ADVERTISEMENT

ಉತ್ತರ ಕೊರಿಯಾಕ್ಕೆ ಪ್ರತ್ಯುತ್ತರ

ಅಮೆರಿಕ–ದಕ್ಷಿಣ ಕೊರಿಯಾ ಜಂಟಿ ಕ್ಷಿಪಣಿ ಸಮರಾಭ್ಯಾಸ

ಪಿಟಿಐ
Published 5 ಜುಲೈ 2017, 19:24 IST
Last Updated 5 ಜುಲೈ 2017, 19:24 IST
ಶುಕ್ರವಾರದಿಂದ ಆರಂಭವಾಗಲಿರುವ ಜಿ20 ಶೃಂಗಸಭೆ ಪ್ರಯುಕ್ತ ವಿಶ್ವದ ಪ್ರಮುಖ ನಾಯಕರು ಸೇರಲಿರುವ ಜರ್ಮನಿಯ ಹ್ಯಾಂಬರ್ಗ್‌ನ ಬೀದಿಯಲ್ಲಿ ಬುಧವಾರ ಪ್ರದರ್ಶನಕಾರರು ಜೇಡಿಮಣ್ಣನ್ನು ಮೈಮೇಲೆ ಸುರಿದುಕೊಂಡರು
ಶುಕ್ರವಾರದಿಂದ ಆರಂಭವಾಗಲಿರುವ ಜಿ20 ಶೃಂಗಸಭೆ ಪ್ರಯುಕ್ತ ವಿಶ್ವದ ಪ್ರಮುಖ ನಾಯಕರು ಸೇರಲಿರುವ ಜರ್ಮನಿಯ ಹ್ಯಾಂಬರ್ಗ್‌ನ ಬೀದಿಯಲ್ಲಿ ಬುಧವಾರ ಪ್ರದರ್ಶನಕಾರರು ಜೇಡಿಮಣ್ಣನ್ನು ಮೈಮೇಲೆ ಸುರಿದುಕೊಂಡರು   

ವಾಷಿಂಗ್ಟನ್ :  ದಕ್ಷಿಣ ಕೊರಿಯಾ ಜೊತೆ ಜಂಟಿ ಕ್ಷಿಪಣಿ ಸಮರಾಭ್ಯಾಸ ನಡೆಸುವ ಮೂಲಕ, ಉತ್ತರ ಕೊರಿಯಾದ ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಅಮೆರಿಕ ಪ್ರತ್ಯುತ್ತರ ನೀಡಿದೆ. ಮೊದಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಎರಡು ದಿನಗಳ ಹಿಂದಷ್ಟೇ ಹೇಳಿಕೆ ಬಿಡುಗಡೆ ಮಾಡಿತ್ತು.

‘ಅಮೆರಿಕ ಮತ್ತು ದಕ್ಷಿಣ ಕೊರಿಯಾ ಸೈನಿಕರು ಜಂಟಿ ಸಮರಾಭ್ಯಾಸ ನಡೆಸಿ, ದಕ್ಷಿಣ ಕೊರಿಯಾಕ್ಕೆ ಸೇರಿದ ನಿರ್ದಿಷ್ಟ ಜಲ ಪ್ರದೇಶದಲ್ಲಿ ಕ್ಷಿಪಣಿ ಇಳಿಸುವ ಮೂಲಕ ತಮ್ಮ ‘ನಿಖರ ದಾಳಿ ಸಾಮರ್ಥ್ಯ’ವನ್ನು ಬುಧವಾರ ಸಾಬೀತು ಮಾಡಿದ್ದಾರೆ’ ಎಂದು ಪೆಂಟಗನ್‌ನ ಮುಖ್ಯ ವಕ್ತಾರ ದನಾ ವೈಟ್ ಹೇಳಿದ್ದಾರೆ.

‘ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆಯಿಂದ ಜಗತ್ತಿಗೆ ಆತಂಕ ಹೆಚ್ಚುತ್ತಿದೆ’ ಎಂದು ಅಮೆರಿಕ ಹೇಳಿತ್ತು. ‘ಜಾಗತಿಕ ಆತಂಕವನ್ನು ತಡೆಯಲು ಜಾಗತಿಕ ನೆಲೆಯಲ್ಲೇ ಕ್ರಮ ಕೈಗೊಳ್ಳಬೇಕು’ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಹೇಳಿದ್ದಾರೆ.

