವಾಮಾ ಘಟನೆಗೂ ಇದಕ್ಕೂ ಏನಾದರೂ ಲಿಂಕ್‌ ಇದೇಯಾ?. ದೇಶದ್ರೋಹಿಗಳು ಈ ಕೃತ್ಯದಲ್ಲಿ ತೊಡಗಿರಬಹುದಾ?. ಈ ಎಲ್ಲಾ ಆಯಾಮಗಳಲ್ಲಿ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಒಂದು ಸ್ಥಳದಲ್ಲಿ ಕೆಲಸ ಮಾಡಲು ಈ ಸರ್ಕಾರ ಬಿಡುತ್ತಿಲ್ಲ. ಹಿಂದಿನ ಸರ್ಕಾರವೂ ಬಿಟ್ಟಿಲ್ಲ. ಪ್ರಸ್ತುತ ಜಿಲ್ಲೆಗೆ ಮಹಿಳಾ ಎಸ್ಪಿ ನಿಯೋಜನೆಗೊಂಡಿದ್ದಾರೆ. ಅವರು ಹಿಂದಿನ ಎಲ್ಲ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲಿ ಎಂದು ಒತ್ತಾಯಿಸಿದರು.

‘ಶೋಭಾ ಕರಂದ್ಲಾಜೆ ಸ್ಪರ್ಧಿಸದಿದ್ದರೆ ತಾವು ಕಣಕ್ಕಿಳಿಯುವುದಾಗಿ ಡಿ.ಎನ್‌.ಜೀವರಾಜ್‌, ವಿಲಾಸ್‌ ನಾಯಕ್‌ ಸಹಿತ ಹಲವರು ಹೇಳಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿರುತ್ತೇವೆ’ ಎಂದು ಶೋಭಾ ಉತ್ತರಿಸಿದರು.

‘ಬಿಜೆಪಿ ಟಿಕೆಟ್‌ ಬೇಕು, ಇತರ ಪಕ್ಷಗಳ ಟಿಕೆಟ್‌ ಬೇಕು ಎಂಬ ಆಕಾಂಕ್ಷಿಗಳು ಇದ್ದಾರೆ. ಅಂಥವರು ಸುಮಾರು 15 ಹುಡುಗರನ್ನು ಒಗ್ಗೂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ನನ್ನ ವಿರುದ್ಧ ಪುಕಾರು ಎಬ್ಬಿಸಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಯಿಂದ ಬಿಜೆಪಿಗೆ ತೊಂದರೆ ಇಲ್ಲ’ ಎಂದರು.

‘ಸಂಸದರು ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಬೇಕು. ಕಾಮಗಾರಿ ಉದ್ಘಾಟನೆ ನೆರವೇರಿಸಬೇಕು, ಪಕ್ಷ ಸಂಘಟಿಸಬೇಕು ಎಂದು ಪಕ್ಷ ಸೂಚಿಸಿದೆ. ಅದರಂತೆ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.