ADVERTISEMENT

ವಿಧಾನ ಪರಿಷತ್‌ ಚುನಾವಣೆ 2021 Live: ಮತ ಚಲಾವಣೆ ವೇಳೆ ಯಡಿಯೂರಪ್ಪ ಯಡವಟ್ಟು?

ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ವಿಧಾನ ಪರಿಷತ್‌ ಸಭಾನಾಯಕ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೇರಿ ಒಟ್ಟು 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ರಾಜಕೀಯ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪೈಕಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಕಣದಲ್ಲಿರುವ ಏಕೈಕ ಮಹಿಳೆ.ಒಟ್ಟು 98,846 ಮತದಾರರಿದ್ದು, ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಮತಚಲಾವಣೆ ಆಗುತ್ತಿದೆ. ರಾಜ್ಯದಾದ್ಯಂತ 6,073 ಮತಗಟ್ಟೆಗಳನ್ನು ತೆರೆಯಲಾಗಿದೆ. ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತದಾನ ಮಾಡಲಿದ್ದಾರೆ. ಡಿಸೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 13:40 IST
Last Updated 10 ಡಿಸೆಂಬರ್ 2021, 13:40 IST

ಮತ ಚಲಾವಣೆ ವೇಳೆ ಯಡಿಯೂರಪ್ಪ ಯಡವಟ್ಟು?

ಶಿವಮೊಗ್ಗ: ಶಿಕಾರಿಪುರ ಪುರಸಭೆಯ ಮತಗಟ್ಟೆಯಲ್ಲಿ ಮತ ಚಲಾಯಿಸುವಾಗ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಯಡವಟ್ಟು ಮಾಡಿಕೊಂಡಿದ್ದಾರಾ ಎಂಬ ವದಂತಿ ಮತದಾನದ ನಂತರ ಹರಿದಾಡಿತು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಬೇಸರದ ಮುಖದಲ್ಲಿ ಹೊರಬಂದ ಅವರು ಮತಗಟ್ಟೆ ಅಧಿಕಾರಿಗಳ ಬಳಿ ತಪ್ಪಾಗಿದ್ದರೆ ಬ್ಯಾಲೆಟ್‌ ಪೇಪರ್‌ ಬೇರೆ ಕೊಡುತ್ತೀರಾ ಎಂದು ಪ್ರಶ್ನಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ಮತ ಚಲಾಯಿಸುವಾಗ ಯಡಿಯೂರಪ್ಪ ಅವರು ತಮ್ಮ ಪಕ್ಷದ ಅಭ್ಯರ್ಥಿ ಡಿ.ಎಸ್.ಅರುಣ್‌ ಬದಲು ಬೇರೆ ಅಭ್ಯರ್ಥಿಗೆ ಮತ ಚಲಾಯಿಸಿ ಬಿಟ್ಟರಾ? ಅಥವಾ ತಪ್ಪು ಪ್ರಾಶಸ್ತ್ಯದ ಅಂಕಿ ನಮೂದಿಸಿಬಿಟ್ಟಾರಾ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆಯುತ್ತಿವೆ.

ಮತದಾನ ಬಹಿಷ್ಕರಿಸಿದ್ದು ಏಳು, ಬದ್ಧರಾಗಿದ್ದು ಒಬ್ಬರು

ಶಿವಮೊಗ್ಗ: ಮೂರು ವರ್ಷಗಳಿಂದ ಮರಳು ಕ್ವಾರಿಯ ರಾಜಧನ ₹ 2.48 ಕೋಟಿ ಪಂಚಾಯಿತಿಗೆ ನೀಡಿಲ್ಲ ಎಂಬ ಕಾರಣಕ್ಕೆ ತೀರ್ಥಹಳ್ಳಿ ತಾಲ್ಲೂಕು ನಾಲೂರು –ಕೊಳಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಎಲ್ಲ 7 ಸದಸ್ಯರೂ ಮತದಾನ ಬಹಿಷ್ಕರಿಸಿದ್ದರು. ಕೊನೆಯ ಕ್ಷಣದಲ್ಲಿ 6 ಸದಸ್ಯರು ಒತ್ತಡ, ಆಮಿಷಕ್ಕೆ ಮಣಿದು ಮತ ಚಲಾಯಿಸಿದರು. ಸದಸ್ಯ ಬಿ.ಜಿ.ಸಂದೀಪ್‌ ಗಾರ್ಡರ ಗದ್ದೆ ಅವರು ಮತ ಚಲಾಯಿಸದೆ ಬದ್ಧತೆ ಪ್ರದರ್ಶಿಸಿದರು.

ADVERTISEMENT

ಬೆಳಗಾವಿಯಲ್ಲಿ ಶೇ 99.97ರಷ್ಟು ಮತದಾನ

ಬೆಳಗಾವಿ: ಜಿಲ್ಲೆಯಲ್ಲಿ ವಿಧಾನಪರಿಷತ್‌ ದ್ವಿಸದಸ್ಯ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ಮುಗಿಗಿದ್ದು, ಶೇ 99.97ರಷ್ಟು ಮತದಾನವಾಗಿದೆ. 8,849 ಮತದಾರರ ಪೈಕಿ 8,846 ಮಂದಿ ಮತ ಹಕ್ಕು ಚಲಾಯಿಸಿದ್ದಾರೆ. ರಾಮದುರ್ಗ, ಬೆಳಗಾವಿ ಮತ್ತು ಅಥಣಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಮತದಾನದಿಂದ ದೂರ ಉಳಿದಿದ್ದಾರೆ.  ಉಳಿದ ತಾಲ್ಲೂಕುಗಳಲ್ಲಿ ಶೇ 100ರಷ್ಟು ಮತದಾನವಾಗಿದೆ.

ಗೋಕಾಕದಲ್ಲಿ ಶೇ 100ರಷ್ಟು ಮತದಾನ

ಗೋಕಾಕ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ 100ರಷ್ಟು ಮತದಾನವಾಗಿದೆ.

ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಂತಿಯುತ ಮತದಾನವಾಗಿದೆ. 35 ಮತಗಟ್ಟೆಗಳಲ್ಲಿ ಎಲ್ಲ 684 ಮತದಾರರೂ (323 ಪುರುಷರು ಹಾಗೂ 361 ಮಹಿಳೆಯರು) ಹಕ್ಕು ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಶಾಸಕ ರಮೇಶ ಜಾರಕಿಹೊಳಿ ನಗರಸಭೆಯ ಮತಗಟ್ಟೆ 261ರಲ್ಲಿ ಮತದಾನ ಮಾಡಿದರು. ಗೋಕಾಕ ಮತ್ತು ಅರಭಾವಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ ಚಲಾಯಿಸಿದರು. ಕೆಲ ಗ್ರಾಮಗಳಲ್ಲಿ ಪಂಚಾಯಿತಿ ಸದಸ್ಯರೆಲ್ಲರು ಒಟ್ಟಾಗಿ ಬಂದು ಸರದಿಯಲ್ಲಿ ಮತದಾನ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಾಲ್ಲೂಕಿನ ಗುಜನಾಳ ಗ್ರಾಮದಲ್ಲಿ ಮತಗಟ್ಟೆ ಮುಂದೆ ಕುಳಿತಿದ್ದರು. ಅವರ ಪುತ್ರ ರಾಹುಲ್ ಜಾರಕಿಹೊಳಿ ಕೊಣ್ಣೂರ ಪುರಸಭೆ ಹಾಗೂ ಪುತ್ರಿ ಪ್ರಿಯಾಂಕಾ ಶಿಂಧಿಕುರಬೇಟ ಗ್ರಾಮದಲ್ಲಿ ಮತಗಟ್ಟೆ ಏಜೆಂಟರಾಗಿ ಕಾರ್ಯನಿರ್ವಹಿಸಿ ಗಮನಸೆಳೆದರು. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಮುಖಂಡ ಅಶೋಕ ಪೂಜಾರಿ ಮಮದಾಪೂರ ಗ್ರಾಮದಲ್ಲಿ ಮತಗಟ್ಟೆ ಏಜೆಂಟ್‌ ಆಗಿ ಕಾರ್ಯನಿರ್ವಹಿಸಿದರು.

ಬಸವರಾಜ ಬೊಮ್ಮಾಯಿ ವಿಶ್ವಾಸ

ಸಚಿವೆ ಶಶಿಕಲಾ ಜೊಲ್ಲೆ ಮತದಾನ

ಬೆಳಗಾವಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ನಿಪ್ಪಾಣಿಯಲ್ಲಿ ಮತ ಚಲಾಯಿಸಿದರು.

ಬಾಲಚಂದ್ರ ಜಾರಕಿಹೊಳಿ ಮತದಾನ

ಬೆಳಗಾವಿಯ ವಿಧಾನಪರಿಷತ್ ಚುನಾವಣೆಯಲ್ಲಿ ಅರಭಾವಿ ಶಾಸಕ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿಯಲ್ಲಿ ಮತ ಚಲಾಯಿಸಿ ವಿಜಯದ ಸಂಕೇತ ಪ್ರದರ್ಶಿಸಿದರು.

ಸಚಿವ ಉಮೇಶ ಕತ್ತಿ ಮತದಾನ

ಬೆಳಗಾವಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸಚಿವ ಉಮೇಶ ಕತ್ತಿ ಅವರು ಹುಕ್ಕೇರಿಯಲ್ಲಿ ಮತ ಚಲಾಯಿಸಿದರು.

ಮತದಾನದ ವೇಳೆ ಶ್ರೀಗಳ ಫೋಟೊ ಪ್ರದರ್ಶಿಸಿದ ಲಕ್ಷ್ಮಿ!

ಬೆಳಗಾವಿ: ವಿಧಾನಪರಿಷತ್‌ ಚುನಾವಣೆ ಅಂಗವಾಗಿ ಇಲ್ಲಿನ ಮಹಾನಗರ ಪಾಲಿಕೆ ಮತಗಟ್ಟೆ ಸಂಖ್ಯೆ 161ರಲ್ಲಿ ಶುಕ್ರವಾರ ಮತದಾನದ ವೇಳೆ, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ತಮ್ಮ ಮೊಬೈಲ್‌ ಫೋನ್‌ನಲ್ಲಿದ್ದ ಬಾಳೆಹೊನ್ನೂರು ರಂಭಾಪುರಿ ಮಠದ ಲಿಂ.ವೀರಗಂಗಾಧರ ಸ್ವಾಮೀಜಿ ಫೋಟೊ ಪ್ರದರ್ಶಿಸಿ ಗಮನಸೆಳೆದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನಾನೂ ಎಂದಿಗೂ ಅವರನ್ನು ನಂಬಿದ್ದೇನೆ. ನಿತ್ಯವೂ ಆರಾಧಿಸುತ್ತೇನೆ.  ಯಾವುದೇ ಉತ್ತಮ ಕೆಲಸಕ್ಕೆ ಮುನ್ನ, ಅಜ್ಜನನ್ನು ಸ್ಮರಿಸಿಕೊಂಡೆ ಮುಂದೆ ಹೆಜ್ಜೆ ಇಡುತ್ತೇನೆ. ಹಾಗಾಗಿ ಮತದಾನದ ವೇಳೆ ಫೋಟೊ ಪ್ರದರ್ಶಿಸಿ ಒಳಿತಾಗಲೆಂದು ಪ್ರಾರ್ಥಿಸಿದೆ’ ಎಂದು ತಿಳಿಸಿದರು.

ಶೋಭಾ ಕರಂದ್ಲಾಜೆ ಮತದಾನ

ಚಿಕ್ಕಮಗಳೂರು:  ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೊಪ್ಪ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮತದಾನ ಮಾಡಿದರು.

ಸಿದ್ದರಾಮಯ್ಯ ಮತದಾನ

ವಿಜಯಪುರ-ಬಾಗಲಕೋಟೆ ದ್ವಿ ಸದಸ್ಯ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಬಾದಾಮಿಯ ಪುರಸಭೆ ಕಾರ್ಯಾಲಯಯದ ಮತಗಟ್ಟೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಮತದಾನ ಮಾಡಿದರು.

ಧಾರವಾಡ: ಮಧ್ಯಾಹ್ನದವರೆಗೆ ಶೇ 84.06ರಷ್ಟು ಮತದಾನ

ಧಾರವಾಡ ಕ್ಷೇತ್ರದಲ್ಲಿ ಮಧ್ಯಾಹ್ನ  2 ಗಂಟೆಯವರೆಗೆ ಶೇ 84.06ರಷ್ಟು ಮತದಾನವಾಗಿದೆ

ವಿಧಾನ ಪರಿಷತ್ತಿನ  ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ  

ಧಾರವಾಡ ಜಿಲ್ಲೆ  ಶೇ 68.98

ಹಾವೇರಿ‌ ಜಿಲ್ಲೆ ಶೇ 88.93

ಗದಗ ಜಿಲ್ಲೆ ಶೇ 92. 93 ರಷ್ಟು ಮತದಾನವಾಗಿದೆ

ಚಿತ್ರದುರ್ಗ: ಮಧ್ಯಾಹ್ನದ ವೇಳೆಗೆ ಶೇ 10 ರಷ್ಟು ಮತದಾನ

ಚಿತ್ರದುರ್ಗ: ವಿಧಾನಪರಿಷತ್ತಿನ ಚಿತ್ರದುರ್ಗ ಕ್ಷೇತ್ರದಲ್ಲಿ ಮತದಾನ ವಿಳಂಬವಾಗುತ್ತಿದೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಶೇ 10 ರಷ್ಟು ಮತದಾನವಾಗಿದೆ.

5066 ಮತದಾರರು ಇದ್ದು, ಇದರಲ್ಲಿ 542 ಮತದಾರರು ಮಾತ್ರ ಹಕ್ಕು ಚಲಾವಣೆ ಮಾಡಿದ್ದಾರೆ.

