ADVERTISEMENT

ಈ ವರ್ಷ ₹50 ಸಾವಿರ ಮಾತ್ರ ಸಾಲ ಮನ್ನಾ: ಎಚ್‌.ಡಿ.ಕುಮಾರಸ್ವಾಮಿ

ನಾನು ಹಂಗಿನಲ್ಲಿದ್ದೇನೆ: ಸಿ.ಎಂ ಪುನರುಚ್ಚಾರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 20:20 IST
Last Updated 6 ಡಿಸೆಂಬರ್ 2018, 20:20 IST
.
.   

ಬೆಂಗಳೂರು: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲದ ₹50 ಸಾವಿರವನ್ನು ಮೊದಲ ಕಂತಿನಲ್ಲಿ ಪಾವತಿಸುತ್ತೇವೆ. ಅದಕ್ಕಾಗಿ ಈ ವರ್ಷ ₹6,500 ಕೋಟಿ ಮೀಸಲಿಡಲಾಗಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ರೈತರ ಸಮಸ್ಯೆಗಳ ಚರ್ಚಿಸಲು ವಿಧಾನಸೌಧದಲ್ಲಿ ಗುರುವಾರ ನಡೆದ ರೈತ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ‘17 ಲಕ್ಷ ಖಾತೆದಾರರ ಪೈಕಿ ₹50 ಸಾವಿರಕ್ಕಿಂತ ಕಡಿಮೆ ಸಾಲ ಪಡೆದವರ ಸಂಖ್ಯೆ 1.51 ಲಕ್ಷ ಇದೆ’ ಎಂದರು.

‘ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಆದರೆ, ಇಲ್ಲಿಯವರೆಗೆ ಮನ್ನಾ ಆಗಿಲ್ಲ’ ಎಂದು ರೈತ ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕುಮಾರಸ್ವಾಮಿ ಮಾತನಾಡಿ, ‘ನಾನು ಹಂಗಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಸ್ವಲ್ಪ ವಿಳಂಬ ಆಗಿದೆ. ಸರ್ಕಾರಿ ಆಸ್ತಿ ಮಾರಿ ಸಾಲ ಮನ್ನಾ ಮಾಡುವ ಅವಶ್ಯಕತೆ ಇಲ್ಲ. ಹಣದ ಕೊರತೆಯೂ ಇಲ್ಲ’ ಎಂದರು.

‘ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮತ್ತೊಮ್ಮೆ ರೈತ ಸಂಘಟನೆಗಳ ಪ್ರತಿನಿಧಿಗಳ ಜತೆಗೆ ಸಭೆ ನಡೆಸುತ್ತೇನೆ. ಆರು ಜಿಲ್ಲೆಗಳಲ್ಲಿ ತೆಂಗಿನ ಮರಗಳು ನಾಶವಾಗಿವೆ. ಅಲ್ಲಿ ಪ್ರತಿ ಮರಕ್ಕೆ ₹50 ನೀಡಲಾಗುತ್ತದೆ. ಪ್ರತಿ ಎಕರೆಗೆ ₹20 ಸಾವಿರ ಪರಿಹಾರ ಕೊಡಲಾಗುತ್ತದೆ’ ಎಂದೂ ಅವರು ಹೇಳಿದರು.

ರೈತರ ಪ್ರತಿಭಟನೆ

ಸಭೆಗೆ ತೆರಳಲು ಅವಕಾಶ ನೀಡಿಲ್ಲ ಎಂದು ಆರೋಪಿಸಿ ರೈತ ಸಂಘಟನೆಗಳ ಪ್ರತಿನಿಧಿಗಳು ವಿಧಾನಸೌಧದ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ವಾಗ್ವಾದ ನಡೆಯಿತು. ಬಳಿಕ ಅವರನ್ನು ಒಳಕ್ಕೆ ಬಿಡಲಾಯಿತು. ‘ರೈತರಿಗೆ 24 ಗಂಟೆಗಳೂ ವಿಧಾನ
ಸೌಧದ ಬಾಗಿಲು ತೆಗೆದು ಇರುತ್ತದೆ’ ಎಂದು ಸಿ.ಎಂ ಹೇಳಿದರು.

*‘ಬೆಟ್ಟ ಅಗೆದು ಇಲಿ ಹೊರಕ್ಕೆ ತೆಗೆದಂತಾಗಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.