ADVERTISEMENT

ಬಾವಿಯಲ್ಲಿ ಆಂಧ್ರದ ಕಾಲುವೆ ನೀರು

ಬೆಂಗಳೂರು ಸೇರಿದ್ದ ಯುವ ರೈತರು ಊರಿಗೆ ಮರಳಿ ಬಂದರು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 19:34 IST
Last Updated 11 ಮಾರ್ಚ್ 2019, 19:34 IST
ಆಂಧ್ರದ ಗಡಿ ಗ್ರಾಮಗಳ ಕಾಲುವೆಯಲ್ಲಿ ಹರಿಯುತ್ತಿರುವ ನೀರಿನ ಬಳಕೆಗೆ ಮುಂದಾದ ತಾಲ್ಲೂಕಿನ ರೈತರು.
ಆಂಧ್ರದ ಗಡಿ ಗ್ರಾಮಗಳ ಕಾಲುವೆಯಲ್ಲಿ ಹರಿಯುತ್ತಿರುವ ನೀರಿನ ಬಳಕೆಗೆ ಮುಂದಾದ ತಾಲ್ಲೂಕಿನ ರೈತರು.   

ಗೌರಿಬಿದನೂರು: ನೆರೆಯ ಆಂಧ್ರಪ್ರದೇಶದ ಗಡಿಭಾಗದ ಕಾಲುವೆಗಳಲ್ಲಿ ಹರಿಯುತ್ತಿರುವ ನೀರಿನಿಂದಾಗಿ ತಾಲ್ಲೂಕಿನ ಗ್ರಾಮಗಳ ರೈತರ ಬಾವಿಗಳಲ್ಲಿ‌ ನೀರು ತುಂಬಿಕೊಳ್ಳುತ್ತಿದೆ. ರೈತರಲ್ಲಿ ಜೀವಕಳೆ ಬಂದಿದೆ. ಬರಗಾಲದಿಂದ ತತ್ತರಿಸಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದ ಯುವಕರು ಮರಳಿ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ.

ನಗರಗೆರೆ ಹೋಬಳಿಯ ಕೆಲವು ಹಳ್ಳಿಗಳು ಆಂಧ್ರದ ಗಡಿಗೆ ಹೊಂದಿಕೊಂಡಿವೆ. ನೀರಿಲ್ಲದೆ, ಸಮರ್ಪಕ ಮಳೆಯಿಲ್ಲದೆ ಇಲ್ಲಿಯ ರೈತರು ಎರಡು ದಶಕಗಳಿಂದ ಬೇಸತ್ತು ಬೇಸಾಯದಿಂದ ದೂರವಾಗಿದ್ದರು. ಈಗಅಂತರ್ಜಲ ಹೆಚ್ಚಾಗಿ, ಬತ್ತಿ ಬರಡಾಗಿದ್ದ ಬಾವಿಗಳಲ್ಲಿ ನೀರು ತುಂಬಿಕೊಂಡಿದೆ. ಬೀಳು ಬಿದ್ದಿದ್ದ ಜಮೀನನ್ನು ಉಳುಮೆಗೆ ಸಜ್ಜುಗೊಳಿಸುತ್ತಿದ್ದಾರೆ.

ಆಂಧ್ರ ಸರ್ಕಾರ ಗೊಲ್ಲಪಲ್ಲಿ ಅಣೆಕಟ್ಟಿನಿಂದ ಕಾಲುವೆ ಮೂಲಕ ಹಿಂದೂಪುರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೈಗೊಂಡಿದೆ. ಅಲ್ಲಿಯ ಹೆಚ್ಚಿನ ಕೆರೆಗಳು ತುಂಬಿವೆ. ಪರಿಣಾಮ ಗೌರಿಬಿದನೂರು ‌ತಾಲ್ಲೂಕಿನ ಗಡಿಯ ರೈತರ ಬಾವಿಗಳಿಗೂ ನೀರು ಬಂದಿದೆ.