ದಕ್ಷಿಣ ಕನ್ನಡ: ಶೇ 98.05ರಷ್ಟು ಮತದಾನ

ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆಗೆ ಶೇ 98.05ರಷ್ಟು ಮತದಾನ ಆಗಿದೆ.

ರಾಮನಗರ: ಶೇ 93ರಷ್ಟು ಮತದಾನ

ರಾಮನಗರ ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ ಶೇ 93ರಷ್ಟು ಮತದಾನ ಆಗಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಮತದಾನ

ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯ ನಗರಸಭೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಹಣಮಂತ ಆರ್. ನಿರಾಣಿ ಮತದಾನ

ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಚುನಾವಣೆಗೆ ಬೀಳಗಿಯ ಪಟ್ಟಣ ಪಂಚಾಯಿತಿಯಲ್ಲಿ ಹಕ್ಕು ಚಲಾಯಿಸಿದ ವಿಧಾನ ಪರಿಷತ್ ಸದಸ್ಯ  ಹಣಮಂತ ಆರ್ ನಿರಾಣಿ

ಎಸ್.ಆರ್. ಪಾಟೀಲ ಮತದಾನ

ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಬೀಳಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮತದಾನ ಕೇಂದ್ರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮತದಾನ ಮಾಡಿದರು.

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಜಿ.ಟಿ.ದೇವೇಗೌಡ ಹೇಳಿದವರಿಗೆ ವೋಟು!

ದಾವಣಗೆರೆ: ಶೇ 26.72ರಷ್ಟು ಮತದಾನ

ದಾವಣಗೆರೆ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನಡೆಯುತ್ತಿರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮಧ್ಯಾಹ್ನ 12ರವರೆಗೆ 744 ಮಂದಿ ಹಕ್ಕು ಚಲಾಯಿಸಿದ್ದು, ಶೇ 26.72ರಷ್ಟು ಮತದಾನವಾಗಿದೆ.
ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ ಜಗಳೂರು, ಹರಿಹರ ತಾಲ್ಲೂಕುಗಳಲ್ಲಿ  50 ಮಂದಿ ಹಕ್ಕು ಚಲಾಯಿಸಿದ್ದು, ಶೇ 3.36 ಮತದಾನವಾಗಿದೆ.

ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳಲ್ಲಿ 694 ಮಂದಿ ಹಕ್ಕು ಚಲಾಯಿಸಿದ್ದು, ಶೇ 53.63 ಮತದಾನವಾಗಿದೆ.

ನಗರಪಾಲಿಕೆ ಬಿಜೆಪಿ ಸದಸ್ಯರು ಒಟ್ಟಾಗಿ ಬಂದು ಮತ ಚಲಾಯಿಸಿದರು.  ಸಂಸದ ಜಿ.ಎಂ.ಸಿದ್ದೇಶ್ವರ, ವಿಧಾನಪರಿಷತ್ ಸದಸ್ಯರಾದ ಲೆಹರ್‌ಸಿಂಗ್, ತೇಜಸ್ವಿನಿ ರಮೇಶ್, ಎನ್. ರವಿಕುಮಾರ್ ಅವರೂ ಮತ ಚಲಾಯಿಸಿದರು.

ಮತದಾನದ ಬಳಿಕ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ನವೀನ್ ಅವರು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಎಲ್ಲಾ ಸದಸ್ಯರ ಅನುಕಂಪ ಇವರ ಮೇಲಿದೆ‘ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ’ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕೆ ಇಳಿಯದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ 12ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದ.ಕ. ದ್ವಿಸದಸ್ಯ ಕ್ಷೇತ್ರ: 12 ಗಂಟೆಗೆ ಶೇ 95.15 ರಷ್ಟು ಮತದಾನ

ಮಂಗಳೂರು: ದಕ್ಷಿಣ ಕನ್ನಡ ದ್ವಸದಸ್ಯ ಕ್ಷೇತ್ರದಲ್ಲಿ‌ ಮಧ್ಯಾಹ್ನ 12 ಗಂಟೆಗೆ ಶೇ 95.15 ರಷ್ಟು ಮತದಾನವಾಗಿದೆ.

ಬೈಂದೂರು ತಾಲ್ಲೂಕಿನಲ್ಲಿ ಶೇ 91.86, ಕುಂದಾಪುರ ಶೇ 93, ಬ್ರಹ್ಮಾವರ ಶೇ 96.25, ಉಡುಪಿ ಶೇ 94.85, ಕಾಪು ಶೇ 94.44, ಹೆಬ್ರಿ ಶೇ 98.36, ಕಾರ್ಕಳ ಶೇ 96.25, ಮೂಡುಬಿದಿರೆ ಶೇ 97.75, ಮಂಗಳೂರು ಶೇ 94.54, ಬಂಟ್ವಾಳ ಶೇ 94.80, ಬೆಳ್ತಂಗಡಿ ಶೇ 95.43, ಪುತ್ತೂರು ಶೇ 97.33, ಸುಳ್ಯ ಶೇ 92.74 ಹಾಗೂ ಕಡಬ ತಾಲ್ಲೂಕಿನಲ್ಲಿ ಶೇ 98.95 ಮತದಾನ‌ ಆಗಿದೆ.

ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಶೇ 99 ರಷ್ಟು ಮತದಾನ ಆಗಿತ್ತು.

ಹಾನಗಲ್ ಉಪ ಚುನಾವಣೆ ಫಲಿತಾಂಶ ಮರುಕಳಿಸಲಿದೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಹಾನಗಲ್ಲ ಉಪಚುನಾವಣೆ ಫಲಿತಾಂಶ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮರುಕಳಿಸಲಿದೆ. ಕಾಂಗ್ರೆಸ್ ಅಭ್ಯರ್ಥಿಯಾದ ನನ್ನ ಸಹೋದರ ಚನ್ನರಾಜ ಹಟ್ಟಿಹೋಳಿ ಮೊದಲ ಸುತ್ತಿನಲ್ಲೇ ಗೆಲ್ಲಲಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. 14 ತಾಲ್ಲೂಕುಗಳಲ್ಲಿ ನಮ್ಮ ಪಕ್ಷದ ಪರವಾಗಿ ಮತದಾರರಿದ್ದಾರೆ. ಗೆಲುವಿಗೆ ಬೇಕಿರುವ ಮತಗಳಿವೆ. ಒಳ್ಳೆಯ ವಾತಾವರಣವಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಗೆಲುವು ನಿಶ್ಚಿತ, ಸತೀಶ ಜಾರಕಿಹೊಳಿ

ಬೆಳಗಾವಿ: ಈ ಬಾರಿ‌ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು  ಜನರ ಮಧ್ಯೆ ಹಣಾಹಣಿ ನಡೆದಿದೆ. ಆದರೆ, ನಮ್ಮ ಬಳಿ ಗೆಲ್ಲುವಷ್ಟು ಸಂಖ್ಯಾಬಲವಿದೆ. ಎಲ್ಲರಿಗಿಂತ ಹೆಚ್ಚು ಮೊದಲ ಪ್ರಾಶಸ್ತ್ಯದ ಮತ ಪಡೆದು ಗೆಲ್ಲುತ್ತೇವೆ ಎಂದರು.

