ADVERTISEMENT

ಬೆಳಗಾವಿಯ ರಾಜಕಾರಣಿಗಳು ಕನ್ನಡ ದ್ರೋಹಿಗಳು: ವಾಟಾಳ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 21:11 IST
Last Updated 5 ಏಪ್ರಿಲ್ 2023, 21:11 IST
ವಾಟಾಳ್ ನಾಗರಾಜ್‌
ವಾಟಾಳ್ ನಾಗರಾಜ್‌   

ಬೆಂಗಳೂರು: ‘ಶಿವಾಜಿಯ ಪ್ರತಿಮೆಗೆ ಎರಡೆರಡೂ ಬಾರಿ ಅಭಿಷೇಕ ಮಾಡಿ ಮರಾಠಿಗರನ್ನು ಓಲೈಸುವ ರಾಜಕಾರಣ

ಮಾಡುತ್ತಿರುವ ಬೆಳಗಾವಿಯ ಎಲ್ಲ ರಾಜಕಾರಣಿಗಳು ಕನ್ನಡ ದ್ರೋಹಿಗಳು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗಾರಾಜ್ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗಡಿ ಭಾಗದ ರಾಜಕಾರಣಿಗಳು ಶಿವಾಜಿಗೆ ಕೊಡುವ ಆದ್ಯತೆ ಕಿತ್ತೂರ ರಾಣಿ ಚನ್ನಮ್ಮಗೆ ನೀಡುತ್ತಿಲ್ಲ. ಆದ್ದರಿಂದ, ಗಡಿಭಾಗದ ಕನ್ನಡಪರ ಸಂಘಟನೆಗಳ ಮುಖಂಡರು ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಮರಾಠಿಗರ ವಿರುದ್ಧ ಹೋರಾಡಬೇಕು’ ಎಂದು ಕರೆ ನೀಡಿದರು.

ADVERTISEMENT

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಚಾಮರಾಜನಗರ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿದ್ದೇನೆ. ರಾಜ್ಯದಲ್ಲಿರುವ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರು ಚುನಾವಣೆಗೆ ಸ್ಪರ್ಧಿಸಬೇಕು’ ಎಂದು ಕರೆ ನೀಡಿದರು.

‘ತತ್ವ, ಸಿದ್ಧಾಂತ ಮೇಲೆ ಚುನಾವಣೆ ನಡೆಯಬೇಕು. ಜಾತಿ, ಭ್ರಷ್ಟಾಚಾರ, ಉಡುಗೊರೆ ಹಂಚಿಕೆಯೇ ಚುನಾವಣೆ ಆಗಬಾರದು. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳಲ್ಲಿ ಜಾತಿವಾದಿಗಳು ಮತ್ತು ಭ್ರಷ್ಟರು ಇದ್ದಾರೆ. ಚುನಾವಣೆ ವ್ಯವಸ್ಥೆ ಹದಗೆಟ್ಟಿದೆ. ಚುನಾವಣೆ ಎಂದರೆ ದರೋಡೆ ಎನ್ನುವಂತಾಗಿದೆ’ ಎಂದರು.

‘ಮಹಾರಾಷ್ಟ್ರದ ನಡೆ ಖಂಡನೀಯ’

‘ರಾಜ್ಯದ 865 ಗಡಿ ಗ್ರಾಮಗಳಿಗೆ ಆರೋಗ್ಯ ವಿಮೆ ನೀಡಿರುವ ಮಹಾರಾಷ್ಟ್ರದ ನಡೆ ಖಂಡನೀಯ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ದೇವೇಂದ್ರ ಫಡಣವೀಸ್‌ ಮತ್ತು ಉದ್ಧವ್ ಠಾಕ್ರೆ ಎಲ್ಲರು ಡಕಾಯಿತರಾಗಬೇಕಿದ್ದವರು ರಾಜಕಾರಣಿಗಳಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ತನ್ನ ಆದೇಶವನ್ನು ಕೂಡಲೇ ಹಿಂಪಡೆಯಬೇಕು’ ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.