ADVERTISEMENT

‘ಸಂತ್ರಸ್ತೆಗೆ ಝೆಡ್‌ ಪ್ಲಸ್‌ ಭದ್ರತೆ ನೀಡಿ ಕರೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 18:24 IST
Last Updated 28 ಮಾರ್ಚ್ 2021, 18:24 IST

ಬೆಂಗಳೂರು: ‘ಸಿ.ಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದಿಂದ ನ್ಯಾಯ ಸಿಗುವ ನಂಬಿಕೆ ಇಲ್ಲ. ಸಿ.ಡಿಯಲ್ಲಿರುವ ಸಂತ್ರಸ್ತೆಗೆ ಝೆಡ್‌ ಪ್ಲಸ್‌ ಭದ್ರತೆ ನೀಡಿ ನ್ಯಾಯಾಲಯಕ್ಕೆ ಕರೆಸಿಕೊಳ್ಳಬೇಕು’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ ಅವರನ್ನು ತಕ್ಷಣ ಬಂಧಿಸಬೇಕು. ಸಂತ್ರಸ್ತ ಯುವತಿಗೆ ನ್ಯಾಯ ಕೊಡಬೇಕು’ ಎಂದರು.

‘ಅತ್ಯಾಚಾರ ಆರೋಪಿಯನ್ನು ರಕ್ಷಿಸುತ್ತಿರುವ ಸರ್ಕಾರದ ವಿರುದ್ಧ ಮಹಿಳೆಯರು ತಿರುಗಿ ಬೀಳಲಿದ್ದಾರೆ. ಮಹಿಳೆಯರನ್ನು ಎರಡನೇ ದರ್ಜೆಯಾಗಿ ನೋಡುವ ಬಿಜೆಪಿಗರಿಗೆ ತಕ್ಕಪಾಠ ಕಲಿಸುತ್ತೇವೆ. ಸರ್ಕಾರಕ್ಕೆ ಧಮ್‌ ಇದ್ದರೆ ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪ್ರಭಾವಿಗಳಿಗೆ ಒಂದು ಕಾನೂನು, ಸಾಮಾನ್ಯರಿಗೆ ಇನ್ನೊಂದು ಕಾನೂನು ಇದೆಯೇ. ಈ ಪ್ರಕರಣ ನೋಡಿದರೆ ಬೇರೆ ಬೇರೆ ಇದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಸರ್ಕಾರ ಆ ಮಹಿಳೆಯನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಬೇಸರ ಆಗುತ್ತದೆ’ ಎಂದರು.

‘ಮಹಿಳೆಯರನ್ನು ಭೋಗದ ವಸ್ತು ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಆ ಹೆಣ್ಣು ಮಗಳು ಭಯ ಇದೆ, ರಕ್ಷಣೆ ಇಲ್ಲವೆಂದು ಹೇಳುತ್ತಿದ್ದಾಳೆ. ಆದರೆ, ಸರ್ಕಾರ ಯಾವುದೇ ರಕ್ಷಣೆ ಕೊಡುತ್ತಿಲ್ಲ. ಜೀವಭಯ ಇರುವ ಹೆಣ್ಣು ಮಕ್ಕಳು ಯಾವ ಧೈರ್ಯದಿಂದ ಬಂದು ಹೇಳಿಕೆ ನೀಡಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಅಸಂವಿಧಾನಿಕ ಪದ ಬಳಸಿರುವ ರಮೇಶ ಜಾರಕಿಹೊಳಿ ಶಾಸಕರಾಗಿ ಮುಂದುವರಿಯಲು ನಾಲಾಯಕ್‌. ಸಂತ್ರಸ್ತೆಗೆ ನ್ಯಾಯ ಕೊಡಬೇಕು. ಮಹಿಳಾ ಆಯೋಗ ಕ್ರಮ ವಹಿಸಬೇಕು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.