ADVERTISEMENT

ಅಮೆರಿಕಕ್ಕೆ ಪಾಕ್‌ ತೀಕ್ಷ್ಣ ಪ್ರತಿಕ್ರಿಯೆ

‘ಉಗ್ರರ ಸ್ವರ್ಗ’: ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಒಬಾಮ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST
ಅಮೆರಿಕಕ್ಕೆ ಪಾಕ್‌ ತೀಕ್ಷ್ಣ ಪ್ರತಿಕ್ರಿಯೆ
ಅಮೆರಿಕಕ್ಕೆ ಪಾಕ್‌ ತೀಕ್ಷ್ಣ ಪ್ರತಿಕ್ರಿಯೆ   

ಇಸ್ಲಾಮಾಬಾದ್‌ (ಪಿಟಿಐ): ಭಯೋತ್ಪಾದಕರಿಗೆ ಪಾಕಿಸ್ತಾನವು ‘ಸುರಕ್ಷಿತ ಸ್ವರ್ಗ’ವಾಗಲಿದೆ ಎಂಬ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರ ಹೇಳಿಕೆಗೆ ಪಾಕಿಸ್ತಾನ ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿನ ಅಸ್ಥಿರತೆ ಕುರಿತು ಅಮೆರಿಕ ಅಧ್ಯಕ್ಷರು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ತಳಮಟ್ಟದಲ್ಲಿನ ವಾಸ್ತವವೇ ಬೇರೆ ಇದೆ’ ಎಂದು ಪ್ರಧಾನಿ ನವಾಜ್‌ ಷರೀಫ್‌ ಅವರ ವಿದೇಶಾಂಗ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರು ಚೀನಾದ ನಿಯೋಗಕ್ಕೆ ಶುಕ್ರವಾರ ಸ್ಪಷ್ಟಪಡಿಸಿದರು.

‘ಭಯೋತ್ಪಾದನೆ  ಮತ್ತು ಉಗ್ರವಾದವನ್ನು ನಿರ್ಮೂಲನೆ ಮಾಡಲು  ಪಾಕಿಸ್ತಾನವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಇನ್ನೂ ಹೆಚ್ಚಿನ ಸ್ಥಿರತೆಯನ್ನು ಕಾಣಬಹುದು. ಆಫ್ಘಾನಿಸ್ತಾನದಲ್ಲಿ ತಲೆದೋರಿರುವ ಅಸ್ಥಿರತೆಯನ್ನು ನಿವಾರಿಸಲು ಪಾಕ್‌ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ’ ಎಂದೂ ಅಜೀಜ್‌ ಹೇಳಿದರು.

‘ಅಮೆರಿಕ ಒಕ್ಕೂಟದ ಸ್ಥಿತಿಗತಿ’ ಕುರಿತು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಂಗಳವಾರ ತಮ್ಮ ಅವಧಿಯ ಕೊನೆಯ ಭಾಷಣದಲ್ಲಿ ಒಬಾಮ, ಉಗ್ರರಿಗೆ ಪಾಕ್‌ ಸುರಕ್ಷಿತ ಸ್ಥಳವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ ಮಧ್ಯಪ್ರಾಚ್ಯದ ಆಫ್ಘಾನಿಸ್ತಾನ ಮತ್ತು ಪಾಕ್‌ ಹಾಗೂ ಸೆಂಟ್ರಲ್‌ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾದಲ್ಲೂ ತಲೆದೋರಿರುವ ಅಸ್ಥಿರತೆ ಇನ್ನೂ ಒಂದು ದಶಕ ಕಾಲ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಗಡಿಯ ದುರ್ಬಳಕೆಗೆ ಬಿಡೆವು: ಪಾಕ್‌ ಸ್ಪಷ್ಟನೆ: ತಮ್ಮ ದೇಶದ ಗಡಿಯನ್ನು ದುರ್ಬಳಕೆ ಮಾಡಿಕೊಳ್ಳಲು ಯಾವುದೇ ದೇಶಕ್ಕೂ ಅವಕಾಶ ಕೊಡುವುದಿಲ್ಲ ಎಂದು ಪಾಕ್‌ನ ಹಣಕಾಸು ಸಚಿವ ಐಶಾಕ್‌ ದರ್‌ ಹೇಳಿರುವುದಾಗಿ ‘ರೇಡಿಯೊ ಪಾಕಿಸ್ತಾನ’  ಶುಕ್ರವಾರ ವರದಿ ಮಾಡಿದೆ.
‘ಭಾರತದೊಂದಿಗೆ ಗಡಿ ಬಿಕ್ಕಟ್ಟೂ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಪರಿಣಾಮಕಾರಿ ಮತ್ತು ಸಮಗ್ರ ಮಾತುಕತೆ ನಡೆಸಲು ಪಾಕಿಸ್ತಾನ ಬಯಸುತ್ತದೆ. ನಮ್ಮ ಗಡಿ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಮಾತ್ರವಲ್ಲ ಗಡಿಯೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ದರ್‌ ಹೇಳಿರುವುದಾಗಿ ಅದು ತಿಳಿಸಿದೆ.

ಮಾತುಕತೆಯ ಬಗ್ಗೆ ಪಾಕ್‌ ಅತ್ಯಂತ ಉತ್ಸುಕವಾಗಿತ್ತು. ಆದರೆ ಪಠಾಣ್‌ಕೋಟ್‌ನಲ್ಲಿ ಭಾರತೀಯ ವಾಯುನೆಲೆಯ ಮೇಲೆ ಉಗ್ರರಿಂದ ದಾಳಿ ನಡೆದ ಬಳಿಕ ಭಾರತ ವಿಳಂಬಿಸುತ್ತಿದೆ ಎಂದು ಅವರು ದೂರಿದ್ದಾರೆ ಎಂದೂ ರೇಡಿಯೊ ಪಾಕಿಸ್ತಾನ್‌ ವರದಿಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.