ADVERTISEMENT

ಉ.ಕೊರಿಯಾ–ಅಮೆರಿಕ ಶೃಂಗಸಭೆ ಅನುಮಾನ

ಏಜೆನ್ಸೀಸ್
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಟ್ರಂಪ್
ಟ್ರಂಪ್   

ಸೋಲ್ (ಎಎಫ್‌ಪಿ): ಸಂ‍ಪೂರ್ಣ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಮಾಡುವುದಾಗಿ ಘೋಷಿಸಿರುವ ಉತ್ತರ ಕೊರಿಯಾ ಹಾಗೂ ಅಮೆರಿಕದ ಮಧ್ಯೆ ಜೂನ್ 12ರಂದು ನಿಗದಿಯಾಗಿರುವ ಐತಿಹಾಸಿಕ ಶೃಂಗಸಭೆ ನಡೆಯುವುದು ಅನುಮಾನವಾಗಿದೆ.

ಕಿಮ್ ಜೊತೆ ಮಾತುಕತೆ ನಡೆಯುವ ಸಾಧ್ಯತೆ ಕಡಿಮೆ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಹೇಳಿದ್ದಾರೆ.

ಏಕಪಕ್ಷೀಯ ಪರಮಾಣು ನಿಶ್ಯಸ್ತ್ರಿಕರಣಕ್ಕೆ ಅಮೆರಿಕ ಒತ್ತಡ ಹೇರಿದರೆ ಮಾತುಕತೆಯಿಂದ ಹೊರಬರುವುದಾಗಿ ಉತ್ತರ ಕೊರಿಯಾ ಕಳೆದ ವಾರ ಬೆದರಿಕೆ ಹಾಕಿತ್ತು. ಉತ್ತರ ಕೊರಿಯಾದ ಈ ಕಠಿಣ ನಿರ್ಧಾರದ ಹಿಂದೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಕುಮ್ಮಕ್ಕು ಇದೆ ಎಂಬ ಸಂದೇಹಗಳಿವೆ.

ADVERTISEMENT

ಮಾತುಕತೆಗೂ ಮುನ್ನ ಉತ್ತರ ಕೊರಿಯಾವು ಷರತ್ತುಗಳನ್ನು ಒಪ್ಪಿಕೊಳ್ಳಬೇಕು, ಆ ಬಳಿಕವೇ ಮಾತುಕತೆ ಎಂದು ಟ್ರಂಪ್ ಹೇಳಿದ್ದಾರೆ.

ರಾಜಕೀಯವಾಗಿ ಟ್ರಂಪ್ ಅವರೂ ಶೃಂಗಸಭೆ ಯಶಸ್ಸಿನ ಬಗ್ಗೆ ಸಾಕಷ್ಟು ಆಶಾವಾದ ಇರಿಸಿಕೊಂಡಿದ್ದಾರೆ. ಅಮೆರಿಕದ ಅಧಿಕಾರಿಗಳು, ಹೊರದೇಶಗಳ ವೀಕ್ಷಕರಿಗೂ ಸಭೆ ನಡೆಯುತ್ತದೆ ಎಂಬ ನಂಬಿಕೆಯಿದೆ. ಆದರೆ ದಿನ ಹತ್ತಿರವಾಗುತ್ತಿದ್ದಂತೆ ಉಭಯ ದೇಶಗಳ ನಡುವಿನ ಭಿನ್ನಮತ ಹೆಚ್ಚಾಗುತ್ತಿದೆ.

ಭಿನ್ನಮತ ಮೂಡಿಸಿದ ಹೇಳಿಕೆಗಳು: ಉತ್ತರ ಕೊರಿಯಾದಲ್ಲಿ ಸಂಪೂರ್ಣ ನಿಶ್ಯಸ್ತ್ರೀಕರಣ ನೋಡಲು ಬಯಸುತ್ತೇವೆ ಎಂದು ಅಮೆರಿಕ ಸ್ಪಷ್ವವಾಗಿ ಹೇಳಿದೆ. ಅಮೆರಿಕದ ಆಕ್ರಮಣಶೀಲತೆಯಿಂದ ಸಂಪೂರ್ಣ ಸುರಕ್ಷತೆಯ ಅಭಯ ಸಿಗುವವರೆಗೂ ತನ್ನಲ್ಲಿರುವ ಅಣ್ವಸ್ತ್ರಗಳನ್ನು ನಾಶಗೊಳಿಸುವುದಿಲ್ಲ ಎಂದು ಉತ್ತರ ಕೊರಿಯಾ ಹೇಳುತ್ತಿದೆ.

ಪರಮಾಣು ಪರೀಕ್ಷಾ ಸ್ಥಳ ಧ್ವಂಸ: ಶೃಂಗಸಭೆ ಯಶಸ್ವಿಗೊಳಿಸುವ ಪೂರ್ವಭಾವಿ ಕ್ರಮವಾಗಿ ಉತ್ತರ ಕೊರಿಯಾದ ಪರಮಾಣು ಪರೀಕ್ಷಾ ಸ್ಥಳ ‘ಪುಂಗೆ–ರಿ’ ಅನ್ನು ಸಂಪೂರ್ಣ ಧ್ವಂಸಗೊಳಿಸಲು ಮುಂದಾಗಿದೆ. ಹವಾಮಾನ ಪೂರಕವಾಗಿದ್ದಲ್ಲಿ, ಗುರುವಾರ ಅಥವಾ ಶುಕ್ರವಾರ ಈ ಕಾರ್ಯ ಮಾಡಲು ಉತ್ತರ ಕೊರಿಯಾ ಯೋಜನೆ ಹಾಕಿಕೊಂಡಿದೆ.

**

ಟ್ರಂಪ್ ಹೇಳಿದ್ದೇನು?

‘ಷಿ ಅವರು ಜಗತ್ತಿನ ಅತ್ಯುತ್ತಮ ಪೋಕರ್ ಆಟಗಾರ. ಬಹುಶಃ ನಾನೂ ಕೂಡಾ ಆತನಂತೆಯೇ ಆಡಬಲ್ಲೆನು. ಷಿ ಭೇಟಿ ನಂತರ ಕಿಮ್ ವರ್ತನೆಯಲ್ಲಿ ಆಗಿರುವ ಬದಲಾವಣೆ ನನ್ನನ್ನು ಚಕಿತಗೊಳಿಸಿದೆ. ಆದರೆ ಇದರಿಂದ ಏನೂ ಆಗದು. ಆಗಲೂಬಹುದು. ಇದಕ್ಕಾಗಿ ನಾನು ಯಾರನ್ನೂ ದೂಷಿಸಲಾರೆ. ಇವರಿಬ್ಬರ ನಡುವಿನ ಮಾತುಕತೆ ಅತ್ಯುತ್ತಮ ಎಂದೇನೂ ಹೇಳಲಾರೆ. ಇದರಿಂದ ನನಗೆ ಸಂತೋಷವೇನೂ ಆಗಿಲ್ಲ’ ಎಂದು ಟ್ರಂಪ್ ವಿವರಿಸಿದ್ದಾರೆ.

**

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಅವರು ನಿಶ್ಯಸ್ತ್ರೀಕರಣ ವಿಚಾರದಲ್ಲಿ ಗಂಭೀರವಾಗಿದ್ದಾರೆ.

ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.