ADVERTISEMENT

ಭದ್ರಾ ಮೇಲ್ದಂಡೆ: ಪರಿಸರ ಅನುಮೋದನೆ ಗೊಂದಲ

ಕೇಂದ್ರ ಸರ್ಕಾರದ ಉತ್ತರದಿಂದ ನೆರೆಯ ರಾಜ್ಯಗಳಿಗೆ ಅಸ್ತ್ರ ಸಿಕ್ಕಂತಾಗಿದೆ: ನೀರಾವರಿ ತಜ್ಞರ ಅಭಿಮತ

ಮಂಜುನಾಥ್ ಹೆಬ್ಬಾರ್‌
Published 9 ಫೆಬ್ರುವರಿ 2023, 21:08 IST
Last Updated 9 ಫೆಬ್ರುವರಿ 2023, 21:08 IST
   

ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಗೆ ಪರಿಸರ ಅನುಮೋದನೆ ಪಡೆಯಲು ಅಗತ್ಯವಾಗಿರುವ ಕಾರ್ಯಸೂಚಿಗೆ (ಟಿಒಆರ್‌) ಒಪ್ಪಿಗೆ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಸಿರುವ ಪ್ರಸ್ತಾವವನ್ನು ಪರಿವೇಷ್‌ ಪೋರ್ಟಲ್‌ನಿಂದ ತೆಗೆದು ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಕರ್ನಾಟಕದ ನೀರಾವರಿ ಯೋಜನೆಗಳ ಸ್ಥಿತಿಗತಿ ಕುರಿತು ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೋಕಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ ತುಡು ಲಿಖಿತ ಉತ್ತರ ನೀಡಿದ್ದಾರೆ.

‘ಯಾವುದೇ ಯೋಜನೆಗೆ ಪರಿಸರ ಅನುಮೋದನೆ ಕೋರುವ ಸಂದರ್ಭದಲ್ಲಿ ಕಾರ್ಯಸೂಚಿಗೆ ಒಪ್ಪಿಗೆ ಪಡೆಯುವುದು ಅತ್ಯಗತ್ಯ ಪ್ರಕ್ರಿಯೆ. ಕರ್ನಾಟಕ ಸರ್ಕಾರವು 2019ರ ಜೂನ್‌ನಲ್ಲಿ ಪರಿಸರ ಸಚಿವಾಲಯಕ್ಕೆ ಈ ಸಂಬಂಧ ಪ್ರಸ್ತಾವ ಸಲ್ಲಿಸಿದೆ. ಈ ಯೋಜನೆಯು ಅಂತರ್‌ ರಾಜ್ಯ ಜಲ ವಿವಾದವನ್ನು ಒಳಗೊಂಡಿದೆ. ಹೀಗಾಗಿ, ಯೋಜನೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ (ಸಿಡಬ್ಲ್ಯುಎಂಎ) ಒಪ್ಪಿಗೆ ಸಿಕ್ಕ ಬಳಿಕ ಹಾಗೂ ಜಲಶಕ್ತಿ ಸಚಿವಾಲಯವು ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಅಂತಿಮಗೊಳಿಸಿದ ನಂತರವಷ್ಟೇ ಟಿಒಆರ್‌ಗೆ ಒಪ್ಪಿಗೆ ನೀಡಲು ಪರಿಸರ ಸಚಿವಾಲಯ ತೀರ್ಮಾನಿಸಿದೆ’ ಎಂದೂ ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

‘ಕರ್ನಾಟಕ ಸರ್ಕಾರ ಈಗಾಗಲೇ ಪರಿಸರ ಅನುಮೋದನೆ ಪಡೆದಿದ್ದರೆ ಅರಣ್ಯ ಸಚಿವಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿ ಸ್ಪಷ್ಟನೆ ಪಡೆಯಲು ಅವಕಾಶ ಇದೆ. ಕೇಂದ್ರದ ಈ ಉತ್ತರದಿಂದ ಕಾಮಗಾರಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಕೇಂದ್ರದ ಉತ್ತರವು ಯೋಜನೆ ಬಗ್ಗೆ ತಗಾದೆ ಎತ್ತಿರುವ ನೆರೆಯ ರಾಜ್ಯಗಳಿಗೆ ಅಸ್ತ್ರ ನೀಡಿದಂತೆ ಆಗುತ್ತದೆ. ಈ ದಾಖಲೆಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರೆ ಕರ್ನಾಟಕಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ’ ಎಂದು ನೀರಾವರಿ ತಜ್ಞ ಕ್ಯಾಪ್ಟನ್‌ ರಾಜಾ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಲ ಶಕ್ತಿ ಸಚಿವಾಲಯದಲ್ಲಿ ಆಂಧ್ರ ಪ್ರದೇಶ, ತಮಿಳುನಾಡಿನ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕದವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಆ ರಾಜ್ಯಗಳ ಅಧಿಕಾರಿಗಳು ಇಂತಹ ಕಿತಾಪತಿ ಮಾಡುತ್ತಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕುವುದು ಕರ್ನಾಟಕ’ ಎಂದು ಅವರು ಹೇಳಿದರು.

