ಬೆಂಗಳೂರು: ‘ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಅರ್ಹರ ಕಾರ್ಡ್ ರದ್ದಾಗಿದ್ದರೆ ಅವರಿಂದ ಮತ್ತೆ ಅರ್ಜಿ ಪಡೆದು ಬಿಪಿಎಲ್ ಕಾರ್ಡ್ ನೀಡಲಾಗುವುದು. ಅರ್ಹರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ’ ಎಂದೂ ಅವರು ಹೇಳಿದರು.
‘ಸರ್ಕಾರಿ ನೌಕರರು, ಸಹಕಾರಿ ಸಂಘಗಳ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಿರುವ ಕಾರಣ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗೆ ಪರಿಷ್ಕರಿಸುವ ವೇಳೆ ಕೆಲವು ಕಡೆ ಹೆಚ್ಚುಕಮ್ಮಿಯಾಗಿದೆ. ಅದನ್ನು ಬಗೆಹರಿಸುತ್ತೇವೆ’ ಎಂದರು.
‘ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಮನೆಗೆ ಭೇಟಿ ಪರಿಶೀಲನೆ ಮಾಡಬಹುದಲ್ಲವೇ’ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಆಹಾರ ಇಲಾಖೆಯ ಸಚಿವರಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ರದ್ದಾಗಿರುವ ಬಿಪಿಎಲ್ ಕಾರ್ಡ್‌ಗಳ ಪಟ್ಟಿಯನ್ನು ಶಾಸಕರಿಗೆ ನೀಡುತ್ತೇವೆ. ಅರ್ಹರ ಕಾರ್ಡ್ ರದ್ದಾಗಿದೆಯೇ ಎಂದು ತಂಡ ರಚಿಸಿ ಅವರು ಪರಿಶೀಲಿಸಲಿದ್ದಾರೆ. ಯಾರಿಗಾದರೂ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸುವಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ತಂಡದವರಿಗೂ ಜವಾಬ್ದಾರಿ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.