ADVERTISEMENT

ಮುನಿಸು ಬದಿಗಿಟ್ಟ ಬಿಜೆಪಿ ಶಾಸಕರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 19:57 IST
Last Updated 1 ಏಪ್ರಿಲ್ 2019, 19:57 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕರು ಮುನಿಸು ಮರೆತು ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಸೋಮವಾರ ಪ್ರಚಾರ ಮಾಡಿದರು.

ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್‌ ಕೈತಪ್ಪಲು ಬಸವನಗುಡಿ ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ ಪಾತ್ರ ದೊಡ್ಡದು ಎಂದು ಗೋವಿಂದರಾಜನಗರ ಶಾಸಕ ವಿ.ಸೋಮಣ್ಣ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಟಿಕೆಟ್‌ ಕೈತಪ್ಪಲು ಕಾರಣ ಗೊತ್ತಾಗುವವರೆಗೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದೂ ಹೇಳಿದ್ದರು. ತೇಜಸ್ವಿ ನಾಮಪತ್ರ ಸಲ್ಲಿಕೆ ವೇಳೆ ಸೋಮಣ್ಣ ಹಾಗೂ ಆರ್.ಅಶೋಕ್‌ ಗೈರುಹಾಜರಾಗಿದ್ದರು. ಬೊಮ್ಮನಹಳ್ಳಿ ಭಾಗದಲ್ಲಿ ಭಾನುವಾರ ಪ್ರಚಾರ ನಡೆಸಿದ್ದ ಶಾಸಕ ಸತೀಶ್‌ ರೆಡ್ಡಿ ಅಭ್ಯರ್ಥಿಯ ಹೆಸರು ಹೇಳದೆಯೇ ಮತ ಯಾಚಿಸಿದ್ದರು.

ಬನಶಂಕರಿಯಲ್ಲಿ ಸೋಮವಾರ ನಡೆದ ಎಂಟು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಭೆಯಲ್ಲಿ ಆರ್‌.ಅಶೋಕ್‌, ವಿ.ಸೋಮಣ್ಣ, ಎಲ್‌.ಎ. ರವಿ ಸುಬ್ರಹ್ಮಣ್ಯ, ಸತೀಶ್‌ ರೆಡ್ಡಿ, ಎಂ.ಕೃಷ್ಣಪ್ಪ, ಉದಯ್ ಗರುಡಾಚಾರ್ ಪಾಲ್ಗೊಂಡರು.

ADVERTISEMENT

‘ಅಮಿತ್‌ ಶಾ ರ‍್ಯಾಲಿಯಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಬೇಕು. ತೇಜಸ್ವಿ ಸೂರ್ಯ ಅವರನ್ನು 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಿ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರದ್ದು’ ಎಂದು ಅಶೋಕ್‌ ಹೇಳಿದರು.

ಇದಕ್ಕೂ ಮುನ್ನ ಸೋಮಣ್ಣ ಅವರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ತೇಜಸ್ವಿ ಸೂರ್ಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಪಕ್ಷದ ಮುಖಂಡರು ಸೂಚನೆ ನೀಡಿದರು.

ರಾಜ್ಯ ಮಹಿಳಾ ಆಯೋಗ ನೋಟಿಸ್‌
ತೇಜಸ್ವಿ ಸೂರ್ಯ ಅವರ ವಿರುದ್ಧ ಕೆಪಿಸಿಸಿ ಮಹಿಳಾ ಘಟಕ ನೀಡಿರುವ ದೂರಿಗೆ ಸಂಬಂಧಿಸಿದಂತೆ ತೇಜಸ್ವಿ ಅವರಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ನೋಟಿಸ್‌ ನೀಡಿದೆ.

ಏಪ್ರಿಲ್‌ 3ರಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಆಯೋಗ ಸೂಚನೆ ನೀಡಿದೆ.

ತೇಜಸ್ವಿ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆ‍‍‍ಪಿ ಪ್ರಕಟಿಸಿದ ಬೆನ್ನಲ್ಲೇ ಉದ್ಯಮಿ ಡಾ. ಸೋಮ್‌ ದತ್ತಾ ಎಂಬುವರು, 'ಅದು ಬಹಳ ತೀವ್ರವಾಗಿದ್ದ ಸಂಬಂಧ. ನಾವು ಪ್ರೀತಿಯ ಆಳದಲ್ಲಿದ್ದೆವು. ಆತ 23 ವರ್ಷ ವಯಸ್ಸಿನವನಿದ್ದಾಗಿಂದ ನಾವು ಸಂಬಂಧ ಹೊಂದಿದ್ದೆವು. ಇದನ್ನು ಮತ್ತಷ್ಟು ಕೆದಕಲು ನನಗೆ ನಿಜಕ್ಕೂ ಮನಸ್ಸಿಲ್ಲ’ ಎಂದು ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ಗಳನ್ನು ಶೇರ್‌ ಮಾಡಿದ್ದ ಕರ್ನಾಟಕ ಕಾಂಗ್ರೆಸ್‌ ‘ಮೀ ಟೂ’ ಎಂದು ಆರೋಪ ಮಾಡಿತ್ತು. ಬಳಿಕ ಮಹಿಳಾ ಘಟಕವು ಆಯೋಗಕ್ಕೆ ದೂರು ನೀಡಿತ್ತು.

‘ಡಾ. ಸೋಮ್‌ ದತ್ತಾಅವರು ನಮಗೆ ಬಹಳ ಬೇಕಾದ ಸ್ನೇಹಿತರು, ಅವರು ನನ್ನ ವಿರುದ್ಧ ಮಾಡಿರುವ ಟ್ವೀಟ್ ಅನ್ನು ಅವರೇ ಡಿಲೀಟ್ ಮಾಡಿದ್ದಾರೆ. ಯಾರೂ ಈ ವಿಷಯ ಮುಂದುವರಿಸಬಾರದು ಅಂತ ಕೇಳಿಕೊಂಡಿದ್ದಾರೆ. ಆದ್ದರಿಂದ ನಾನು ಇದನ್ನು ಮುಂದುವರಿಸುವುದಿಲ್ಲ' ಎಂದು ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದರು.

‘ಬೆಂಬಲ ಮುಖ್ಯವಲ್ಲ, ಫಲಿತಾಂಶ ನಿರ್ಧಾರ’
‘ಯಾರು ಬೆಂಬಲ ನೀಡಲಿ, ಬಿಡಲಿ; ಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ. ಫಲಿತಾಂಶ ಈಗಾಗಲೇ ನಿರ್ಧಾರವಾಗಿದೆ’ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಯಾರು, ಎಲ್ಲಿಂದ ಬೆಂಬಲ ನೀಡುತ್ತಾರೆ, ಯಾರು ನೀಡುವುದಿಲ್ಲ ಎಂಬುದು ಮುಖ್ಯವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿಯೇ ಮತ ಚಲಾಯಿಸುವುದು ಎಂದು ಜನ ನಿರ್ಧರಿಸಿದ್ದಾರೆ. ಫಲಿತಾಂಶ ಈಗಾಗಲೇ ನಿರ್ಧಾರವಾಗಿದೆ. ಜನರಿಗೆ ಮತ ಚಲಾಯಿಸಲು ಅನುವು ಮಾಡಿಕೊಡಬೇಕಾಗಿರುವುದಷ್ಟೇ ನಾವೀಗ ಮಾಡಬೇಕಿರುವ ಕೆಲಸ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.