ಲಖನ್ ಜಾರಕಿಹೊಳಿ ಬಿಜೆಪಿ ಬಿ ಟೀಂ ಇದ್ದಂತೆ. ಬಿಜೆಪಿಯಲ್ಲಿ ಮಹಾಂತೇಶ ಕವಟಗಿಮಠ ಅಥವಾ ಲಖನ್ ಜಾರಕಿಹೊಳಿ ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಾರೆ. ಕಳೆದ ಲೋಕಸಭಾ ಉಪ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಬಹಳಷ್ಟು ಬದಲಾವಣೆಯಾಗಿದೆ. ಡಿ.14ರಂದು ಅದು ತಿಳಿಯಲಿದೆ ಎಂದರು.

ರಾಯಚೂರು-ಕೊಪ್ಪಳ ಕ್ಷೇತ್ರ: ಶೇ‌ 66.65 ಮತದಾನ

ರಾಯಚೂರು: ಕೊಪ್ಪಳ- ರಾಯಚೂರು ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 12 ಗಂಟೆವರೆಗೂ ಶೇ 66.65 ರಷ್ಟು ಮತದಾನವಾಗಿದೆ. ಒಟ್ಟು 6,497 ಮತದಾರರ ಪೈಕಿ 4330 ಮತಗಳು ಚಲಾವಣೆಯಾಗಿವೆ.

ಸಮಯ ನೋಡಿಕೊಂಡು ಮತ ಚಲಾಯಿಸಿದ ಕವಟಗಿಮಠ!

ಬೆಳಗಾವಿ: ಮಹಾನಗರ ಪಾಲಿಕೆ ಮತಗಟ್ಟೆ ಸಂಖ್ಯೆ 161ರಲ್ಲಿ, ವಿಧಾನಪರಿಷತ್ ಚುನಾವಣೆ
ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸಮಯ ನೋಡಿಕೊಂಡೇ ಹಕ್ಕು ಚಲಾಯಿಸಿದರು.

ಮಧ್ಯಾಹ್ನ 12:01 ಗಂಟೆ  ಆಗುವವರೆಗೂ ಮತಗಟ್ಟೆಯಲ್ಲಿ ಕಾದು ಕುಳಿತು ಹಕ್ಕು ಚಲಾಯಿಸಿದರು.

11.50 ಕ್ಕೆ ಪಾಲಿಕೆ ಕಚೇರಿಗೆ ಆಗಮಿಸಿದ ಅವರು, ಚುನಾವಣೆ ಸಿಬ್ಬಂದಿ ಜೊತೆಗೆ ಚರ್ಚೆ ಮಾಡುತ್ತ ಕುಳಿತರು.

12:01ರ ನಂತರ ಮತದಾನ ಮಾಡಿದರು.

ಸತೀಶ್ ಜಾರಕಿಹೊಳಿ‌ ಕಾಲಿಗೆ ನಮಸ್ಕರಿಸಿದ ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ: ವಿಧಾನಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆಪಿಸಿಸಿ ‌ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಹಾನಗರಪಾಲಿಕೆ  ಕಚೇರಿ‌ ಮತಗಟ್ಟೆಯಲ್ಲಿ ಶುಕ್ರವಾರ ಮತ ಚಲಾಯಿಸಿದರು.

ಮತದಾನ ಮಾಡಿದ ನಂತರ ಉಭಯ ನಾಯಕರು ಕುಶಲೋಪರಿ ವಿಚಾರಿಸಿದರು.

13 ಜನ ಪಾಲಿಕೆ ಸದಸ್ಯರ ಜೊತೆಗೆ ಕೈ ನಾಯಕರು ಮತದಾನ ಮಾಡಿದರು.

ಮತದಾನಕ್ಕೂ ಮುನ್ನ ಲಕ್ಷ್ಮಿ ಸತೀಶ್ ಜಾರಕಿಹೊಳಿ‌ ಕಾಲಿಗೆ ನಮಸ್ಕರಿಸಿದರು.

ಉಡುಪಿ: ಶೇ 94.69ರಷ್ಟು ಮತದಾನ

ಉಡುಪಿ: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ಚುನಾವಣೆ ಜಿಲ್ಲೆಯಾದ್ಯಂತ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನ 12 ಗಂಟೆಯವರೆಗೆ ಶೇ 94.69ರಷ್ಟು ಮತದಾನ ನಡೆದಿದೆ.

ಬೈಂದೂರು ತಾಲ್ಲೂಕಿನಲ್ಲಿ ಶೇ 91.86, ಕುಂದಾಪುರ ಶೇ 93, ಬ್ರಹ್ಮಾವರ ಶೇ 96.25, ಉಡುಪಿ ಶೇ94.85, ಕಾಪು ಶೇ 94.44, ಹೆಬ್ರಿ ಶೇ 98.36, ಕಾರ್ಕಳ ಶೇ 96.25ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ ಮತ ಚಲಾಯಿಸಲು ಅರ್ಹತೆ ಪಡೆದಿದ್ದ 2,505 ಮತದಾರರ ಪೈಕಿ 2,372 ಮತದಾರರು ಮತದಾನ.

ಎಲ್ಲೆಡೆ ಬಿಜೆಪಿ ಪರ ವಾತಾವರಣ: ಅಭಯ ಪಾಟೀಲ

ಬೆಳಗಾವಿ: 'ಎಲ್ಲೆಡೆ ನಮ್ಮ ಪಕ್ಷದ ಪರ ವಾತಾವರಣವಿದ್ದು, ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೊದಲ ಸುತ್ತಿನಲ್ಲೇ ಜಯ ಗಳಿಸಲಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಮತದಾನ ಮಾಡಿದ ಬಳಿಕ ಅವರು ಮಾತನಾಡಿದರು.

ಬೆಳಗಾವಿ ಪರಿಷತ್ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ. ಇಂದಿನ ವಾತಾವರಣ ನೋಡಿದರೆ  ಮೂರನೇ ಬಾರಿ ಮಹಾಂತೇಶ ಕವಟಗಿಮಠ ಗೆಲ್ಲುವುದು ನಿಶ್ಚಿತ.  ಕವಟಗಿಮಠ ಹ್ಯಾಟ್ರಿಕ್ ಹಿರೋ ಆಗುವುದರಲ್ಲಿ ಸಂಶಯವೇ ಇಲ್ಲ ಎಂದರು.

ಬೆಳಗಾವಿ, ಖಾನಾಪುರ ಕ್ಷೇತ್ರದಲ್ಲಿ ವಾತಾವರಣ ಬದಲಾಗಿದೆ.
ಪಾಲಿಕೆಯ 35 ಬಿಜೆಪಿ ಸದಸ್ಯರ ಜೊತೆಗೆ ಐವರು ಪಕ್ಷೇತರ ಸದಸ್ಯರೂ ನಮ್ಮ ಪರವಾಗಿದ್ದಾರೆ. ಒಟ್ಟು 40 ಮತದಾರರು ನಮ್ಮ ಪರವಾಗಿ ಮತ ಚಲಾಯಿಸಲಿದ್ದಾರೆ. ಎರಡನೇ ಪ್ರಾಶಸ್ತ್ಯದ ಮತ ನೀಡುವ ವಿಚಾರವಾಗಿಯೂ ನಮ್ಮ ಪಕ್ಷದ ಆದೇಶ ಪಾಲನೆ ಮಾಡಲಿದ್ದಾರೆ ಎಂದರು.

