ADVERTISEMENT

ದೇಶದಲ್ಲಿಯೂ ಮೈತ್ರಿ ಅನಿವಾರ್ಯ: ವಿಜಯ್‌ಶಂಕರ್‌

ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 4 ಮೇ 2019, 1:20 IST
Last Updated 4 ಮೇ 2019, 1:20 IST
ಸಿ.ಎಚ್‌. ವಿಜಯಶಂಕರ್‌
ಸಿ.ಎಚ್‌. ವಿಜಯಶಂಕರ್‌   

ಮಡಿಕೇರಿ: ಕೊಡಗು ಜೆಡಿಎಸ್‌ನಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೊಡಗು–ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿಯೇ ನಾವು ಮೈತ್ರಿ ಮಾಡಿಕೊಂಡಿದ್ದೇವೆ; ಸ್ಥಳೀಯ ಮಟ್ಟದ ಸಣ್ಣಪುಟ್ಟ ವ್ಯತ್ಯಾಸಗಳು ಫಲಿತಾಂಶದ ಮೇಲೆ ಯಾವುದೇ ದೊಡ್ಡ ಪರಿಣಾಮ ಉಂಟುಮಾಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ದೇಶದಲ್ಲಿಯೂ ಮೈತ್ರಿ ಅನಿವಾರ್ಯ. ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಹೊಂದಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ತೀರ್ಮಾನವೇ ಅಂತಿಮವಾಗಲಿದೆ ಎಂದು ಹೇಳಿದರು.

ADVERTISEMENT

‘ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ಸಂದರ್ಭ ನನ್ನ ಹಾಗೂ ಪಕ್ಷದ ಬಗ್ಗೆ ಯಾರೊಬ್ಬರು ನಕಾರಾತ್ಮಕವಾಗಿ ಮಾತನಾಡಿಲ್ಲ. ಅಭ್ಯರ್ಥಿ ಘೋಷಣೆಗೂ ಮೊದಲು ಪಕ್ಷದಲ್ಲಿ ನಾನಾ ಆಕಾಂಕ್ಷಿಗಳಿದ್ದರು. ನಂತರ, ಮೈತ್ರಿ ಧರ್ಮ ಪಾಲನೆಗೆ ಅನುಗುಣವಾಗಿ ನನ್ನ ಗೆಲುವಿಗಾಗಿ ಎಲ್ಲರು ಶ್ರಮಿಸಿದ್ದಾರೆ’ ಎಂದು ಹೇಳಿದರು.

ಐದು ವರ್ಷ ಆಡಳಿತ ನಡೆಸಿದ್ದ ಬಿಜೆಪಿ ತನ್ನ ಮೂಲ ಸಿದ್ಧಾಂತಕ್ಕೆ ಬದ್ಧವಾಗಿಲ್ಲ. ಅಲ್ಲದೇ, ಇವರಿಗೆ ರಾಷ್ಟ್ರೀಯ ಸಮಸ್ಯೆಯ ಅರಿವಿಲ್ಲ ಎಂಬುದನ್ನು ಜನರು ತಿಳಿದುಕೊಂಡಿದ್ದಾರೆ. ಆದ್ದರಿಂದ ಪ್ರಾದೇಶಿಕ ಪಕ್ಷಗಳ ಆಧಾರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ನಾನು ಅಧಿಕಾರ ವಹಿಸಿಕೊಂಡ ನಂತರ ಚೊಚ್ಚಲ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿದ್ದೇನೆ. ಚುನಾವಣೆಯಲ್ಲಿ ನಿರೀಕ್ಷಿತ ಫಲ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮುಖಂಡರಾದ ಮಿಟ್ಟು ಚಂಗಪ್ಪ, ಟಿ.ಪಿ. ರಮೇಶ್, ಅಬ್ದುಲ್ ರಜಾಕ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.