ADVERTISEMENT

`ಒಪ್ಪಂದ ಜಾರಿಯಾಗದಿದ್ದರೆ ಕಠಿಣ ಕ್ರಮ'

​ಪ್ರಜಾವಾಣಿ ವಾರ್ತೆ
Published 18 ಜನವರಿ 2013, 19:59 IST
Last Updated 18 ಜನವರಿ 2013, 19:59 IST
ತೆಹ್ರಿರ್ ಉಲ್ ಖಾದ್ರಿ
ತೆಹ್ರಿರ್ ಉಲ್ ಖಾದ್ರಿ   

ಇಸ್ಲಾಮಾಬಾದ್ (ಐಎಎನ್‌ಎಸ್ ವರದಿ ): ಸಂಸತ್ ವಿಸರ್ಜನೆಗೆ ಆಗ್ರಹಿಸಿ ಮೂರು ದಿನಗಳ ಕಾಲ ಭಾರಿ  ಪ್ರತಿಭಟನೆ ನಡೆಸಿ ಪಾಕಿಸ್ತಾನ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಧರ್ಮಗುರು ತೆಹ್ರಿರ್ ಉಲ್ ಖಾದ್ರಿ ಅವರೊಂದಿಗೆ ಸಾರ್ವತ್ರಿಕ ಚುನಾವಣೆ ಕುರಿತಾಗಿ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಪ್ರಧಾನಿ ರಜಾ ಪರ್ವೇಜ್ ಅಶ್ರಫ್ ