ADVERTISEMENT

ಅಂತ್ಯಕ್ರಿಯೆಗೊಬ್ಬ ಆಪತ್‌ಬಾಂಧವ ಮರಿಯಪ್ಪ

ಕೊರೊನಾ ಸೋಂಕಿತ, ಸೋಂಕಿತರಲ್ಲದವರ ಸಂಸ್ಕಾರಕ್ಕೆ ಸದಾ ಸಿದ್ಧ

ಬಾಲಕೃಷ್ಣ ಪಿ.ಎಚ್‌
Published 20 ಮೇ 2021, 4:28 IST
Last Updated 20 ಮೇ 2021, 4:28 IST
ಮರಿಯಪ್ಪ
ಮರಿಯಪ್ಪ   

ದಾವಣಗೆರೆ: ಕೊರೊನಾ ಕಾಲದಲ್ಲಿ ಮೃತದೇಹ ಮುಟ್ಟುವವರಿಲ್ಲ. ಅಂತ್ಯಕ್ರಿಯೆ ಮಾಡುವವರಿಲ್ಲ ಎಂಬ ಕೊರಗು ಇಲ್ಲದಂತೆ ಇಲ್ಲೊಬ್ಬರು ಯಾವುದೇ ಜಾತಿ, ಮತಗಳ ಭೇದವಿಲ್ಲದೇ ಸ್ಪಂದಿಸುವ ಆಪತ್‌ಬಾಂಧವ ಇದ್ದಾರೆ. ಯಾರೇ ಕರೆ ಮಾಡಿದರೂ ಹೋಗಿ ಅಂತ್ಯಸಂಸ್ಕಾರ ಮುಗಿಸಿಕೊಂಡು ಬರುತ್ತಾರೆ.

ವಿನಾಯಕ ಬಡಾವಣೆಯ ಮರಿಯಪ್ಪ ಅವರೇ ಈ ರೀತಿ ನೆರವಾಗುವವರು.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಬಿಸ್ಲಳ್ಳಿಯ ಮರಿಯಪ್ಪ ಕೂಲಿ ಮಾಡಿಕೊಂಡು ಬದುಕುತ್ತಿದ್ದವರು. ಸುಮಾರು 15 ವರ್ಷಗಳ ಹಿಂದೆ ದಾವಣಗೆರೆಗೆ ಉದ್ಯೋಗ ಅರಸಿಕೊಂಡು ಬಂದವರು. ಆಗ ಅವರಿಗೆ ಉದ್ಯೋಗವಾಗಿ ದೊರಕಿದ್ದು ದಾವಣಗೆರೆ–ಹರಿಹರ ರಸ್ತೆಯಲ್ಲಿ ಇರುವ ವೈಕುಂಠಧಾಮದಲ್ಲಿ ಹೆಣ ಸುಡುವ ಕೆಲಸ. 14 ವರ್ಷ ಅಲ್ಲೇ ಕೆಲಸ ಮಾಡುತ್ತಿದ್ದ ಮರಿಯಪ್ಪ ಆರು ತಿಂಗಳ ಹಿಂದೆ ಅಲ್ಲಿಂದ ಹೊರಗೆ ಬಂದರು. ಬಳಿಕ ಒಂದು ಸಮುದಾಯದ ಹೆಣ ಸುಡುವ ಬದಲು ಯಾರದೇ ಶವ ಬಂದರೂ ಸುಡುವ, ಹೂಳುವ ಕಾಯಕದಲ್ಲಿ ತೊಡಗಿಸಿಕೊಂಡರು. ರಾಮನಗರ ರುದ್ರಭೂಮಿ, ಶಾಮನೂರು ರುದ್ರಭೂಮಿ, ವೈಕುಂಠ ಧಾಮ ಹೀಗೆ ಎಲ್ಲಿ ಬೇಕೋ ಅಲ್ಲಿ ಅಂತ್ಯಕ್ರಿಯೆ ಮಾಡಿ ಕೊಡುತ್ತಾರೆ.

