ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಏಳು ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ. ಅಂತಹ ಯಾವುದೇ ತೀರ್ಮಾನವನ್ನು ಸರ್ಕಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಶುಕ್ರವಾರ ಸ್ಪಷ್ಟಪಡಿಸಿದರು.
ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ಮುಂದಾಗಿರುವ ಕುರಿತು ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥನಾರಾಯಣ ನಿಲುವಳಿ ಸೂಚನೆ ಮಂಡಿಸಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ, ‘ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ನಾವು ಎಲ್ಲಿಯೂ ಹೇಳಿಲ್ಲ. ಸದ್ಯಕ್ಕೆ ಯಾವುದೇ ಆತಂಕ ಬೇಡ’ ಎಂದರು.
‘ಹಿಂದೆ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿತ್ತು. ಅವುಗಳನ್ನು ಮುಂದುವರಿಸಬೇಕೋ? ಬೇಡವೋ ಎಂಬುದರ ಕುರಿತು ಪರಿಶೀಲನೆ ನಡೆಸಲು ಉಪ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಉಪ ಸಮಿತಿ ವರದಿ ಸಲ್ಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಆದ್ದರಿಂದ ಈಗ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವುದು ಸರಿಯಲ್ಲ’ ಎಂದು ಹೇಳಿದರು.
‘ಸರ್ಕಾರದಲ್ಲೇ ದ್ವಂದ್ವ’: ಆಗ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಏಳು ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿಯವರು ಇಲ್ಲ ಎನ್ನುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರದಲ್ಲೇ ದ್ವಂದ್ವ ನಿಲುವು ಇದೆ. ಬಾಗಿಲು ಮುಚ್ಚುತ್ತೇವೆ, ಬೀಗ ಹಾಕುವುದಿಲ್ಲ ಎಂಬಂತಿದೆ ಮುಖ್ಯಮಂತ್ರಿಯವರ ಹೇಳಿಕೆ’ ಎಂದು ಛೇಡಿಸಿದರು.
‘ಇತ್ತೀಚಿನ ಘಟನಾವಳಿ ಆಗಿದ್ದರೆ ಮಾತ್ರ ಸದನದ ಎಲ್ಲ ಕಲಾಪವನ್ನು ಬದಿಗೊತ್ತಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಬಹುದು. ಪ್ರಸ್ತಾಪಿಸುವ ವಿಷಯವು ಸಾರ್ವಜನಿಕ ಮಹತ್ವವನ್ನು ಹೊಂದಿರಬೇಕು. ಸಂಪುಟ ಉಪ ಸಮಿತಿ ಇನ್ನೂ ವರದಿ ಸಲ್ಲಿಸಿಲ್ಲ. ಈಗ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವ ಪ್ರಮೇಯ ಉದ್ಬವಿಸದು’ ಎಂದು ಸಿದ್ದರಾಮಯ್ಯ ವಾದಿಸಿದರು.
ನಿಯಮ 69ರ ಅಡಿಯಲ್ಲಿ ಈ ಕುರಿತು ಅಲ್ಪ ಕಾಲಾವಧಿಯ ಚರ್ಚೆಗೆ ಅವಕಾಶ ಮುಂದೆ ನೀಡುವುದಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಕಟಿಸಿದರು.
‘ಹಲ್ಲು ಕೀಳುವ ವೈದ್ಯರ ಕಂಡು ಹೆದರಿಕೆ’
ಚರ್ಚೆಯ ಮಧ್ಯೆ ಪತ್ರಿಕಾ ತುಣುಕೊಂದನ್ನು ಪ್ರದರ್ಶಿಸಿದ ಅಶ್ವತ್ಥನಾರಾಯಣ, ‘ಉನ್ನತ ಶಿಕ್ಷಣ ಸಚಿವರು ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ಸಂದರ್ಶನದಲ್ಲೇ ಹೇಳಿದ್ದಾರೆ’ ಎಂದರು.
ಆಗ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ‘ಅಶ್ವತ್ಥ ನಾರಾಯಣ ಅವರ ಅವಧಿಯಲ್ಲೇ ಈ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು. ಅದಕ್ಕಾಗಿ ಅವರು ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿ
ದ್ದಾರೆ’ ಎಂದು ಕಾಲೆಳೆದರು.
ಮಧ್ಯ ಪ್ರವೇಶಿಸಿದ ಆರ್. ಅಶೋಕ, ‘ಸುಧಾಕರ್ ದಂತ ವೈದ್ಯ. ಅವರಿಗೆ ಹಲ್ಲು ಕೀಳುವುದಷ್ಟೇ ಗೊತ್ತು, ಜೋಡಿಸುವುದು ಗೊತ್ತಿಲ್ಲ. ಅದಕ್ಕಾಗಿ ನಮಗೆ ಹೆದರಿಕೆ’ ಎಂದು ತಮಾಷೆ ಮಾಡಿದರು.
‘ನಾನು ಹಲ್ಲು ಕಿತ್ತು ಜೋಡಿಸುವ ತಜ್ಞ ದಂತ ವೈದ್ಯ (ಪ್ರೊಸ್ತೊಡಾಂಟಿಸ್ಟ್)’ ಎಂದು ಸುಧಾಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.