ಕರ್ಚ್/ಉಕ್ರೇನ್ (ಪಿಟಿಐ): ಉಕ್ರೇನ್‌ನ ಕ್ರಿಮಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿರುವ ಕರ್ಚ್ ನಗರದ ಹಡಗು ಕಟ್ಟೆಯನ್ನು ರಷ್ಯಾ ಸೈನಿಕರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಪ್ಪು ಸಮುದ್ರದಲ್ಲಿ ಪ್ರಮುಖ ಆಯಕಟ್ಟಿನ ಸ್ಥಳವೆಂದೇ ಗುರುತಿಸಲಾಗುವ ಇಲ್ಲಿಗೆ ರಷ್ಯಾ ಮತ್ತಷ್ಟು ಸೈನಿಕರನ್ನು ಕಳುಹಿಸಲು ಯೋಜಿಸಿದೆ. ರಷ್ಯಾ ಸೈನಿಕರನ್ನು ತಡೆಯಲು ಪಶ್ಚಿಮ ರಾಷ್ಟ್ರಗಳು ಪ್ರಯತ್ನಿಸುತ್ತಿರುವ ಬೆನ್ನಲ್ಲೆ ರಷ್ಯಾ ಈ ಮಹತ್ವದ ಸ್ಥಳದ ಮೇಲೆ ನಿಯಂತ್ರಣ ಸಾಧಿಸಿದೆ.
ಕರ್ಚ್ ನಗರದ ಹಡಗು ಕಟ್ಟೆಯು ರಷ್ಯಾದ ಕಡಲ ಕಿನಾರೆಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ರಷ್ಯಾದ ಬಹುತೇಕ ಹಡಗುಗಳು ಇಲ್ಲಿಂದಲೆ ಪ್ರಯಾಣ ಬೆಳೆಸುತ್ತವೆ. ಇದೀಗ ಈ ಹಡಗು ನಿಲ್ದಾಣವನ್ನು ರಷ್ಯಾದ ಸೈನಿಕರು ನಿರ್ವಹಿಸುತ್ತಿದ್ದಾರೆ.
‘ರಷ್ಯಾದ ಸೈನಿಕರು ಕ್ರಿಮಿಯಾದ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಉಕ್ರೇನ್ ಹೇಳಿದೆ. ವಾಯುನೆಲೆಯನ್ನು ಸಂಪೂರ್ಣವಾಗಿ ಸುತ್ತವರೆದಿದೆ. ನಿಲ್ದಾಣದಲ್ಲಿನ ವಸ್ತುಗಳನ್ನು ಹಾಳುಗೆಡವಿದೆ ಎಂದೂ ತಿಳಿಸಿದೆ.
ವಿಶ್ವ ಸಮುದಾಯದ ಟೀಕೆ: ರಷ್ಯಾದ ಈ ಕ್ರಮಕ್ಕೆ ವಿಶ್ವ ಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ‘ರಷ್ಯಾದ ಈ ನಡೆ ಬಹಳ ದುಸ್ಸಾಹಸದಿಂದ ಕೂಡಿದೆ. ಕೂಡಲೇ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಒತ್ತಾಯಿಸಿದ್ದಾರೆ.
ಒಂದೇ ಒಂದು ಗುಂಡು ಹಾರಿಸದೆ ರಷ್ಯಾ ಸೈನಿಕರು ಕರ್ಚ್ ವಶಪಡಿಸಿಕೊಂಡಿದ್ದಾರೆ. ಇದೀಗ ಇತರ ಪ್ರದೇಶಗಳ ಮೇಲೆಯೂ ನಿಯಂತ್ರಣ ಸಾಧಿಸಲು ಮುಂದಾಗಿದ್ದು, ಉಕ್ರೇನ್ ಆತಂಕ ಮತ್ತಷ್ಟು ಹೆಚ್ಚಿಸಿದೆ.
