ಸಿದ್ದರಾಮಯ್ಯ
ಬೆಂಗಳೂರು: ‘ಆರೆಸ್ಸೆಸ್ ಮತ್ತು ಬಿಜೆಪಿ ಪರಿವಾರ ಹೇಳುವ ಸುಳ್ಳುಗಳನ್ನು ಮೆಟ್ಟಿ, ಸತ್ಯ ಹೇಳುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಕೆಪಿಸಿಸಿಯ ಭಾರತ್ ಜೋಡೊ ಭವನದಲ್ಲಿ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಕ್ಷದ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು’ ಎಂದರು.
‘ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸಿದ್ದನ್ನು, ಅಂಬೇಡ್ಕರ್ ಅವರು ಮನುಸ್ಮೃತಿಗೆ ಬೆಂಕಿ ಹಾಕಿ ಸುಟ್ಟಿದ್ದು ಏಕೆ ಎನ್ನುವುದನ್ನು ನಮ್ಮ ಕಾರ್ಯಕರ್ತರು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಜನರಿಗೆ, ಇವತ್ತಿನ ಯುವ ಸಮುದಾಯಕ್ಕೆ ಸತ್ಯವನ್ನು ಅರ್ಥ ಮಾಡಿಸಬೇಕು’ ಎಂದರು.
‘ಮನುಸ್ಮೃತಿ ಮತ್ತು ಜಾತಿ ವ್ಯವಸ್ಥೆ ಕಾರಣದಿಂದ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗಿದ್ದ ಎಲ್ಲಾ ಜಾತಿ, ಸಮುದಾಯಗಳನ್ನು ದೌರ್ಜನ್ಯಮುಕ್ತಗೊಳಿಸಲು ಅಂಬೇಡ್ಕರ್ ಅವರ ಬದುಕು ಮುಡಿಪಾಗಿತ್ತು’ ಎಂದ ಅವರು, ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗಾಗಿ, ಅಸ್ಪೃಶ್ಯತೆ ಹೋಗಲಾಡಿಸುವುದಕ್ಕಾಗಿ ತಾನು ಶಿಕ್ಷಣ ಪಡೆದಿರುವುದಾಗಿ ಅಂಬೇಡ್ಕರ್ ಹೇಳಿದ ಮಾತನ್ನು ಉಲ್ಲೇಖಿಸಿದರು.
‘1952ರ ಜನವರಿ 18ರಂದು ಅಂಬೇಡ್ಕರ್ ಅವರು ತಮ್ಮದೇ ಹಸ್ತಾಕ್ಷರದಲ್ಲಿ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಢಾಂಗೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಆದರೂ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಸುಳ್ಳು ಹೇಳುತ್ತಾ ಮನುವಾದಿಗಳು, ಬಿಜೆಪಿಯವರು ತಿರುಗುತ್ತಿದ್ದಾರೆ’ ಎಂದರು.
‘ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣುವ ಎಲ್ಲರ ಪ್ರಗತಿಗೆ ಕಾರ್ಯಕ್ರಮಗಳನ್ನು ರೂಪಿಸಿ , ಜಾರಿ ಮಾಡಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ವಿವರಿಸಿದರು.
ಬಿಜೆಪಿಯವರಿಗೆ ಸಾರ್ವಕರ್ ಮತ್ತು ಗಾಂಧಿಯನ್ನು ಕೊಲೆ ಮಾಡಿದ ಗೋಡ್ಸೆ ಬಿಟ್ಟು ಉಳಿದ ಯಾರೂ ಬೇಕಾಗಿಲ್ಲ. ಆದರೆ ನಮಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎನ್ನುವ ಮೂರು ಮಂತ್ರಗಳನ್ನು ನಮಗೆ ನೀಡಿದ ಅಂಬೇಡ್ಕರ್ ನಮ್ಮವರು, ಇವರು ನಮಗೆ ಬೇಕು ಎಂದರು.
‘ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಂ ಸ್ಥಾಪಿಸಲಾಗುವು. ಮತ್ತು ಇಡೀ ದೇಶದಲ್ಲೇ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್ , ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ಎಐಸಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕದ ಅಧ್ಯಕ್ಷ, ದೆಹಲಿ ಶಾಸಕ ರಾಜೇಶ್ ಮಲೋತ್, ರಾಜ್ಯ ಘಟಕದ ಅಧ್ಯಕ್ಷ ಧರ್ಮಸೇನಾ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಸಿ.ಎಸ್. ದ್ವಾರಕನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.