ADVERTISEMENT

ಪಾರ್ಕಿಂಗ್‌ ಇದ್ದರೆ ಮಾತ್ರ ವಾಹನ ನೋಂದಣಿ

ಬೆಂಗಳೂರಿನ ಸಂಚಾರ ದಟ್ಟಣೆ: ಅಧಿವೇಶನದಲ್ಲಿ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:16 IST
Last Updated 17 ಡಿಸೆಂಬರ್ 2018, 20:16 IST
ಡಿ.ಸಿ.ತಮ್ಮಣ್ಣ
ಡಿ.ಸಿ.ತಮ್ಮಣ್ಣ   

ಬೆಳಗಾವಿ: ಬೆಂಗಳೂರಿನಲ್ಲಿ ವಾಹನ ಖರೀದಿಸುವವರ ಬಳಿ ಪಾರ್ಕಿಂಗ್‌ಗೆ ಜಾಗ ಇದ್ದಲ್ಲಿ ಮಾತ್ರ ವಾಹನ ನೋಂದಣಿ ಮಾಡಿಸುವ ನಿಯಮ ತರಬೇಕಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಕಾರು ಪೂಲಿಂಗ್‌ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ನಿಯಮ 69ರಡಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣಿ ನಿಷೇಧ ಅಸಾಧ್ಯ. ಆಟೊ ರಿಕ್ಷಾಗಳ ನೋಂದಣಿಗೆ ನಿರ್ಬಂಧ ಹೇರಲಾಗಿತ್ತು. ಅದನ್ನು ಆಟೊ ಚಾಲಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ತಂದಿದ್ದರು. 15 ವರ್ಷಕ್ಕಿಂತ ಹಳೆಯ ವಾಹನಗಳ ನಿಷೇಧಿಸಲಾಗುತ್ತದೆ’ ಎಂದರು.

‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಪ್ರತಿ ವರ್ಷ ₹250 ಕೋಟಿ ನಷ್ಟ ಅನುಭವಿಸಿದೆ. ಮಿನಿ ಬಸ್‌ಗಳ ಸಂಚಾರ ಆರಂಭಿಸಿದರೆ ನಿರ್ವಹಣಾ ವೆಚ್ಚ ದುಪ್ಪಟ್ಟಾಗುತ್ತದೆ. ಹಾಗಾಗಿ, ಮಿನಿ ಬಸ್‌ಗಳನ್ನು ಓಡಿಸುವುದಿಲ್ಲ’ ಎಂದರು.

ADVERTISEMENT

ವಿಷಯ ಪ್ರಸ್ತಾಪಿಸಿದ ಆರ್‌.ಅಶೋಕ್‌, ‘ಬೆಂಗಳೂರು ಸಹ ಮಾಲಿನ್ಯದಲ್ಲಿ ದೆಹಲಿಯ ಹಾದಿಯಲ್ಲಿ ಸಾಗಿದೆ. ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕಿದೆ’ ಎಂದು ಹೇಳಿದರು.

‘ಸಂಚಾರ ದಟ್ಟಣೆಗೆ ರೇಸ್‌ ಕೋರ್ಸ್‌ ಸಹ ಕಾರಣ. ಅದನ್ನು ಮುಚ್ಚಬೇಕು. ಆಟೊ ಚಾಲಕರು ವಾಹನವಿಡಿ ದುಡಿದ ಹಣವನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಸುರಿಯುತ್ತಾರೆ. ಗಾಲ್ಫ್‌ ಕ್ಲಬ್‌ನಿಂದ ₹250 ಕೋಟಿ ವಸೂಲಿ ಮಾಡಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೂಚಿಸಿದೆ. ನಾಲ್ಕೈದು ಕ್ಲಬ್‌ಗಳಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಲಾಭ ಪಡೆಯುವವರು ನೂರಿನ್ನೂರು ಮಂದಿ ಮಾತ್ರ’ ಎಂದರು.

ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕಿದೆ. ಬಿಎಂಟಿಸಿ ಬಸ್‌ ದರ ಸಹ ದುಬಾರಿ. ಅದಕ್ಕಿಂತ ದ್ವಚಕ್ರ ವಾಹನದಲ್ಲಿ ಸಂಚರಿಸುವುದು ಮಿತವ್ಯಯಕಾರಿ ಎಂಬಂತಾಗಿದೆ. ಬಸ್‌ ದರ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.

’ನಗರದಲ್ಲಿ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ವಿಳಂಬ ಮಾಡಲಾಗುತ್ತಿದೆ. ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಆರಂಭವಾಗಿಲ್ಲ. ಸರ್ಕಾರ ಈ ದಿಸೆಯಲ್ಲಿ ಮುತುವರ್ಜಿ ವಹಿಸಬೇಕು‘ ಎಂದು ಒತ್ತಾಯಿಸಿದರು.

ವಿ.ಸೋಮಣ್ಣ, ’ಪರಿಷ್ಕೃತ ಮಹಾಯೋಜನೆ–2031 ತಯಾರಿಸಲು ಅಹವಾಲು ಆಲಿಸಲಾಗಿತ್ತು. ಈಗ ಈ ಯೋಜನೆ ನನೆಗುದಿಗೆ ಬಿದ್ದಿದೆ‘ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.