ADVERTISEMENT

‘ನಾನು 15 ವರ್ಷಗಳ ಹಿಂದೆ ದಾವಣಗೆರೆಗೆ ಬಂದಾಗ ಎಲ್ಲಿ ಹೋಗಬೇಕು ಎಂದು ಗೊತ್ತಾಗಲಿಲ್ಲ. ನಡೆದು ಸುಸ್ತಾಗಿ ಒಂದು ಮರದ ಅಡಿಯಲ್ಲಿ ಕುಳಿತಿದ್ದೆ. ಅಲ್ಲಿಗೆ ಗಣಪತಿ ಭಟ್‌ ಎಂಬವರು ಬಂದಿದ್ದರು. ಕೆಲಸ ಇದ್ದರೆ ಹೇಳಿ ಅಂದೆ. ಸ್ಮಶಾನದಲ್ಲಿ ಕೆಲಸ ಮಾಡಲು ತಯಾರಿದ್ದಿಯಾ ಎಂದು ಕೇಳಿದರು. ನಾನು ಒಪ್ಪಿದೆ. ಅಲ್ಲಿಂದ ಹೆಣ ಸುಡುವ ಕೆಲಸ ಮಾಡತೊಡಗಿದೆ. ಆರು ತಿಂಗಳ ಈಚೆಗೆ ನಾಲ್ವರು ಸಂಗಡಿಗರ ಜತೆ ನಾನು ಸ್ವತಂತ್ರವಾಗಿ ಅಂತ್ಯಕ್ರಿಯೆ ಮಾಡುತ್ತಿದ್ದೇನೆ’ ಎಂದು ಬದುಕಿನ ಕಥೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಆರು ವರ್ಷಗಳ ಈಚೆಗೆ ತಮ್ಮ ಕೋಟೇಶ ಕೂಡ ದಾವಣಗೆರೆಗೆ ಬಂದಿದ್ದಾನೆ. ಅವನು ಶವಸಾಗಿಸುವ ವಾಹನದ ಚಾಲಕನಾಗಿದ್ದಾನೆ. ಮರಾಠ ಸಮುದಾಯದ ಮುಕ್ತಿವಾಹನ ಅದು. ಅವನು ಇಲ್ಲವೇ ನಾನು ಚಲಾಯಿಸುತ್ತಿದ್ದೇವೆ. ಯಾರೇ ಕರೆ ಮಾಡಿದರೂ ವಾಹನ ತಗೊಂಡು ಹೋಗುತ್ತೇವೆ. ಕರೆದುಕೊಂಡು ಬರುತ್ತೇವೆ. ಕೊರೊನಾ ಸೋಂಕಿತರ ದೇಹವಾದರೆ ನಾವೇ ಅಂತ್ಯಕ್ರಿಯೆ ಮಾಡಬೇಕಾಗುತ್ತದೆ. ಸೋಂಕು ಇಲ್ಲದವರ ದೇಹವಾದರೆ ಅವರ ಕುಟುಂಬದವರು ಕೈ ಜೋಡಿಸುತ್ತಾರೆ’ ಎಂದು ನೆನಪಿಸಿಕೊಂಡರು.

ಹೆಚ್ಚಿದ ಸಾವಿನ ಪ್ರಮಾಣ

‘ಕೊರೊನಾ ಬರುವ ಮೊದಲು ನಿತ್ಯ ಜನ ಸಾಯುತ್ತಿರಲಿಲ್ಲ. ಕೆಲವು ದಿನ ಒಬ್ಬರು, ಕೆಲವು ದಿನ ಇಬ್ಬರು, ಕೆಲವು ದಿನ ಖಾಲಿ ಇರುತ್ತಿತ್ತು. ಈಗ ಕೊರೊನಾ ಬಂದ ಮೇಲೆ ಖಾಲಿ ಎಂಬುದೇ ಇಲ್ಲ. ಅದರಲ್ಲೂ ಎರಡನೇ ಅಲೆ ಬಂದ ಮೇಲೆ ನಿತ್ಯ ಐದಾರು ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದೇನೆ’ ಎಂದು ಕಳವಳಕಾರಿ ಅಂಶವನ್ನು ಮರಿಯಪ್ಪ ನೀಡಿದರು.

‘ಮನೆ ಮಂಜೂರು ಆಗಿಲ್ಲ’

‘ಎಸ್ಸೆಸ್ಸೆಲ್ಸಿ ವರೆಗೆ ಓದಿರುವ ನಾನು ಈಗ ದಾವಣಗೆರೆ ವಿನಾಯಕ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದೇನೆ. ಕೊರೊನಾ ಎರಡನೇ ಅಲೆ ಬಂದ ಮೇಲೆ ಅಲ್ಲೂ ಹೋಗದೇ ಒಬ್ಬಂಟಿಯಾಗಿ ಇದ್ದೇನೆ. ಅಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಈ ಕಾಯಕದಲ್ಲೇ ಮಕ್ಕಳನ್ನು ಓದಿಸುತ್ತಿದ್ದೇನೆ. ಒಬ್ಬ ಮಗ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಮಾಡುತ್ತಿದ್ದಾನೆ. ಮತ್ತೊಬ್ಬ ಬಿಎಸ್‌ಸಿ ಓದುತ್ತಿದ್ದಾನೆ. ಮೂರನೆಯವನು ಆರ್ಟ್ಸ್‌ ಮೊದಲ ವರ್ಷದಲ್ಲಿದ್ದಾನೆ’ ಎಂದು ಮರಿಯಪ್ಪ ಕುಟುಂಬದ ವಿವರ ನೀಡಿದರು.

‘ಹೆಣ ಸುಡುವ ಕಾಯಕ ಮಾಡುವ ನನಗೊಂದು ಮನೆ ಕೊಡಿ ಎಂದು ಜಿಲ್ಲಾಧಿಕಾರಿಗೆ ಐದು ವರ್ಷಗಳಿಂದ ಮನವಿ ಮಾಡುತ್ತಿದ್ದೇನೆ. ಆದರೆ ಯಾರೂ ಸ್ಪಂದಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.