ಈ ಬೆಳವಣಿಗೆ ಮಧ್ಯೆಯೆ ಉಕ್ರೇನ್‌ನ ಹೊಸ ಸರ್ಕಾರ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳಲು ಹೊಸ ಪ್ರಾಂತ್ಯಗಳಿಗೆ ಗವರ್ನರ್‌ಗಳನ್ನು ನೇಮಕ ಮಾಡಿದೆ.
ಅಲ್ಲದೇ ದೇಶದ ಉದ್ಯಮಿಗಳ ನೆರವನ್ನೂ ಯಾಚಿಸಿದೆ. ರಷ್ಯಾ ಪರ ನಿಷ್ಠೆ ವ್ಯಕ್ತಪಡಿಸಿದ್ದ ದೇಶದ ನೌಕಾಪಡೆಯ ಮುಖ್ಯಸ್ಥರನ್ನೂ ವಜಾಗೊಳಿಸಿದೆ.
ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳಲು ವಿಶ್ವ ನಾಯಕರು ಶ್ರಮಿಸುತ್ತಿದ್ದಾರೆ. ನ್ಯಾಟೊ ಈ ಸಂಬಂಧ ಬ್ರಸೆಲ್ಸ್ನಲ್ಲಿ ತುರ್ತು ಸಭೆ ಕರೆದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಮಂಗಳವಾರ ಉಕ್ರೇನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಬ್ರಿಟನ್ ವಿದೇಶಾಂಗ ಸಚಿವ ವಿಲಿಯಂ ಹೇಗ್ ಉಕ್ರೇನ್ ರಾಜಧಾನಿ ಕೀವ್‌ಗೆ ತೆರಳಿದ್ದಾರೆ.
ರಷ್ಯಾ ಕ್ರಮಕ್ಕೆ ಜಿ7 ರಾಷ್ಟ್ರಗಳ ಖಂಡನೆ
(ವಾಷಿಂಗ್ಟನ್ ವರದಿ) (ಪಿಟಿಐ): ಉಕ್ರೇನ್ ಮೇಲೆ ರಷ್ಯಾ ಕೈಗೊಂಡಿರುವ ಕ್ರಮವನ್ನು ಆರ್ಥಿಕ ವಾಗಿ ಬಲಾಢ್ಯವಾಗಿರುವ ಏಳು ರಾಷ್ಟ್ರಗಳು (ಜಿ7) ತೀವ್ರವಾಗಿ ಖಂಡಿಸಿವೆ.
ಜೂನ್‌ನಲ್ಲಿ ರಷ್ಯಾದ ಸೋಚಿಯಲ್ಲಿ ಜಿ8 ರಾಷ್ಟ್ರಗಳ ಶೃಂಗಸಭೆ ಜರುಗಲಿದೆ. ಆ ಹಿನ್ನೆಲೆಯಲ್ಲಿ ನಡೆಯಲಿರುವ ಪೂರ್ವಸಿದ್ಧತಾ ಸಭೆಗಳಿಂದ ತಾತ್ಕಲಿಕವಾಗಿ ದೂರ ಉಳಿಯಲು ನಿರ್ಧರಿಸಿರುವುದಾಗಿಯೂ ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ತಿಳಿಸಿವೆ.
ಇನ್ನೊಂದೆಡೆ ಜರ್ಮನಿ ವಿದೇಶಾಂಗ ಸಚಿವ ಫ್ರಾಂಕ್ ವಾಕ್ಟೆರ್ ಸ್ಟೆನ್, ‘ಜಿ8 ಸಮಿತಿಯ ಸಭೆಯಲ್ಲಿ ಮಾತ್ರ ಪಶ್ಚಿಮ ರಾಷ್ಟ್ರಗಳು ರಷ್ಯಾದೊಂದಿಗೆ ನೇರ ಮಾತುಕತೆ ನಡೆಸಬಹುದು. ಹೀಗಿರುವಾಗ ನಾವು ಆ ಅವಕಾಶವನ್ನು ಏಕೆ ಬಿಟ್ಟು ಕೊಡಬೇಕು’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.