ADVERTISEMENT

ಸವಾಲನ್ನು ಎದುರಿಸುತ್ತೇವೆ:  ‘ನಮ್ಮ ಮುಂದೆ ಸವಾಲುಗಳಿವೆ. ಆದರೆ ಈ ಸವಾಲುಗಳನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ನನ್ನನ್ನು ನಂಬಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರ ಕೊರಿಯಾವನ್ನು ಉಲ್ಲೇಖಿಸದೇ ಹೇಳಿದ್ದಾರೆ.

ಸಮರ್ಥ ಕ್ಷಿಪಣಿ ಅಭಿವೃದ್ಧಿಪಡಿಸಿದ್ದೇವೆ (ಸೋಲ್) (ಎಎಫ್‌ಪಿ):  ‘ನಾವು ಅಭಿವೃದ್ಧಿಪಡಿಸಿರುವ ಖಂಡಾಂತರ ಕ್ಷಿಪಣಿಯು ‘ಬೃಹತ್ ಮತ್ತು ಭಾರವಾದ ಪರಮಾಣು ಸಿಡಿತಲೆ’ ಹೊತ್ತು ಸಾಗುವ ಮತ್ತು ನಿರ್ದಿಷ್ಟಪಡಿಸಿದ ಭೂ ಭಾಗಕ್ಕೆ ಮರಳುವ ಸಾಮರ್ಥ್ಯ ಹೊಂದಿರುವುದಾಗಿ ಉತ್ತರ ಕೊರಿಯಾ ಹೇಳಿದೆ’ ಎಂದು ಇಲ್ಲಿನ ಅಧಿಕೃತ ಸುದ್ದಿ ಸಂಸ್ಥೆ ಹೇಳಿದೆ.

ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಯನ್ನು ಉದ್ದೇಶಿಸಿ, ‘ಹೆಚ್ಚೆಂದರೆ ಕ್ಷಿಪಣಿಯು ಅಲಾಸ್ಕಾವರೆಗೆ ಬರುವ ಸಾಮರ್ಥ್ಯ ಹೊಂದಿದೆ’ ಎಂದು ಅಮೆರಿಕದ ತಜ್ಞರು ಹೇಳಿದ್ದರು. ವಿಶ್ವ ನಾಯಕರನ್ನು ಭೇಟಿಯಾಗಲಿರುವ ಟ್ರಂಪ್ (ಬರ್ಲಿನ್) (ಎಎಫ್‌ಪಿ):  ಜಪಾನ್‌ನಲ್ಲಿ ಶುಕ್ರವಾರದಿಂದ ಆರಂಭ
ವಾಗುವ ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಅನೇಕ ನಾಯಕರನ್ನು ಭೇಟಿಯಾಗಲಿದ್ದಾರೆ. ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರುವುದರಿಂದ ಈ ಭೇಟಿ ಮಹತ್ವ ಪಡೆದಿದೆ.

ಚದುರಿದ ಪ್ರತಿಭಟನಾಕಾರರು (ಹ್ಯಾಂಬರ್ಗ್) (ಎಎಫ್‌ಪಿ):  ಇಲ್ಲಿ ಸೇರಿದ್ದ ಬಂಡವಾಳಶಾಹಿ ವಿರೋಧಿ ಪ್ರತಿಭಟನಾಕಾರರು ಮತ್ತು ಎಡಪಂಥೀಯ ಉಗ್ರವಾದಿಗಳನ್ನು ಪೊಲೀಸರು ಜಲ ಫಿರಂಗಿ ಮತ್ತು ಪೆಪ್ಪರ್ ಸ್ಪ್ರೇ ಬಳಸಿ ಚದುರಿಸಿದರು.
ಜಿ20 ಶೃಂಗಸಭೆಗೆ ಎರಡು ದಿನಗಳು ಬಾಕಿ ಇರುವಾಗಲೇ ಈ ಪ್ರತಿಭಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.