ಬೀಜಿಂಗ್ (ಐಎಎನ್‌ಎಸ್): ದೂರಗಾಮಿ ಖಂಡಾಂತರ ಕ್ಷಿಪಣಿ ಅಗ್ನಿ-5ರ ನಿಜವಾದ ಸಾಮರ್ಥ್ಯ 8000 ಕಿ.ಮೀ. ಇದ್ದು, ಇದನ್ನು ಭಾರತ ಬಹಿರಂಗಪಡಿಸಿಲ್ಲ ಎಂದು ಚೀನಾದ ತಜ್ಞರು ಅನುಮಾನಿಸಿದ್ದಾರೆ.
ಅಗ್ನಿ-5 ಎಂಟು ಸಾವಿರ ಕಿ. ಮೀ. ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಆದರೆ ಭಾರತ ಐದು ಸಾವಿರ ಕಿ. ಮೀ. ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೊಂಡಿದೆ. ಈ ಕ್ಷಿಪಣಿ ಸಾಮರ್ಥ್ಯದ ಬಗ್ಗೆ ಇತರ ರಾಷ್ಟ್ರಗಳು ಆತಂಕಕ್ಕೆ ಬೀಳಬಾರದು ಎಂಬ ಕಾರಣಕ್ಕೆ ಭಾರತವು ಉದ್ದೇಶಪೂರ್ವಕವಾಗಿ ಅಗ್ನಿ-5 ಕ್ಷಿಪಣಿಯ ನಿಜವಾದ ವ್ಯಾಪ್ತಿಯನ್ನು ಬಹಿರಂಗಪಡಿಸಿಲ್ಲ ಎಂದು ಚೀನಾ ಪಿಎಲ್‌ಎ ರಕ್ಷಣಾ ವಿಜ್ಞಾನ ಅಕಾಡೆಮಿ ಸಂಶೋಧಕ ಡು ವೆಂಗ್‌ಲಾಂಗ್ ತಿಳಿಸಿದ್ದಾರೆ.
`ಕ್ಷಿಪಣಿ ಉಪಗ್ರಹ ಉಡಾವಣೆಸಾಧ್ಯ~ |
ಪೀಪಲ್ಸ್ ಲಿಬರೇಷನ್ ಆರ್ಮಿಯ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ ಜಾಂಗ್ ಜಾವೊಹೊಂಗ್ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಐಸಿಬಿಎಂನ ದೂರ ಗುರಿಯ ಸಾಮರ್ಥ್ಯ ಎಂಟು ಸಾವಿರ ಕಿ. ಮೀ. ಆಗಿದ್ದು, ಇದರ ಸಾಮರ್ಥ್ಯವನ್ನು ಇನ್ನಷ್ಟು ಸುಧಾರಿಸಲು ಅವಕಾಶವಿದೆ ಎಂದಿದ್ದಾರೆ.
ಅಗ್ನಿ-5 ಕ್ಷಿಪಣಿಯು ಚೀನಾದ ಯಾವುದೇ ಭಾಗವನ್ನು ತಲುಪುವ ಸಾಮರ್ಥ್ಯ ಹೊಂದಿದ್ದರೂ ಚೀನಾದ ಜತೆ ಭಾರತ ಶಸ್ತ್ರಾಸ್ತ್ರ ಪೈಪೋಟಿ ನಡೆಸುವ ಸಾಮರ್ಥ್ಯ ಪಡೆದಿಲ್ಲ ಎಂಬರ್ಥದ ಲೇಖನವನ್ನು `ಗ್ಲೋಬಲ್ ಟೈಮ್ಸ~ ಪ್ರಕಟಿಸಿದೆ. ಭಾರತವು ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮೇಲುಗೈ ಸಾಧಿಸಿದ್ದರೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದು ಲೇಖನದಲ್ಲಿ ಟೀಕಿಸಲಾಗಿದೆ.
ಇದೇ ವೇಳೆ, ಭದ್ರತಾ ಮಂಡಲಿಯ ಅಣ್ವಸ್ತ್ರ ಪ್ರಸರಣ ತಡೆಗೆ ಸಂಬಂಧಿಸಿದ ಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿ ಚೀನಾದ ಕಾಯಂ ಪ್ರತಿನಿಧಿಯಾಗಿರುವ ಲಿ ಬೌಡೊಂಗ್ ಮಾತನಾಡಿ, ಅಣ್ವಸ್ತ್ರ ಪ್ರಸರಣ ತಡೆಗೆ ಸಂಬಂಧಿಸಿ ಅಂತರರಾಷ್ಟ್ರೀಯ ಸಮುದಾಯ ಇನ್ನೂ ಹೆಚ್ಚಿನ ಸಮನ್ವಯತೆ ಸಾಧಿಸಿದರೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಹೇಳಿದ್ದಾರೆ.
ಭಾರತವು ಅಗ್ನಿ-5 ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಮಾರನೇ ದಿನವೇ ಚೀನಾ ಅಂತರರಾಷ್ಟ್ರೀಯ ಸಮುದಾಯಕ್ಕೆ ಈ ರೀತಿ ಕರೆ ನೀಡಿದೆ.`ಅಗ್ನಿ-5~ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ಸುದ್ದಿಯನ್ನು ಅಮೆರಿಕ, ಬ್ರಿಟನ್ ಮತ್ತು ದಕ್ಷಿಣ ಏಷ್ಯಾದ ಮಾಧ್ಯಮಗಳು ಪ್ರಮುಖ ಸುದ್ದಿಯಾಗಿ ಬಿಂಬಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.