ADVERTISEMENT

ಅಜ್ಜಿ ಕೊಂದು 18 ವರ್ಷ ಜೈಲಿನಲ್ಲಿದ್ದ ಹಂತಕ...

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ನ್ಯೂಯಾರ್ಕ್ (ಪಿಟಿಐ): ಇಲ್ಲಿನ ವೆಬ್‌ಸ್ಟರ್ ಪ್ರದೇಶದಲ್ಲಿ ಮನೆಯೊಂದಕ್ಕೆ ಹತ್ತಿದ್ದ ಬೆಂಕಿ ನಂದಿಸುತ್ತಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದವನು, ಈ ಹಿಂದೆ ತನ್ನ ಅಜ್ಜಿಯನ್ನು ಕೊಂದಿದ್ದಕ್ಕಾಗಿ 18 ವರ್ಷ ಸೆರೆವಾಸ ಅನುಭವಿಸಿದ್ದ ಎಂಬುದು ಗೊತ್ತಾಗಿದೆ.

62 ವರ್ಷದ ವಿಲಿಯಮ್ ಸ್ಪೆಂಗ್ಲರ್ ಎಂಬಾತನೇ ಈ ದುಷ್ಕೃತ್ಯ ಎಸಗಿದಾತ. ಸೋಮವಾರ ಮನೆ ಹಾಗೂ ಕಾರೊಂದಕ್ಕೆ ಬೆಂಕಿ ಹಚ್ಚಿದ ಈತ, ಅದನ್ನು ಆರಿಸಲು ಬಂದ ಅಗ್ನಿಶಾಮಕ ಸಿಬ್ಬಂದಿ ಮೇಲೆ ಗುಂಡು ಹಾರಿಸಿದಾಗ, ಇಬ್ಬರು ಬಲಿಯಾಗಿ ಇಬ್ಬರು ಗಾಯಗೊಂಡಿದ್ದರು. ಈತ ಅಗ್ನಿಶಾಮಕ ಸಿಬ್ಬಂದಿಯನ್ನು ಕೊಲ್ಲುವ ಉದ್ದೇಶದಿಂದಲೇ ಮನೆ ಹಾಗೂ ಕಾರಿಗೆ ಬೆಂಕಿ ಹಚ್ಚಿದ್ದ ಎಂದು ವೆಬ್‌ಸ್ಟರ್ ಪೊಲೀಸ್ ಮುಖ್ಯಸ್ಥ ಗೆರಾಲ್ಡ್ ಪಿಕರಿಂಗ್ ಹೇಳಿದ್ದಾರೆ. ಆದರೆ, ಈತನ ಈ ಉದ್ದೇಶಕ್ಕೆ ಕಾರಣ ಏನು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಅಗ್ನಿಶಾಮಕ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದ ನಂತರ ಸ್ಪೆಂಗ್ಲರ್ ಪೊಲೀಸರೊಂದಿಗೆ ಕೂಡ ಗುಂಡಿನ ಚಕಮಕಿ ನಡೆಸಿದ್ದ. ಕಡೆಗೆ, ತನ್ನಲ್ಲಿದ್ದ ಬಂದೂಕಿನಿಂದ ತಲೆಗೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಸ್ಪೆಂಗ್ಲರ್ ದೀರ್ಘಾವಧಿಯ ಅಪರಾಧ ಇತಿಹಾಸ ಹೊಂದಿದ್ದ. ತನ್ನ ಅಜ್ಜಿ ರೋಸ್ ಸ್ಪೆಂಗ್ಲರ್‌ಳನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಕ್ಕಾಗಿ 1980ರಲ್ಲಿ ಈತನನ್ನು ಬಂಧಿಸಲಾಗಿತ್ತು. ನಂತರ ಶಿಕ್ಷೆಗೊಳಗಾದ ಈತ 1998ರವರೆಗೆ ನ್ಯೂಯಾರ್ಕ್ ಬಂದೀಖಾನೆಯಲ್ಲಿ ಜೈಲುವಾಸ ಅನುಭವಿಸಿ, ಪೆರೋಲ್ ಮೇಲೆ ಬಿಡುಗಡೆಗೊಂಡಿದ್ದ. ಆದರೆ ಇತ್ತೀಚಿನ ವರ್ಷಗಳಲ್ಲಿ ಆತ ಯಾವ ಅಪರಾಧವನ್ನೂ ಎಸಗಿರಲಿಲ್ಲ ಎಂದೂ ಪಿಕರಿಂಗ್ ತಿಳಿಸಿದ್ದಾರೆ.

ಆತನ ಬಳಿ ಹಲವು ಬಗೆಯ ಶಸ್ತ್ರಾಸ್ತ್ರಗಳಿದ್ದವು. ಅಗ್ನಿಶಾಮಕ ಸಿಬ್ಬಂದಿಯನ್ನು ಕೊಲ್ಲಲು ಆತ ಬಂದೂಕನ್ನು (ರೈಫಲ್) ಬಳಸಿರಬಹುದು ಎಂದು ಊಹಿಸಲಾಗಿದೆ. ಈ ದುಷ್ಕತ್ಯವನ್ನು ಗಮನಿಸಿದರೆ ಆತ ಮಾನಸಿಕ ಸಮಸ್ಯೆಯೂ ಸೇರಿ ಭಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಿರಬಹುದು. ಫಾತುಕ ಅಪರಾಧಕ್ಕಾಗಿ ಶಿಕ್ಷೆಗೊಳಪಟ್ಟಿದ್ದ ಸ್ಪೆಂಗ್ಲರ್ ನಿಯಮದ ಪ್ರಕಾರ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಹೀಗಾಗಿ, ಆತನ ಬಳಿಗೆ ಬಂದೂಕು ಹೇಗೆ ಬಂತು, ಆತ ಕಾನೂನುಬದ್ಧವಾಗಿಯೇ ಅದನ್ನು ಪಡೆದಿದ್ದನೇ ಇತ್ಯಾದಿ ಕುರಿತು ತನಿಖೆ ನಡೆಸಬೇಕಿದೆ ಎಂದು ಪಿಕರಿಂಗ್ ಹೇಳಿದ್ದಾರೆ.

ಈತ ತನ್ನ ಅಕ್ಕ 67 ವರ್ಷದ ಚೆರಿಲ್ ಸ್ಪೆಂಗ್ಲರ್ ಜತೆ ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದ. ಇದೇ ಅಪಾರ್ಟ್‌ಮೆಂಟ್‌ನಲ್ಲಿದ್ದ ಆತನ ತಾಯಿ ಆರ್‌ಲೈನ್ ಅಕ್ಟೋಬರ್‌ನಲ್ಲಿ ಮೃತಪಟ್ಟರು ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.