ಬಿಜೆಪಿಗೆ 15ಕ್ಕೂ ಹೆಚ್ವು ಸ್ಥಾನಗಳಲ್ಲಿ ಗೆಲುವು: ಜೋಶಿ ವಿಶ್ವಾಸ

ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ‌ಗೆಲುವು ಸಾಧಿಸಲಿದೆ‌ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಚುನಾವಣೆ: 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ, ಬಿಎಸ್‌ವೈ

ಶಿಕಾರಿಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು  ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಶಾಸಕ ಜಗದೀಶ ಶೆಟ್ಟರ್

ಹುಬ್ಬಳ್ಳಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಶಾಸಕ ಅರವಿಂದ ಬೆಲ್ಲದ

ರಾಯಚೂರು ನಗರ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲ

ರಾಯಚೂರು: ಮತದಾನ ಮಾಡದಿರುವ ನಗರಸಭೆ ಸದಸ್ಯರೊಬ್ಬರ ಹೆಸರಿನ ಮುಂದೆ ಮತಗಟ್ಟೆ ಸಿಬ್ಬಂದಿಯು ಟಿಕ್ ಮಾರ್ಕ್ ಮಾಡಿಕೊಂಡಿದ್ದರಿಂದ ರಾಯಚೂರು ನಗರಸಭೆ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು.

ವಾರ್ಡ್ ಸಂಖ್ಯೆ 24 ರ ಕಾಂಗ್ರೆಸ್ ಸದಸ್ಯೆ ಎನ್. ಶ್ರೀನಿವಾಸ ರೆಡ್ಡಿ ಅವರು ಮತದಾನ ಮಾಡುವುದಕ್ಕೆ ಬಂದಾಗ, ಅವರ ಹೆಸರಿನ‌ ಮುಂದೆ ಟಿಕ್ ಮಾಡಿರುವುದನ್ನು ನೋಡಿ ಸಿಬ್ಬಂದಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಮತಗಟ್ಟೆ ಸಿಬ್ಬಂದಿ ಮಾಡಿದ ತಪ್ಪು ಅರಿವಾದ ಬಳಿಕ, ಶ್ರೀನಿವಾಸರೆಡ್ಡಿ ಅವರಿಗೆ ಮತದಾನಕ್ಕೆ ಅವಕಾಶ ನೀಡಲಾಯಿತು.

ಚಿತ್ರದುರ್ಗ: ಶೇ 0.57 ರಷ್ಟು ಮತದಾನ

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಲ್ಲಿ ಶೇ 0.57 ರಷ್ಟು ಮತದಾನ ನಡೆದಿದೆ.

ಬೆಳಿಗ್ಗೆ 8 ಗಂಟೆಯಿಂದ 10 ಗಂಟೆವರೆಗಿನ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ 5066 ಮತಗಳಿವೆ. ಇದರಲ್ಲಿ 26 ಪುರುಷರು ಹಾಗೂ 6 ಮಹಿಳೆಯರು ಸೇರಿ 29 ಮಂದಿ ಮಾತ್ರ ಮತದಾನ ಮಾಡಿದ್ದಾರೆ.

ಸಂಜೆ 4 ಗಂಟೆಯವರೆಗರ ಮತದಾನಕ್ಕೆ ಅವಕಾಶವಿದೆ.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಚಿತ್ರದುರ್ಗ ನಗರಸಭೆಯ ಮತಗಟೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮತದಾನ ಮಾಡಿದ್ದಾರೆ.

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ–ನಿಧಾನಗತಿ ಮತದಾನ, ಶೇ 7.5ರಷ್ಟು ಮತದಾನ

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರಕ್ಕೆ  ಮತದಾನ ನಿಧಾನಗತಿಯಲ್ಲಿ ನಡೆಯುತ್ತಿದೆ. 

ಬೆಳಿಗ್ಗೆ 11 ರವರೆಗೆ ಕೇವಲ ಶೇ 7.5ರಷ್ಟು ಮತದಾನವಾಗಿತ್ತು.

ಕಾರ್ಪೊರೇಟರ್ ಗಳು, ಶಾಸಕರು ಪಾಲಿಕೆಯಲ್ಲಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮತದಾನ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಗುಂಗ್ರಾಲ್ ಛತ್ರ ಗ್ರಾ.ಪಂನಲ್ಲಿ 11 ಗಂಟೆಗೆ ವರೆಗೆ ಒಬ್ಬರು ಮಾತ್ರ ಮತ ಹಾಕಿದ್ದರು. ಕ್ಷೇತ್ರದಲ್ಲಿ 26 ಸದಸ್ಯರು ಇದ್ದಾರೆ.

ಕಾಂಗ್ರೆಸ್‌ ಪಕ್ಷದ ಡಾ.ಡಿ.ತಿಮ್ಮಯ್ಯ, ಬಿಜೆಪಿಯ ಆರ್‌.ರಘು (ಕೌಟಿಲ್ಯ) ಹಾಗೂ ಜೆಡಿಎಸ್‌ ಪಕ್ಷದ ಸಿ.ಎನ್‌.ಮಂಜೇಗೌಡ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.

ಅವಳಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಒಟ್ಟು 393 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು. 

ಗ್ರಾಮ ಪಂಚಾಯಿತಿ ಸದಸ್ಯರು, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆ ಸದಸ್ಯರು, ವಿಧಾನ ಪರಿಷತ್‌, ವಿಧಾನಸಭೆ ಸದಸ್ಯರು ಹಾಗೂ ಸಂಸದರು ಮತದಾನದ ಹಕ್ಕು ಹೊಂದಿದ್ದಾರೆ.

ಚುನಾವಣೆ: ಶೇ 6.37ರಷ್ಟು ಮತದಾನ

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ (ಧಾರವಾಡ, ಹಾವೇರಿ ಹಾಗೂ ಗದಗ ಕ್ಷೇತ್ರ) ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ ಶೇ 6.37ರಷ್ಟು ಮತದಾನವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಶೇ 4.44, ಹಾವೇರಿ ಜಿಲ್ಲೆಯಲ್ಲಿ ಶೇ 6.66 ಹಾಗೂ ಗದಗ ಜಿಲ್ಲೆಯಲ್ಲಿ ಶೇ 7.98ರಷ್ಟು ಮತದಾನವಾಗಿದೆ.

ಯಾದಗಿರಿ: ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ನೀರಸ ಮತದಾನ: ಶೇ 11.03

ಯಾದಗಿರಿ: ಕಲಬುರಗಿ-ಯಾದಗಿರಿ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಮತದಾನ  ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು,  ನೀರಸವಾಗಿದೆ. 10 ಗಂಟೆ ವರೆಗೂ ಶೇ 11.03 ಮತದಾನವಾಗಿದೆ.

