ADVERTISEMENT

ಯುವ ನೀತಿ: ಸಮಿತಿಗೆ ಸೂಲಿಬೆಲೆ, ಸಂಕಲ್ಪ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 20:05 IST
Last Updated 23 ಅಕ್ಟೋಬರ್ 2021, 20:05 IST
ಬಾಲಸುಬ್ರಹ್ಮಣ್ಯಂ
ಬಾಲಸುಬ್ರಹ್ಮಣ್ಯಂ   

ಬೆಂಗಳೂರು: ರಾಜ್ಯ ಸರ್ಕಾರ ‘ಕರ್ನಾಟಕ ಯುವ ನೀತಿ–2021’ ರೂಪಿಸಲು ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕ ಆರ್‌. ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ ರಚಿಸಿರುವ ಸಮಿತಿಗೆ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಶಾಸಕ ಜಗದೀಶ್‌ ಶೆಟ್ಟರ್‌ ಪುತ್ರ ಸಂಕಲ್ಪ ಶೆಟ್ಟರ್‌ ಸೇರಿದಂತೆ 13 ಜನ ಸದಸ್ಯರನ್ನು ನೇಮಕ ಮಾಡಲಾಗಿದೆ.

ಕೇಂದ್ರದ ಮಾಜಿ ಸಚಿವ, ದಿವಂಗತ ಎಚ್‌.ಎನ್‌. ಅನಂತಕುಮಾರ್‌ ಪುತ್ರಿ ಐಶ್ವರ್ಯಾ ದಿವೇಶ್‌, ಬೆಂಗಳೂರಿನ ಚನ್ನಮಲ್ಲಿಕಾರ್ಜುನ್‌ ಬಿ. ಪಾಟೀಲ, ವಿನೋದ್‌ ಕೃಷ್ಣಮೂರ್ತಿ, ನೆಹರೂ ಯುವ ಕೇಂದ್ರದ ನಿರ್ದೇಶಕ ಎಂ.ಎನ್‌. ನಟರಾಜ್‌, ರಾಜ್ಯ ಎನ್‌‌ಎಸ್‌ಎಸ್‌ ಅಧಿಕಾರಿ ಡಾ. ಪ್ರತಾಪ್‌ ಲಿಂಗಯ್ಯ, ದೊಡ್ಡಬಳ್ಳಾಪುರದ ಡಿ.ಎಸ್. ಕೃಷ್ಣ, ಮಂಡ್ಯದ ಕೆ. ನಾಗಣ್ಣಗೌಡ, ಬೇಲೂರಿನ ಸಂತೋಷ್ ಸೋಮಶೇಖರ್‌ (ಕೆಂಚಾಂಬ) ಸದಸ್ಯರಾಗಿದ್ದಾರೆ.

ಸಮಿತಿಯ ವಿಶೇಷ ಆಹ್ವಾನಿತರಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಇಲಾಖೆ ಆಯುಕ್ತರನ್ನು ನೇಮಿಸಲಾಗಿದೆ.

ADVERTISEMENT

‘ಯುವಜನರು ತಮ್ಮ ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳಲು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲ ಆಗುವಂತೆ ಸಮಗ್ರ ಯುವ ನೀತಿ ಹೊರತರಲು ರಚನೆಯಾಗಿರುವ ತಜ್ಞರ ಸಮಿತಿ ಇದಾಗಿದ್ದು, ಸಮಗ್ರವಾಗಿ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿ ನೀಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ ಯುವ ನೀತಿ ರೂಪಿಸುವ ಸಮಿತಿಗೆ, ಹಿಂದುತ್ವವಾದವನ್ನು ಪ್ರತಿಪಾದಿಸುವ ಸೂಲಿಬೆಲೆ ಹಾಗೂ ಬಿಜೆಪಿ ಪ್ರಮುಖರ ಮಕ್ಕಳನ್ನು ಸದಸ್ಯರಾಗಿ ನೇಮಕ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ‘ಸರ್ಕಾರದ ನೀತಿ ರೂಪಿಸಲು ವಿಷಯ ತಜ್ಞರ ಬದಲಾಗಿ, ಯುವಕರನ್ನು ಕೋಮುವಾದಿ ಸಿದ್ಧಾಂತದ ಕಡೆ ಪ್ರಚೋದಿಸುವಂತಹ ಕೆಲಸ ಮಾಡುತ್ತಿರುವವರನ್ನು ನೇಮಕ ಮಾಡುತ್ತಿರುವುದು ಎಷ್ಟು ಸರಿ’ ಎಂದು ಅನೇಕರು ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.