ADVERTISEMENT

ಈ ಬಾರಿ ಉತ್ತಮ ವರ್ಷಧಾರೆ: ಮಳೆರಾಜೇಂದ್ರಸ್ವಾಮಿ ವಾಣಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 15:39 IST
Last Updated 6 ಮಾರ್ಚ್ 2020, 15:39 IST
ಬಾಗಲಕೋಟೆ ಸಮೀಪದ ಹೊಸ ಮುರನಾಳದಲ್ಲಿ ಶುಕ್ರವಾರ ಮಳೆರಾಜೇಂದ್ರಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಗಂಗೆಯ ಬಿಂದಿಗೆಯನ್ನು ಹೊತ್ತ ಮಹಿಳೆಯರು ರಥೋತ್ಸವದ ಪ್ರದಕ್ಷಣೆ ಹಾಕಿದರು.
ಬಾಗಲಕೋಟೆ ಸಮೀಪದ ಹೊಸ ಮುರನಾಳದಲ್ಲಿ ಶುಕ್ರವಾರ ಮಳೆರಾಜೇಂದ್ರಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಗಂಗೆಯ ಬಿಂದಿಗೆಯನ್ನು ಹೊತ್ತ ಮಹಿಳೆಯರು ರಥೋತ್ಸವದ ಪ್ರದಕ್ಷಣೆ ಹಾಕಿದರು.   

ಬಾಗಲಕೋಟೆ: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರೋಹಿಣಿ, ಮೃಗಶಿರಾ ಹಾಗೂ ಹಿಂಗಾರು ಮಳೆಗಳಲ್ಲಿ ಮಗಿ ಮತ್ತು ಹುಬ್ಬಿ ಮಳೆಗಳು ಉತ್ತಮವಾಗಿ ಬರಲಿವೆ.. ಇದು ಮುರನಾಳದ ಮಳೆರಾಜೇಂದ್ರಸ್ವಾಮಿ ಮಠದ ವಾಣಿ.

ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಕಡುಬಿನ ಕಾಳಗದ ವೇಳೆ ಮಠದ ಗುರುನಾಥ ಸ್ವಾಮಿ ತೀರ್ಥಯ್ಯಸ್ವಾಮಿ ಮಹಾಪುರುಷ ನೆರೆದ ಭಕ್ತಾಧಿಗಳಿಗೆ ತಿಳಿಸಿದರು.

ಮಳೆ ಸೂಚನೆ (ಕಡುಬಿನ ಕಾಳಗ) ವೈಶಿಷ್ಟ್ಯ: ಗಂಗೆಯ ಪೂಜೆಗಾಗಿ ನಿರ್ಮಿಸಿದ ಹೊಂಡದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಬಳಿಕ ಪಂಚ ಬಿಂದಿಗೆಗಳಲ್ಲಿ ನೀರು ತುಂಬಿ ಪ್ರತಿ ಬಿಂದಿಗೆಯ ಮೇಲೆ ಎರಡೆರಡು ಮಳೆಯ ಹೆಸರನ್ನು ಬರೆಯಲಾಗುತ್ತದೆ. ರಥದ ಪ್ರದಕ್ಷಣೆ ಹಾಕಿ ಪಂಚಬಿಂದಿಗೆ ಪೂಜೆ ಸಲ್ಲಿಸಿ ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಯ ಬಸಿಯುವಿಕೆ (ಸೋರಿಕೆ) ಆಧಾರದ ಮೇಲೆ ಮಳೆ, ಬೆಳೆ ಸೂಚನೆ ಹೊರಬೀಳುತ್ತದೆ.

ADVERTISEMENT

ಮಳೆರಾಜೇಂದ್ರಸ್ವಾಮಿ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು.

ಈ ವೇಳೆ ಗುರುನಾಥ ಸ್ವಾಮೀಜಿ, ಮಂಜುನಾಥ ಸ್ವಾಮೀಜಿ, ಮೇಘರಾಜ ಸ್ವಾಮೀಜಿ, ನಿತ್ಯಾನಂದ ಸ್ವಾಮೀಜಿ, ಗ್ರಾಮದ ಪ್ರಮುಖರಾದ ಹುಚ್ಚಪ್ಪ ಶಿರೂರ, ಶಿವಣ್ಣ ಬೂದಿಹಾಳ, ಮಳೆಯಪ್ಪ ತೆಗ್ಗಿ, ರಾಮಣ್ಣ ಗಣಿ, ಸಿದ್ದಪ್ಪ ಮುಚಖಂಡಿ, ಶಂಕ್ರಪ್ಪ ಪತ್ತಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.