ಬೆಂಗಳೂರು: ಉತ್ತರಾದಿ ಹಾಗೂ ರಾಘವೇಂದ್ರ ಸ್ವಾಮಿ ಮಠಗಳ ಮಧ್ಯದ ಕೊಪ್ಪಳ ಜಿಲ್ಲೆ ಆನೆಗೊಂದಿಯ ನವ ವೃಂದಾವನದ ಭೂ ಮಾಲೀಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೆ ನಂಬರ್ 192ರ ಒಟ್ಟು ಜಮೀನಿನ ಜಂಟಿ ಸರ್ವೆ ನಡೆಸುವಂತೆ ನಿರ್ದೇಶಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಅಮಾನತ್ತಿನಲ್ಲಿ ಇರಿಸಿ ಆದೇಶಿಸಿದೆ.
ಈ ಸಂಬಂಧ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಸ್ವಾಮೀಜಿ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಉತ್ತರಾದಿ ಮಠದ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿತು.
‘ಆನೆಗೊಂದಿಯಲ್ಲಿನ ನವ ವೃಂದಾವನ ಗಡ್ಡೆ ಇರುವ ಸರ್ವೆ ನಂಬರ್ 192ರ ಜಮೀನನ್ನು ಹೊಸದಾಗಿ ಜಂಟಿ ಸರ್ವೆ ನಡೆಸಿ ಅದರಂತೆ ಕಂದಾಯ ಮತ್ತು ಸರ್ವೆ ದಾಖಲೆಗಳನ್ನು ಸರಿಪಡಿಸಬೇಕು’ ಎಂದು ಕಂದಾಯ ಹಾಗೂ ಸರ್ವೆ ಇಲಾಖೆಗೆ ಏಕಸದಸ್ಯ ನ್ಯಾಯಪೀಠವು 2024ರ ಜುಲೈ 3ರಂದು ನೀಡಿದ್ದ ಆದೇಶವನ್ನು ಅಮಾನತ್ತಿನಲ್ಲಿ ಇರಿಸಿ ಆದೇಶಿಸಿತು. ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಲಾಗಿದೆ. ವಕೀಲರಾದ ವಿನಾಯಕ ಕುಲಕರ್ಣಿ ಹಾಗೂ ಅನಿಲ್ ಕೆಂಭಾವಿ ವಕಾಲತ್ತು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.