ADVERTISEMENT

ಈಜಿಪ್ಟ್: ಹಿಂಸಾಚಾರಕ್ಕೆ 51ಮಂದಿ ಬಲಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಕೈರೋ (ಪಿಟಿಐ): ಈಜಿಪ್ಟಿನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಬೆಂಬಲಿಗರು ಮತ್ತು  ಸೇನೆ ಬೆಂಬಲಿತ ಸರ್ಕಾರದ ನಡುವೆ ಹಿಂಸಾಚಾರ ಭುಗಿಲೆದ್ದಿದ್ದು  ಸೋಮವಾರ  51 ಮಂದಿ ಬಲಿಯಾಗಿದ್ದು ಮುನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೀದಿಗಿಳಿದ ಸಾವಿರಾರು ಮೋರ್ಸಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ರಾಜಧಾನಿ ಕೈರೋದ ಸೇನಾ ಕೇಂದ್ರ ಕಚೇರಿ ಕಟ್ಟಡದ ಹೊರಗೆ ಭಾರಿ ಹಿಂಸಾಚಾರ ನಡೆದಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಧ್ಯಕ್ಷ ಮೊರ್ಸಿ ಅವರನ್ನು ಕಳೆದ ಬುಧವಾರ ಈಜಿಪ್ಟಿನ ಸೇನಾ ಪಡೆ ಬಂಧಿಸಿದೆ. ಮೊರ್ಸಿ ಅವರ ಜತೆಗೇ `ಮುಸ್ಲಿಂ ಬ್ರದರ್‌ಹುಡ್ ಪಕ್ಷದ ಹಿರಿಯ ನಾಯಕರನ್ನೂ ಕೂಡಾ ಸೇನಾ ಪಡೆ ಅಕ್ರಮವಾಗಿ ಬಂಧನದಲ್ಲಿಟ್ಟಿದೆ.

`ಸೇನಾ ಕೇಂದ್ರ ಕಚೇರಿ ಕಟ್ಟಡದ ಮೇಲೆ ಶಸ್ತ್ರಸಜ್ಜಿತ ಗುಂಪೊಂದು ದಾಳಿ ನಡೆಸಲು ಯತ್ನಿಸಿದಾಗ ಹಿಂಸಾಚಾರ ಆರಂಭವಾಯಿತು. ಘಟನೆ ಸಂಬಂಧ 200 ದಾಳಿಕೋರರನ್ನು ಬಂಧಿಸಿರುವ ಸೇನೆ, ಬಂಧಿತರಿಂದ ಗನ್‌ಗಳು, ಸಿಡಿಮದ್ದು ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ ಎಂದು ಈಜಿಪ್ಟಿನ `ಮೀನ' ನ್ಯೂಸ್ ಏಜೆನ್ಸಿ ಮಾಹಿತಿ ನೀಡಿದೆ.

ಆದರೆ, ಸೇನೆಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಮುಸ್ಲಿಂ ಬ್ರದರ್‌ಹುಡ್ ಪಕ್ಷ, ತಮ್ಮ ಪಕ್ಷದ ಬೆಂಬಲಿಗರ ಮೇಲೆ ಸೇನೆ ಗುಂಡಿನ ದಾಳಿ ನಡೆಸಿ, ಮೊರ್ಸಿ ಬೆಂಬಲಿಗರನ್ನು ಕೊಂದಿದೆ' ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.