ಹನಿ ನೀರಾವರಿ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರುಣಿಸುವ ಈ ಯೋಜನೆಗೆ ₹5,300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದೆ.

‘ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಲು ಸಚಿವಾಲಯದ ಉನ್ನತಾಧಿಕಾರಿ ಸಮಿತಿ ಈಗಾಗಲೇ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದಿಂದ ಯೋಜನೆಗೆ ₹5,300 ಕೋಟಿ ಅನುದಾನ ನೀಡಲು ವೆಚ್ಚ ಇಲಾಖೆಯ ಸಾರ್ವಜನಿಕ ಹೂಡಿಕೆ ಮಂಡಳಿ ಶಿಫಾರಸು ಮಾಡಿದೆ’ ಎಂದೂ ಸಚಿವರು ತಿಳಿಸಿದ್ದಾರೆ.

ಈ ಯೋಜನೆಯಲ್ಲಿ 29.90 ಟಿಎಂಸಿ ಅಡಿ ನೀರು (ತುಂಗಾ ನದಿಯಿಂದ 17.40 ಟಿಎಂಸಿ ಅಡಿ ಹಾಗೂ ಭದ್ರಾ ಜಲಾಶಯದಿಂದ 12.50 ಟಿಎಂಸಿ ಅಡಿ) ಬಳಕೆ ಮಾಡಲಾಗುತ್ತದೆ. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಯೋಜನೆಗೆ ತಗಲುವ ವೆಚ್ಚ ₹21,473ಕೋಟಿ. ಕೇಂದ್ರ ಸರ್ಕಾರದಿಂದ ₹9,675ಕೋಟಿ ಅನುದಾನ ಸಿಗಲಿದೆ ಎಂದು ಕರ್ನಾಟಕ ಸರ್ಕಾರ ಹೇಳಿಕೊಂಡಿತ್ತು.

ತಗಾದೆ ಎತ್ತಿರುವ ಆಂಧ್ರ: ‘ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪನ್ನು ಉಲ್ಲಂಘಿಸಿ ಕರ್ನಾಟಕ ಸರ್ಕಾರವು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನ
ಗೊಂಡರೆ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಆಂಧ್ರ ಪ್ರದೇಶದ ಮೂರು ನೀರಾವರಿ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಆಂಧ್ರ ಪ್ರದೇಶ ಸರ್ಕಾರ ತಕರಾರು ಎತ್ತಿದೆ. ಈ ಯೋಜನೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.

ಯಾವ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ

ಜಿಲ್ಲೆ; ನೀರಾವರಿ (ಹೆಕ್ಟೇರ್‌ಗಳಲ್ಲಿ)

ಚಿಕ್ಕಮಗಳೂರು; 44,555

ಚಿತ್ರದುರ್ಗ; 1,54,245

ತುಮಕೂರು; 19,215

ದಾವಣಗೆರೆ; 7,500

ಒಟ್ಟು; 2,25,515

‘ಪರಿಸರ ಅನುಮೋದನೆ ಸಿಕ್ಕಿದೆ’

‘ಭದ್ರಾ ಮೇಲ್ದಂಡೆ ಯೋಜನೆಗೆ 2017ರಲ್ಲೇ ಪರಿಸರ ಅನುಮೋದನೆ ಸಿಕ್ಕಿದೆ. 2020ರ ಆಗಸ್ಟ್‌ 24ರಂದು ನಡೆದ ಕೇಂದ್ರ ಜಲ ಆಯೋಗದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಈ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ. ಯೋಜನೆಗೆ ಈಗಾಗಲೇ ₹3 ಸಾವಿರ ಕೋಟಿ ವೆಚ್ಚ ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ವಿಶ್ವೇಶ್ವರ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ರಾವ್‌ ಪೇಶ್ವೆ ತಿಳಿಸಿದರು.

ಕೇಂದ್ರ ಸಚಿವರ ಉತ್ತರದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಿಂದ ಪ್ರತಿಕ್ರಿಯೆ ಕೇಳಿದಾಗ, ‘ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆಯಲಾಗಿದೆ’ ಎಂದು ತಿಳಿಸಿದ ಅವರು, ಜಲ ಆಯೋಗದ ಸಭೆಯ ನಡಾವಳಿ ಪ್ರತಿಯನ್ನು ಕಳುಹಿಸಿ ಪುಟ 5ರಲ್ಲಿ ಇದರ ಕುರಿತು ಉಲ್ಲೇಖ ಇದೆ ಎಂದೂ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.