ADVERTISEMENT

‌ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ

ಮಾಲೂರಿನಲ್ಲಿ 90 ಮೀ.ಮಿ ಮಳೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 20:00 IST
Last Updated 9 ಫೆಬ್ರುವರಿ 2019, 20:00 IST
ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಬೆಂಗಳೂರಿನ ಓಕಳಿಪುಂ ಕೆಳ ಸೇತುವೆಯಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಸಿಲುಕಿದ್ದ ವಾಹನಗಳು –ಪ್ರಜಾವಾಣಿ ಚಿತ್ರ
ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಬೆಂಗಳೂರಿನ ಓಕಳಿಪುಂ ಕೆಳ ಸೇತುವೆಯಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಸಿಲುಕಿದ್ದ ವಾಹನಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇನ್ನೂ ಎರಡು ದಿನಗಳ ಕಾಲ ರಾಜ್ಯದ ಕೆಲವು ಭಾಗಗಳಲ್ಲಿ 15 ರಿಂದ 20 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.

ಭಾನುವಾರ ಸಂಜೆ ಹೊತ್ತಿಗೆ ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ಚಿತ್ರದುರ್ಗ, ಹಾಸನ, ತುಮಕೂರಿನ ಸುತ್ತಮುತ್ತಲಿನ ಭಾಗಗಳಲ್ಲಿ ಹಗುರ ಮಳೆಯಾಗಲಿದ್ದು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ ಹಾಗೂ ಮೈಸೂರಿನ ಕೆಲವೆಡೆ ಭಾರಿ ಪ್ರಮಾಣದ ಮಳೆ ಸುರಿಯಲಿದೆ.

‘ಅರಬ್ಬಿ ಸಮುದ್ರದಿಂದ ತೆಲಂಗಾಣದವರೆಗೂ (ಟ್ರಫ್‌) ವಾಯುಭಾರ ಕುಸಿತ ಕಂಡಿದ್ದರಿಂದ ರಾಜ್ಯದಲ್ಲಿ ಮಳೆ ಕಾಣಿಸಿಕೊಂಡಿದೆ’ ಎಂದುರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ADVERTISEMENT

‘ಹಗಲು ಹೊತ್ತಿನಲ್ಲಿ ಬಿಸಿಲಿದ್ದು, ಸಂಜೆಯಾಗುತ್ತಿದ್ದಂತೆಯೇ ಸುಮಾರು 15ರಿಂದ 30 ನಿಮಿಷಗಳ ಕಾಲ ಗುಡುಗು ಹಾಗೂ ಗಾಳಿ ಸಹಿತ ಮಳೆಯಾಗಲಿದೆ. ಆದರೆ, ಸುರ್ಧಿಘ ಮಳೆಯಾಗುವ ಲಕ್ಷಣಗಳಿಲ್ಲ’ ಎಂದು ಹೇಳಿದರು.

ದಕ್ಷಿಣ ಒಳನಾಡಿನ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರದಲ್ಲಿ ಅಧಿಕ ಪ್ರಮಾಣದ ಮಳೆ ಸುರಿದಿದೆ.

ಮಾಲೂರಿನಲ್ಲಿ ಆಲಿಕಲ್ಲು ಮಳೆ

ಮಾಲೂರು: ರಾಜ್ಯದ ಕೆಲವೆಡೆ ಶನಿವಾರ ಸಂಜೆ ಸಾಧಾರಣ ಮಳೆಯಾಗಿದ್ದು, ಕೋಲಾರದ ಮಾಲೂರಿನಲ್ಲಿ 90 ಮಿ.ಮೀ ದಾಖಲೆ ಪ್ರಮಾಣದ ಮಳೆಯಾಗಿದೆ.

ಪಟ್ಟಣದಲ್ಲಿ ಶನಿವಾರ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಮಧ್ಯಾಹ್ನ ಮೂರೂವರೆಗೆ ಆರಂಭವಾದ ಅಕಾಲಿಕ ಮಳೆ ನಾಲ್ಕೂವರೆವರೆಗೂ ರಭಸವಾಗಿ ಸುರಿಯಿತು. ರಸ್ತೆಗಳು ಹಾಗೂ ಚರಂಡಿಗಳ ತುಂಬಾ ನೀರು ಹರಿಯಿತು. ಲಕ್ಕೂರು ಹೋಬಳಿ ವ್ಯಾಪ್ತಿಯಲ್ಲಿಯೂ ಜೋರು ಮಳೆ ಆಯಿತು.

ಕೋಲಾರ, ಕೆಜಿಎಫ್, ಮುಳಬಾಗಿಲಿನಲ್ಲಿ ತುಂತುರು ಮಳೆ ಸುರಿಯಿತು. ಚಿಕ್ಕಬಳ್ಳಾಪುರಕ್ಕೂ ಸಂಜೆ ಹದ ಮಳೆ ತಂಪು ಎರೆಯಿತು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ವ್ಯಾ‍ಪ್ತಿಯ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದಲ್ಲಿ ಶನಿವಾರ ಒಂದು ಗಂಟೆ ಕಾಲ ಉತ್ತಮ ಮಳೆಯಾಗಿದೆ. ಸಣ್ಣಪುಟ್ಟ ಗುಂಡಿಗಳು ಭರ್ತಿಯಾಗಿವೆ.

ಮೈಸೂರು ತಾಲ್ಲೂಕು ವರುಣಾ ಸೇರಿದಂತೆ ವರಕೋಡು, ಪಿಲ್ಲಹಳ್ಳಿ, ಮೆಲ್ಲಹಳ್ಳಿ, ವಾಜಮಂಗಲ, ಚಿಕ್ಕಹಳ್ಳಿ, ಎಂ.ಬಿ.ಹಳ್ಳಿ ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿ ಮಳೆ ಬಿದ್ದಿದೆ. ವರುಣಾ ರೈತ ಸಂಪರ್ಕ ಕೇಂದ್ರದಲ್ಲಿ 16.8 ಮಿ.ಮೀ ಮಳೆ ದಾಖಲೆಯಾಗಿದೆ. ಶನಿವಾರವೂ ಮೋಡ ಕವಿದ ವಾತಾವರಣ ಇತ್ತು.

ತುಂತುರು ಮಳೆ: ಕೊಡಗು ಜಿಲ್ಲೆಯ ನಾಪೋಕ್ಲು, ಕಕ್ಕಬ್ಬೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ತುಂತುರು ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.