138 ಮಹಿಳೆ, 133 ಪುರುಷರು ಸೇರಿದಂತೆ 271 ಮತದಾರರು ಮತದಾನ ಮಾಡಿದ್ದಾರೆ. ಶೇ 11.67 ಪುರುಷ, 10.47 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಪಸಪುಲ್ ಗ್ರಾಮ ಪಂಚಾಯಿತಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ 10.30 ರ ತನಕ ಒಬ್ಬರೇ ಮತದಾನ ಮಾಡಿದ್ದಾರೆ. ಒಟ್ಟು 16 ಮತದಾರರಿದ್ದು, ಮತದಾನ ಆರಂಭವಾಗಿ ಎರಡೂವರೆ ಗಂಟೆಯಾದರೂ ಒಬ್ಬರೇ ಮತ ಚಲಾಯಿಸಿದ್ದಾರೆ.

ಪಸಪುಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪಸಪುಲ್, ಪಸಪುಲ್ ತಾಂಡಾ, ಗೋಪಾಳಪುರ, ಗಣಪುರ, ಮಗ್ದಂಪುರ ಗ್ರಾಮಗಳು ಒಳಪಟ್ಟಿವೆ.

ಅರಕೇರಾ (ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಮತದಾರರಿದ್ದು, 8 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಂದಕೂರ ಗ್ರಾಮ ಪಂಚಾಯಿತಿಯಲ್ಲಿ 11 ಮತದಾರರಿದ್ದು, ಎಲ್ಲರೂ ಮತಚಲಾಯಿಸಿದ್ದಾರೆ.

ಹೆಸರಿಗೆ ಮಾತ್ರ ನಿಷೇಧಾಜ್ಞೆ: ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 23 ಮತದಾರರಿದ್ದು, 21 ಜನ ಮತದಾನ ಮಾಡಿದ್ದಾರೆ. ಆದರೆ, ಹೆಸರಿಗೆ ಮಾತ್ರ 200 ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮತಗಟ್ಟೆ ಬಳಿ ಹಲವರು ಜನ ಗುಂಪು ಗುಂಪಾಗಿ ಸೇರಿದ್ದರು. ಕೋವಿಡ್ ನಿಮಯಗಳು ಪಾಲನೆಯಾಗಿಲ್ಲ.‌ ಮತಗಟ್ಟೆ ಬಳಿ ಪೊಲೀಸರು ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ದ.ಕ. ದ್ವಿಸದಸ್ಯ ಕ್ಷೇತ್ರ: ಶೇ 45.98 ರಷ್ಟು ಮತದಾನ

ಮಂಗಳೂರು: ದಕ್ಷಿಣ ಕನ್ನಡ ದ್ವಸದಸ್ಯ ಕ್ಷೇತ್ರದಲ್ಲಿ‌ ಬೆಳಿಗ್ಗೆ 10 ಗಂಟೆಗೆ ಶೇ.45.98 ಮತದಾನವಾಗಿದೆ.
ಬೈಂದೂರು ತಾಲ್ಲೂಕಿನಲ್ಲಿ ಶೇ 50.39, ಕುಂದಾಪುರ ಶೇ 47.43, ಬ್ರಹ್ಮಾವರ ಶೇ 29.74, ಉಡುಪಿ ಶೇ 23.31, ಕಾಪು ಶೇ 24.31, ಹೆಬ್ರಿ ಶೇ 71.31, ಕಾರ್ಕಳ ಶೇ 72.60, ಮೂಡುಬಿದಿರೆ ಶೇ 40.54, ಮಂಗಳೂರು ಶೇ 56.57, ಬಂಟ್ವಾಳ ಶೇ 51.38, ಬೆಳ್ತಂಗಡಿ ಶೇ 37.17, ಪುತ್ತೂರು ಶೇ 51.73, ಸುಳ್ಯ ಶೇ 46.53 ಹಾಗೂ ಕಡಬ ತಾಲ್ಲೂಕಿನಲ್ಲಿ ಶೇ 35.44 ಮತದಾನ‌ ಆಗಿದೆ.

ಮಂಗಳೂರು ತಾಲ್ಲೂಕಿನ ಅಡ್ಯಾರ್ ಗ್ರಾಮ ಪಂಚಾಯಿತಿ ಕಚೇರಿಯ ಮತಗಟ್ಟೆ 198 ರಲ್ಲಿ ಒಟ್ಟು 31 ಮತಗಳಿದ್ದು, ಅವುಗಳಲ್ಲಿ 10 ಗಂಟೆಗೆ 30 ಮತಗಳು ಚಲಾವಣೆಯಾಗಿವೆ. 16 ಮಹಿಳೆಯರು ಹಾಗೂ 14 ಮಂದಿ ಪುರುಷರು ಮತ ಚಲಾವಣೆ ಮಾಡಿದ್ದಾರೆ.

ಧಾರವಾಡ: ಬೆಳಿಗ್ಗೆ 10ರವರೆಗೆ ಶೇ 6.37ರಷ್ಟು ಮತದಾನ

ವಿಧಾನ ಪರಿಷತ್ತಿನ  ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರ  

ಧಾರವಾಡ ಜಿಲ್ಲೆ  ಶೇ 4.44

ಹಾವೇರಿ‌ ಜಿಲ್ಲೆ ಶೇ 6.66

ಗದಗ ಜಿಲ್ಲೆ ಶೇ 7.98 ರಷ್ಟು ಮಠದನವಾಗಿದೆ

ಒಟ್ಟು - ಶೇ.6.37 ರಷ್ಟು ಮತದಾನವಾಗಿದೆ

ಬೆಳಗಾವಿ: ಶೇ 7.10ರಷ್ಟು ಮತದಾನ

ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೊದಲ ಎರಡು ಗಂಟೆಗಳಲ್ಲಿ ಅಂದರೆ ಬೆಳಿಗ್ಗೆ 10ರ ವೇಳೆಗೆ ಶೇ 7.10ರಷ್ಟು ಮತದಾನವಾಗಿದೆ.

ಒಟ್ಟು 511 ಮತಗಟ್ಟೆಗಳಲ್ಲಿ 628 ಮಂದಿ ಮತ ಹಕ್ಕು ಚಲಾಯಿಸಿದ್ದಾರೆ.

ಕಮಲಾಪುರ ಮತಗಟ್ಟೆಯಲ್ಲಿ ಸಚಿವ ಆನಂದ್ ಸಿಂಗ್ ಮತ ಚಲಾವಣೆ

ಹೊಸಪೇಟೆ (ವಿಜಯನಗರ): ವಿಧಾನ ಪರಿಷತ್ತಿಗೆ ಬಳ್ಳಾರಿ ಮತ್ತು ವಿಜಯನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆಗೆ ಶುಕ್ರವಾರ ಚುರುಕಿನ ಮತದಾನ ನಡೆಯುತ್ತಿದೆ.

