ADVERTISEMENT

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣ: ಜಮೀರ್‌ಗೆ ಲೋಕಾಯುಕ್ತ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 0:58 IST
Last Updated 4 ಡಿಸೆಂಬರ್ 2024, 0:58 IST
ಜಮೀರ್ ಅಹಮದ್ ಖಾನ್
ಜಮೀರ್ ಅಹಮದ್ ಖಾನ್   

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣದಲ್ಲಿ ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ಅವರು ಲೋಕಾಯುಕ್ತದ ಪೊಲೀಸ್ ಅಧಿಕಾರಿಗಳ ಎದುರು ಮಂಗಳವಾರ ವಿಚಾರಣೆಗೆ ಹಾಜರಾದರು.

ಡಿಸೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ನವೆಂಬರ್ 17ರಂದು ಲೋಕಾಯುಕ್ತ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ಮಂಗಳವಾರ ಮಧ್ಯಾಹ್ನ ಲೋಕಾಯುಕ್ತ ಕಚೇರಿಗೆ ಬಂದ ಜಮೀರ್ ಅವರನ್ನು ಸುಮಾರು ಎರಡು ತಾಸಿನಷ್ಟು ವಿಚಾರಣೆಗೆ ಒಳಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ನಂತರ ಹೊರಬಂದ ಜಮೀರ್, ‘ಲೋಕಾಯುಕ್ತ ಅಧಿಕಾರಿಗಳು ಮೂರು ಬಾರಿ ಸಮನ್ಸ್‌ ನೀಡಿದ್ದರು. ವಿಚಾರಣೆಗೆ ಹಾಜರಾಗಲು ಆಗಿರಲಿಲ್ಲ. ಈಗ ಹಾಜರಾಗಿದ್ದೇನೆ. ಅವರು ಕೇಳಿದ ಮಾಹಿತಿಗಳನ್ನು ನೀಡಿದ್ದೇನೆ, ದಾಖಲೆಗಳನ್ನು ವಿವರಿಸಿದ್ದೇನೆ. ಅಗತ್ಯವಾದರೆ ಮತ್ತೆ ವಿಚಾರಣೆಗೆ ಕರೆಯುತ್ತೇವೆ ಎಂದಿದ್ದಾರೆ’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ADVERTISEMENT

ಐಎಂಎ ಚಿಟ್‌ಫಂಡ್‌ ವಂಚನೆ ಪ್ರಕರಣದ ತನಿಖೆ ವೇಳೆ, ಐಎಂಎ ಮತ್ತು ಜಮೀರ್‌ ಅಹಮದ್‌ ಅವರ ನಡುವೆ ಹಣಕಾಸು ವ್ಯವಹಾರ ನಡೆದಿರುವುದನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಪತ್ತೆ ಮಾಡಿತ್ತು. ಹೆಚ್ಚಿನ ತನಿಖೆಗಾಗಿ ಜಮೀರ್ ಅವರಿಗೆ ಸೇರಿದ ಜಾಗಗಳ ಮೇಲೆ ಇ.ಡಿ ಅಧಿಕಾರಿಗಳು 2021ರ ಆಗಸ್ಟ್‌ನಲ್ಲಿ ದಾಳಿ ನಡೆಸಿದ್ದರು. ಆಗ ಪತ್ತೆಯಾದ ದಾಖಲೆಗಳ ಆಧಾರದಲ್ಲಿ ವರದಿ ಸಿದ್ದಪಡಿಸಿದ್ದ ಇ.ಡಿ, ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನೀಡಿತ್ತು. ತನಿಖೆಗೆ ಶಿಫಾರಸೂ ಮಾಡಿತ್ತು.

2022ರಲ್ಲಿ ಎಸಿಬಿ ರದ್ದಾದ ನಂತರ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. ಆದರೆ ಪ್ರಕರಣದ ತನಿಖೆ ಚುರುಕಾಗಿರಲಿಲ್ಲ. ಲೋಕಾಯುಕ್ತವು ಪ್ರಕರಣದ ತನಿಖೆಗೆ ಈಗಷ್ಟೇ ವೇಗ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.