ADVERTISEMENT

ಕಾಲುವೆಯ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳುವಂತೆ ಆಂಧ್ರ ಸರ್ಕಾರವೂ ಮೌಖಿಕ ಸೂಚನೆ ನೀಡಿದೆ. ಕಾಲುವೆ ಸಮೀಪದ ಜಮೀನಿನ ರೈತರು ಡೀಸೆಲ್ ಎಂಜಿನ್‌ ಸಹಾಯದಿಂದ ನೀರೆತ್ತಿ ಬಳಸಿಕೊಳ್ಳುತ್ತಿದ್ದಾರೆ. ಈಗ ಸರಿದೂಗಿಸಲು ಅನುಕೂಲವಾಗಿದೆ ಎನ್ನುತ್ತಾರೆ ಒಂಟಿಮನೆಹಳ್ಳಿಯ ರೈತ ಮಂಜುನಾಥ್.

ಗಡಿಭಾಗದ ಜೀಲಾಕುಂಟೆ, ಒಂಟಿಮನೆಹಳ್ಳಿ, ಮರಿಪಡುಗು, ಸಾದಾರ್ಲಹಳ್ಳಿ, ಹುಣಸೇನಹಳ್ಳಿ ಮತ್ತಿತರ ಗ್ರಾಮಗಳ ಬಾವಿಯಲ್ಲಿ ನೀರು ತಂಬಿಕೊಂಡಿದೆ.

‘ದುಡಿಯಲು ಹೋಗಿದ್ದವರೂ ಗ್ರಾಮಕ್ಕೆ ಬರುತ್ತಿದ್ದಾರೆ. ತಂದೆ ತಾಯಿ ಜೊತೆ ಜೀವನ ನಡೆಸುತ್ತಿದ್ದಾರೆ ಎಂಬುದೇ ಸಂತಸದ ಸಂಗತಿ.ಎನ್ನುತ್ತಾರೆ ರೈತ ವೆಂಕಟರವಣಪ್ಪ.

ನೀರಿನ ಮೂಲ ವೃದ್ಧಿಯಾಗಿರುವುದರಿಂದ ಬೇಸಾಯ ಮಾಡಲು ಉತ್ಸಾಹ ಬಂದಿದೆ
-ರವಿಚಂದ್ರ, ಒಂಟಿಮನೆಹಳ್ಳಿ ರೈತ

ಅಂತರ್ಜಲ ವೃದ್ಧಿಯಾಗಿರುವುದರಿಂದ ಹತ್ತಿಪ್ಪತ್ತು ವರ್ಷ ಹೆಚ್ಚಿಗೆ ಜೀವಿಸುತ್ತೇನೆ ಎಂಬ ಭರವಸೆ ಮೂಡಿದೆ
-ಕೃಷ್ಣಪ್ಪ, ಸ್ಥಳೀಯ ರೈತ.

ನೀರಿನ ಮಾತು

ಬರಡಾಗಿದ್ದ ಭೂಮಿಯಲ್ಲಿ ಬೇಸಿಗೆ ಬೆಳೆ ನಾಟಿ ಮಾಡಲಾಗುತ್ತಿದೆ

-ನಂಜಮ್ಮ,ರೈತ ಮಹಿಳೆ

ನೀರಿನ ತಾಣಗಳನ್ನೇ ಕಾಣದ ಜನರಿಗೆ ಕಾಲುವೆಗಳಲ್ಲಿ ಹರಿಯುತ್ತಿರುವ ನೀರು ಸಂಭ್ರಮಿಸುವಂತೆ ಮಾಡಿದೆ. ರಜೆಗಳಲ್ಲಿ ಕಾಲುವೆಯಲ್ಲಿ ಆಟವಾಡಿ ಸಂಭ್ರಮಿಸುತ್ತಿದ್ದಾರೆ

-ರತ್ನಮ್ಮ,ರೈತ ಮಹಿಳೆ

ನೀರು ಆಂಧ್ರದ್ದಾದರೇನು. ಕರ್ನಾಟಕದ್ದಾದರೇನು... ಬದುಕುವ ಆಸೆ ಚಿಗುರಿಸಿದೆ

-ತಿಮ್ಮರಾಜು,ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.