ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಸಿಡಿದೆದ್ದಿದ್ದು, ‘ನನ್ನ ಸಮಾಧಾನದ ದಿನಗಳು ಮುಗಿದವು. ಇನ್ನು ಏನಿದ್ದರೂ ಯುದ್ಧ’ ಎಂದು ಹೇಳಿದರು.
ವಿಜಯೇಂದ್ರ ಅವರನ್ನು ವಿರೋಧಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ಸದಸ್ಯರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸುಧಾಕರ್ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು. ವರಿಷ್ಠರಿಗೆ ವಿಜಯೇಂದ್ರ ವಿರುದ್ಧ ದೂರು ನೀಡಿ, ಆ ಬಳಿಕ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದರು.
‘ತಮಗೆ ಬೇಕಾದವರನ್ನು ಜಿಲ್ಲಾ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಪಾಧ್ಯಕ್ಷರನ್ನು ಮಾಡಿಕೊಂಡಿದ್ದಾರೆ. ವಿಜಯೇಂದ್ರ ಅವರ ಧೋರಣೆ ಬೇಸರ ಹುಟ್ಟಿಸಿದೆ. ನಿಮ್ಮ ನಾಯಕತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕನಿಷ್ಠ ಒಂದು ಸೀಟು ಗೆದ್ದು ತೋರಿಸಿ’ ಎಂದು ಸವಾಲು ಹಾಕಿದರು.
‘ಫೋನ್ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ. ನಡ್ಡಾ ಅವರಿಗೆ ಸಂದೇಶ ಹಾಕಿದರೆ ಭೇಟಿಗೆ ಸಮಯ ಕೊಡುತ್ತಾರೆ. ಆದರೆ, ಇವರು ಎರಡು– ಮೂರು ಬಾರಿ ಅಪಾಯಿಂಟ್‌ಮೆಂಟ್ ಕೊಟ್ಟು ನಂತರ ರದ್ದು ಮಾಡಿದ್ದಾರೆ’ ಎಂದರು.
‘ಬಸವರಾಜ ಬೊಮ್ಮಾಯಿ ಜತೆ ಚೆನ್ನಾಗಿ ಕೆಲಸ ಮಾಡಿದ್ದೇವೆ ಎಂದು ನಮ್ಮ ಮೇಲೆ ದ್ವೇಷ ಇರಬಹುದು. ವಿಜಯೇಂದ್ರ ಯಡಿಯೂರಪ್ಪ ಅವರ ಮಗ ಆಗಿರಬಹುದು. ಆದರೆ, ಅವರಿಗೂ ಇವರಿಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಇವರದು ದ್ವೇಷದ ರಾಜಕಾರಣ. ನಮ್ಮ ರಾಜಕೀಯ ಅಳಿವು– ಉಳಿವಿನ ದೃಷ್ಟಿಯಿಂದ ಒಂದು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ನಮಗೂ ರಾಜಕೀಯ ಶಕ್ತಿ ಇದೆ. ನಮ್ಮ ಒಳಗೂ ಲಾವಾ ಇದೆ. ಯಾವಾಗ ಸ್ಫೋಟ ಆಗುತ್ತದೆ ಗೊತ್ತಿಲ್ಲ’ ಎಂದರು.
‘ನನ್ನ ಸಮಾಧಾನದ ದಿನ ಮುಗಿದವು. ಇನ್ನೇನಿದ್ದರೂ ಯುದ್ಧ. ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ರಮೇಶ ಜಾರಕಿಹೊಳಿ ಅವರನ್ನು ಏನು ಮಾಡಿದ್ದೀರಿ ಎಂಬುದು ಚೆನ್ನಾಗಿ ಗೊತ್ತು. ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಭೇಟಿ ಎಲ್ಲ ವಿಷಯ ಅವರ ಗಮನಕ್ಕೆ ತರುತ್ತೇನೆ. ನಿಮ್ಮ ವ್ಯವಹಾರಗಳನ್ನೂ ಎಲ್ಲರ ಗಮನಕ್ಕೆ ತರುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
‘ವರಿಷ್ಠರ ಭೇಟಿಯ ಬಳಿಕ ಬೆಂಬಲಿಗರ ಸಭೆ ಮಾಡಿ ಅಭಿಪ್ರಾಯ ಪಡೆಯುತ್ತೇನೆ. ಆ ಬಳಿಕ ಒಂದು ತೀರ್ಮಾನ ಮಾಡುತ್ತೇನೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಹೀಗೆಯೇ ಆಗುತ್ತದೆ ಎಂದು ಹೇಳಲಾಗುವುದಿಲ್ಲ’ ಎಂದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸ್ಪರ್ಧೆಯ ಬಗ್ಗೆ ಇದೇ 31 ರಂದು (ಶುಕ್ರವಾರ) ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷವನ್ನು ಒಗ್ಗಟ್ಟಿನಿಂದ ಮುನ್ನಡೆಸುವವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರಿಗೆ ಮನವಿ ಮಾಡುತ್ತೇವೆ ಎಂದರು.
‘ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಅಗತ್ಯವಿದೆ. ತಮಗೆ ಜೈ ಎನ್ನುವವರಿಗೆ ಮಣೆ ಹಾಕದೇ ಎಲ್ಲರೂ ಒಂದೇ ಎನ್ನುವ ಮನಸ್ಥಿತಿಯವರೇ ಅಧ್ಯಕ್ಷರಾಗಬೇಕಿದೆ. ಈ ನಿಟ್ಟಿನಲ್ಲಿ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ’ ಎಂದು ಹೇಳಿದರು.
‘ಪಕ್ಷದಲ್ಲಿ ಸಂಘಟನಾ ಪರ್ವ ಸರಿಯಾಗಿ ನಡೆಯುತ್ತಿಲ್ಲ. ನಮ್ಮನ್ನೆಲ್ಲ ಕರೆಯುತ್ತಿಲ್ಲ. ಯಾರನ್ನೂ ಕೇಳದೆ ಮಂಡಲ ಮತ್ತು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲು ಮುಂದಾಗಿದ್ದಾರೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವವರು ಬೇಕಾಗಿದ್ದಾರೆ’ ಎಂದರು. ‘ಯತ್ನಾಳ ಮತ್ತು ರಮೇಶ ಜಾರಕಿಹೊಳಿ ತಂಡದಿಂದಾಗಿ ವಕ್ಫ್ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇದರ ಪರಿಣಾಮ ಜಂಟಿ ಸಂಸದೀಯ ಸಮಿತಿಯಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿದ್ದಾರೆ. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಅಂಗೀಕಾರವಾಗುತ್ತದೆ’ ಎಂದು ಕುಮಾರ್ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.