ಎಚ್.ಸಿ. ಮಹದೇವಪ್ಪ
ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 10 ವರ್ಷಗಳಿಗೊಮ್ಮೆ ಮಾಡುವುದು ಕಡ್ಡಾಯ. ಅದರಂತೆ, ಸರ್ಕಾರ ಜಾತಿವಾರು ಮರು ಸಮೀಕ್ಷೆಗೆ ನಿರ್ಧರಿಸಿದೆ. ಆದರೆ, ಸಾಮಾಜಿಕ ಬದ್ಧತೆ ಇಲ್ಲದವರು ಸಬೂಬು ಹೇಳುತ್ತಾರೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘10 ವರ್ಷಗಳಿಗೊಮ್ಮೆ ಜನಗಣತಿ ಎನ್ನುವುದು ಒಂದು ಭಾಗವಾದರೆ, 10 ವರ್ಷಕ್ಕೊಮ್ಮೆ ಜಾತಿ ಗಣತಿ ಮಾಡಬೇಕು ಎಂದೂ ಕಾಯ್ದೆ ಹೇಳುತ್ತದೆ. ಆ ಮೂಲಕ, ಜನಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳನ್ನು ನೀಡಬಹುದು. ಬದ್ಧತೆ ಇರುವ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ’ ಎಂದರು.
‘11 ವರ್ಷಗಳಿಂದ ಅವರೇ (ಬಿಜೆಪಿ) ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ಆದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಮುಂದಾಗಿಲ್ಲ. ಸಮೀಕ್ಷೆ ಮಾಡಿ ಸಂವಿಧಾನಬದ್ಧವಾಗಿ ಸಮುದಾಯಗಳಿಗೆ ಸವಲತ್ತುಗಳನ್ನು ನೀಡಬೇಕು. ಇದು ಸರ್ಕಾರದ ಕರ್ತವ್ಯವೂ ಆಗಿದೆ’ ಎಂದರು.
‘ತಂತ್ರಾಂಶವಿದೆ. ದತ್ತಾಂಶವೂ ಇದೆ. ಶಿಕ್ಷಕರ ಕೊರತೆ ಎದುರಾದರೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುವುದು. ಒಟ್ಟಿನಲ್ಲಿ 90 ದಿನಗಳಲ್ಲಿ ರಾಜ್ಯ ಸರ್ಕಾರ ಜಾತಿವಾರು ಸಮೀಕ್ಷೆ ಪೂರ್ಣಗೊಳಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ‘ಅವರೇನು ಭಾರಿ ಪ್ರಾಮಾಣಿಕರೇ? ನಮ್ಮ ಸರ್ಕಾರದ ಮೇಲಿನ ಆರೋಪಗಳಿಗೆ ಸಾಕ್ಷ್ಯಗಳಿದ್ದರೆ ತನಿಖಾ ಸಂಸ್ಥೆಗಳಿಗೆ ನೀಡಲಿ’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.