ಜಿಲ್ಲೆಯ ಆಯಾ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಸದಸ್ಯರು ಬಂದು ಹಕ್ಕು ಚಲಾಯಿಸಿ ಹೋಗುತ್ತಿದ್ದಾರೆ. 

ಒಟ್ಟು 4,663 ಮತದಾರರು 247 ಮತಗಟ್ಟೆಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವರು. ಕಾಂಗ್ರೆಸ್ ನಿಂದ ಕೆ.ಸಿ. ಕೊಂಡಯ್ಯ, ಬಿಜೆಪಿಯ ಏಚರೆಡ್ಡಿ ಸತೀಶ್, ಪಕ್ಷೇತರ ಅಭ್ಯರ್ಥಿಗಳಾದ ಗಂಗಿರೆಡ್ಡಿ ಮತ್ತು ಸಿ.ಎಂ. ಮಂಜುನಾಥ್ ಕಣದಲ್ಲಿದ್ದಾರೆ.

11ಗಂಟೆಯವರೆಗೆ ಶೇ 14ರಷ್ಟು ಮತದಾನವಾಗಿದೆ. ತಾಲ್ಲೂಕಿ‌ನ ಕಮಲಾಪುರ ಮತಗಟ್ಟೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಕ್ಕು ಚಲಾಯಿಸಿದರು.

ಚಿಕ್ಕಮಗಳೂರು: 10 ಗಂಟೆವರೆ ಶೇ 28 ಮತದಾನ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆ ಮತದಾನ 8 ಗಂಟೆಯಿಂದ ಆರಂಭವಾಗಿದೆ. 10 ಗಂಟೆವರೆ ಶೇ 28 ಮತದಾನವಾಗಿದೆ.
ಶಾಸಕ ಟಿ.ಡಿ.ರಾಜೇಗೌಡ ಅವರು ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ, ಪ್ರಾಣೇಶ್ ಅವರು ಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ಮತ ಚಲಾಯಿಸಿದರು.
ಕಾಫಿನಾಡಿನಲ್ಲಿ 230 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ‌ ಒಟ್ಟು 2417 ಮತದಾರರು ಇದ್ದಾರೆ. 10 ಗಂಟೆವರೆಗೆ 677 ಮಂದಿ ಮತ ಚಲಾಯಿಸಿದ್ದಾರೆ.

ಬಿಜೆಪಿಗೆ ನೆಲೆ ಇಲ್ಲ ಎಂದವರಿಗೆ ತಕ್ಕ ಉತ್ತರ

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲ. 500 ಮತ ಬರುವುದಿಲ್ಲ ಎಂದವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ತುಮಕೂರು: ಮತದಾನಕ್ಕೆ ನಿರುತ್ಸಾಹ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಮತದಾನ ಜಿಲ್ಲೆಯಲ್ಲಿ ಮಂದಗತಿಯಲ್ಲಿ ಸಾಗಿದೆ. ಗ್ರಾಮ ಪಂಚಾಯಿತಿ ಬಹುತೇಕ ಮತಗಟ್ಟೆಗಳಲ್ಲಿ ಒಬ್ಬಿಬ್ಬರು ಮಾತ್ರ ಮತದಾನ ಮಾಡಿದ್ದಾರೆ.

ಬೆಳಿಗ್ಗೆ 10 ಗಂಟೆ ವೇಳೆಗೆ ಶೇ 4.26ರಷ್ಟು ಮಾತ್ರ ಮತದಾನವಾಗಿದೆ. ಸಂಜೆ 4 ಗಂಟೆ ವರೆಗೆ ಮತದಾನಕ್ಕೆ ಸಮಯಾವಕಾಶವಿದ್ದು, ಮಧ್ಯಾಹ್ನದ ವೇಳೆಗೆ ಬಿರುಸಾಗಬಹುದು.

ತುಮಕೂರು ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆ ಗ್ರಾಮ ಪಂಚಾಯಿತಿಯಲ್ಲಿ ನಿಧಾನಗತಿಯಲ್ಲಿ ಮತದಾನ ಆರಂಭವಾಗಿದ್ದು, 17 ಗ್ರಾ.ಪಂ ಸದಸ್ಯರಲ್ಲಿ ಕೇವಲ ಒಬ್ಬರು ಮತ ಚಲಾಯಿಸಿದ್ದು ಕಂಡುಬಂತು. ಗೂಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ 22 ಸದಸ್ಯರ ಪೈಕಿ ಈವರೆಗೆ ಯಾರೊಬ್ಬರು ತಮ್ಮ ಹಕ್ಕು ಚಲಾಯಿಸಿಲ್ಲ.

ಸ್ಥಳೀಯ ಸಂಸ್ಥೆಗಳ ಸದಸ್ಯರೇ ನಿರುತ್ಸಾಹ ತೋರುತ್ತಿದ್ದಾರೆ. ಬಿಗಿ ಭದ್ರತೆ ಕಲ್ಪಿಸಿದ್ದು, ಕೋವಿಡ್ ನಿಯಾಮವಳಿ ಅನ್ವಯ ಮತದಾ‌ನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ರಾಯಚೂರು-ಕೊಪ್ಪಳ ಕ್ಷೇತ್ರ: ಶೇ‌12.7 ಮತದಾನ

ರಾಯಚೂರು: ಕೊಪ್ಪಳ- ರಾಯಚೂರು ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 10 ಗಂಟೆವರೆಗೂ ಶೇ 12.7 ರಷ್ಟು ಮತದಾನವಾಗಿದೆ. ಒಟ್ಟು 6,497 ಮತದಾರರ ಪೈಕಿ 815 ಮತಗಳು ಚಲಾವಣೆಯಾಗಿವೆ.

ದ.ಕ.‌ದ್ವಿಸದಸ್ಯ ಕ್ಷೇತ್ರ: ಬಿರುಸಿನ ಮತದಾನ

ಮಂಗಳೂರು: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆದಿದೆ.
ರಾಜ್ಯ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ.
ನಗರದ ಮಹಾನಗರ ಪಾಲಿಕೆ ಕಟ್ಟಡದ ಮತಗಟ್ಟೆಯಲ್ಲಿ ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಪಾಲಿಕೆ ಸದಸ್ಯರು ಬೆಳಿಗ್ಗೆ 9.30ರ ಸುಮಾರಿಗೆ ಮತ ಚಲಾಯಿಸಿದರು.
ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ಮತದಾನಕ್ಕೆ ಸರತಿ ಸಾಲಿನಲ್ಲಿ ಮತದಾರರು ನಿಂತಿದ್ದಾರೆ. ಪಾಲಿಕೆಯಲ್ಲಿ 68 ಮತದಾರರಿದ್ದು, ನಾಲ್ಕು ಮಂದಿ ನಾಮನಿರ್ದೇಶಿತ ಸದಸ್ಯರು, ಇಬ್ಬರು ಶಾಸಕರು, ಒಬ್ಬ ಸಂಸದ ಸೇರಿದ್ದಾರೆ.
ಮಂಗಳೂರು ತಾಲ್ಲೂಕಿನ ನೀರು ಮಾರ್ಗ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 29 ಮತದಾರರಿದ್ದು, 28 ಮಂದಿ ಬೆಳಿಗ್ಗೆ 10 ಗಂಟೆಗೆ ಮತ ಚಲಾಯಿಸಿದ್ದಾರೆ. ಅವರಲ್ಲಿ13 ಪುರುಷ ಹಾಗೂ 15 ಮಹಿಳಾ ಮತದಾರರು
ಇದ್ದಾರೆ.

