ಬೆಂಗಳೂರು: ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಮಾಡಿದೆ.
ಸರ್ಕಾರದ ಕಾಮಗಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕೆಟಿಟಿಪಿ ಕಾಯ್ದೆಯಲ್ಲಿನ ತಿದ್ದುಪಡಿಯು ₹2 ಕೋಟಿವರೆಗೆ ಸಿವಿಲ್ ಗುತ್ತಿಗೆ ಮತ್ತು ₹1 ಕೋಟಿವರೆಗೆ ಸರಕು ಮತ್ತು ಸೇವಾ ಗುತ್ತಿಗೆಗಳಿಗೆ ಶೇ 4ರಷ್ಟು ಮೀಸಲಾತಿಗೆ ಅನುಮತಿ ನೀಡುವುದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಧರ್ಮ ಮತ್ತು ಜಾತಿಯ ಆಧಾರದ ಮೇಲೆ ನಾಗರಿಕರ ನಡುವೆ ತಾರತಮ್ಯ ಮಾಡುವುದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ. ಸಂವಿಧಾನ ರಚಿಸುವಾಗಲೇ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ವಿರೋಧಿಸಿದ್ದರು ಎಂದು ಹೇಳಿದೆ.
ನಿಯೋಗದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ದೀಪಕ್ ರಾಜಗೋಪಾಲ್, ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಮತ್ತು ಬಜರಂಗ ದಳದ ಸಹ ಸಂಯೋಜಕ ಗೋವರ್ಧನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.