ADVERTISEMENT

ಆಸ್ಪತ್ರೆಯಲ್ಲೂ ಸರಪಳಿಯ ಬಂಧದಲ್ಲಿದ್ದ ಭಾರತೀಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ದುಬೈ, (ಪಿಟಿಐ): ನಕಲು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಭಾರತೀಯ ವ್ಯಕ್ತಿಯೊಬ್ಬರನ್ನು ಐದು ತಿಂಗಳಿನಿಂದ ಆಸ್ಪತ್ರೆಯೊಂದರಲ್ಲಿ ಸರಪಳಿಯಿಂದ ಕಟ್ಟಿ ಹಾಕಿರುವ ಅಮಾನವೀಯ ಘಟನೆ ಇಲ್ಲಿ ನಡೆದಿದೆ.
ನಕಲು ಪ್ರಕರಣಕ್ಕೆ ಸಂಬಂಧಿಸಿ ಸೆರೆಮನೆಯಲ್ಲಿದ್ದ ರಾಮ್ ಪ್ರದೀಪ್ ಮಾಲಿ ಅವರ ಆರೋಗ್ಯ ಕ್ಷೀಣಿಸಿದ ಕಾರಣ ಜನವರಿ ತಿಂಗಳಲ್ಲಿ ಅವರನ್ನು ಕಿಂಗ್ ಫಹಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಲಿ ಅವರು ರಕ್ತಹೀನತೆಯಿಂದ ಬಳಲುತ್ತಿದ್ದಾರಲ್ಲದೆ ಇತರ ಹಲವು ಗಂಭೀರ ಆರೋಗ್ಯ ಸಮಸ್ಯೆಗಳೂ ಅವರನ್ನು ಕಾಡುತ್ತಿವೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ.

ಮಾಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದರೂ ಬಳಿಕ ಸೋಂಕಿನ ಕಾರಣದಿಂದ ಪ್ರತ್ಯೇಕ ಕೊಠಡಿಯೊಂದಕ್ಕೆ ವರ್ಗಾಯಿಸಲಾಯಿತು ಎಂದು ವರದಿ ತಿಳಿಸಿದೆ.  ಚಿಕಿತ್ಸಾ ವೆಚ್ಚ ದುಬಾರಿಯಾದ್ದರಿಂದ ಒಮ್ಮೆ ಆರೋಗ್ಯ  ಸ್ಥಿರವಾದೊಡನೆ ಮಾಲಿಯನ್ನು ಕೂಡಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ಆಸ್ಪತ್ರೆ ಅಧಿಕಾರಿಗಳು  ಸೆರೆಮನೆ ಅಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದ್ದ್ದಿದಾರೆ.

ಇದೇ ವೇಳೆ ಐದು ತಿಂಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಅವರನ್ನು ಸರಪಳಿಯಿಂದ ಬಂಧಿಸಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ಪುನಃ ಹದಗೆಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮಾಲಿ ಅವರನ್ನು ನಡೆಸಿಕೊಂಡ ರೀತಿ ಅಮಾನವೀಯವಾಗಿದೆ ಎಂದು ಮಾನವ ಹಕ್ಕುಗಳ ರಾಷ್ಟ್ರೀಯ ಸಮಿತಿ (ಎನ್‌ಎಸ್‌ಎಚ್‌ಆರ್)ಆಪಾದಿಸಿದೆ.

ಭಾರತೀಯ ರಾಯಭಾರ ಕಚೇರಿಯ ಪ್ರತಿನಿಧಿಯೊಬ್ಬರು ಆಸ್ಪತ್ರೆಗೆ ಭೇಟಿ ನೀಡಿದ್ದರೂ ಕೂಡ ಪ್ರಕರಣವನ್ನು ಪರಿಹರಿಸುವಲ್ಲಿ ಯಾವುದೇ ಗಂಭೀರ ಪ್ರಯತ್ನ ನಡೆಸದೇ ಇರುವುದಕ್ಕೆ ಮಾಲಿ ಬೇಸರಗೊಂಡಿದ್ದಾರೆ ಎಂದು ಎನ್‌ಎಸ್‌ಎಚ್‌ಆರ್‌ನ ಡಾ. ಹುಸೇನ್ ಅಲ್-ಶರೀಫ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.