ವಿಜಯಪುರ- ಬಾಗಲಕೋಟೆ ಕ್ಷೇತ್ರ

ವಿಜಯಪುರ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ದ್ವಿ ಸದಸ್ಯ ಕ್ಷೇತ್ರದ ಚುನಾವಣೆಗೆ ಮತದಾನ ಮಂದಗತಿಯಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಒಬ್ಬೊಬ್ಬರೇ ಆಯಾ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ.

ಮತಗಟ್ಟೆಗಳ ಬಳಿ ಮತದಾರರಿಗಿಂತ ಮತಗಟ್ಟೆ ಸಿಬ್ಬಂದಿ, ಪೊಲೀಸರ ಸಂಖ್ಯೆಯೇ ಅಧಿಕವಾಗಿ ಕಂಡುಬರುತ್ತಿದೆ.

ವಿಜಯಪುರ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ. 

ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅವರು ತಮ್ಮ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ  ಮತದಾರರ ಕೈಗೆ ಸ್ಯಾನಿಟೈಸರ್ ಸಿಂಪಡಿಸಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ ಮತಗಟ್ಟೆ ಒಳಗೆ ಬಿಡಲಾಗುತ್ತಿದೆ. 

ಮತಗಟ್ಟೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಮತದಾನಕ್ಕೆ ಅವಸರವಿಲ್ಲ

ರಾಯಚೂರು: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಗೆ ಮತದಾನವು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಎರಡು ತಾಸು ಕಳೆದರೂ ಮತಗಟ್ಟೆಗಳಿಗೆ ಮತದಾರರು ಬರುತ್ತಿಲ್ಲ.
ರಾಯಚೂರು ತಾಲ್ಲೂಕಿನ‌ ಚಿಕ್ಕಸೂಗುರು, ದೇವಸುಗೂರು, ಯದ್ಲಾಪುರ ಹಾಗೂ ರಾಯಚೂರು ನಗರಸಭೆ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ಅವರು ಭೇಟಿ ನೀಡಿದರು.
ಮತದಾರರು ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಮತದಾನ ನಿಧಾನವಾಗಿ ನಡೆಯುತ್ತದೆ ಎಂದು ಮತಗಟ್ಟೆ ಅಧಿಕಾರಿಗಳು ತಿಳಿಸಿದರು.

ಕಣ್ಣೀರಿಟ್ಟ ಬೂಕಹಳ್ಳಿ ಮಂಜು

ಮಂಡ್ಯ: 'ಚುನಾವಣಾ ಕಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ನಿವೃತ್ತಿಯಾಗುತ್ತಿಲ್ಲ. ಕಡೇ ಕ್ಷಣದವರೆಗೂ ಹೋರಾಟ ಮಾಡುತ್ತೇನೆ' ಎಂದು ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಕಣ್ಣೀರಿಟ್ಟರು.

'ಕಳೆದ 10 ತಿಂಗಳಿಂದ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೆ.‌ ಮತದಾರರನ್ನು 5-6 ಬಾರಿ ನೇರವಾಗಿ ಭೇಟಿ ಮಾಡಿದ್ದೇನೆ. ಅದು ನನ್ನ ಕೈ ಹಿಡಿಯಲಿದೆ. ಆದರೆ ಕೆಲವರು ಬೇರೆ ಪಕ್ಷಗಳ ಜೊತೆ ಹಿಂದಾಣಿಕೆ ಮಾಡಿಕೊಂಡಿರುವುದಾಗಿ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಮೂಲಕ ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

'ಮತದಾರರು ಹಣಕ್ಕೆ ಬಲಿಯಾಗುವುದಿಲ್ಲ, ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ರಾಜಕೀಯ ಕುತಂತ್ರದಿಂದ ನಾನು ಬಲಿಯಾಗುತ್ತಿದ್ದೇನೆ' ಎಂದರು.

ಮತಗಟ್ಟೆಗಳತ್ತ ಸುಳಿಯದ ಮತದಾರರು

ರಾಮನಗರ: ಜಿಲ್ಲೆಯಾದ್ಯಂತ ವಿಧಾನ ಪರಿಷತ್ ಚುನಾವಣೆಯ ಮತದಾನ‌ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಮತದಾರರು ಇನ್ನೂ ಮತಗಟ್ಟೆಗಳತ್ತ ಹೆಜ್ಜೆ ಇಟ್ಟಿಲ್ಲ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಿಂದ ಒಟ್ಟು 3928 ಮತದಾರರು ಇದ್ದಾರೆ. ಎರಡೂ ಜಿಲ್ಲೆಗಳಲ್ಲಿ 227 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮಧ್ಯಾಹ್ನ 4ರವರೆಗೆ ಮತದಾನಕ್ಕೆ ಅವಕಾಶ ಇದೆ. 

ಕಾಂಗ್ರೆಸ್ ನಿಂದ ಎಸ್. ರವಿ, ಜೆಡಿಎಸ್ ನಿಂದ ರಮೇಶ ಗೌಡ ಹಾಗೂ ಬಿಜೆಪಿಯಿಂದ ನಾರಾಯಣಸ್ವಾಮಿ ಕಣದಲ್ಲಿ‌ ಇದ್ದಾರೆ.

ಕಲಬುರಗಿ–ಯಾದಗಿರಿ ಕ್ಷೇತ್ರದಲ್ಲಿ ಮತದಾನ ಆರಂಭ

ಕಲಬುರಗಿ: ಕಲಬುರಗಿ–ಯಾದಗಿರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಮತದಾನ ಬೆಳಿಗ್ಗೆ 8ರಿಂದ ಆರಂಭಗೊಂಡಿದೆ.

ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಈ ಕ್ಷೇತ್ರದಲ್ಲಿ ಒಟ್ಟು 7102 ಮತದಾರರು ಇದ್ದಾರೆ.

ಬಿಜೆಪಿಯ ಬಿ.ಜಿ.ಪಾಟೀಲ, ಕಾಂಗ್ರೆಸ್‌ನ ಶಿವಾನಂದ ಪಾಟೀಲ ಮರತೂರ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೋಡ್ಲಿ ಕಣದಲ್ಲಿದ್ದಾರೆ.

ಕಲಬುರಗಿ–ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟು 391 ಮತಗಟ್ಟೆಗಳಿದ್ದು, ಇವುಗಳಿಗೆ ತಲಾ 430 ಆರ್‌ಒಗಳು, ಎಆರ್‌ಒಗಳು ಹಾಗೂ ಮೈಕ್ರೊ ಅಬ್ಸರ್ವರ್‌ ಸೇರಿದಂತೆ ಒಟ್ಟು 1290 ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.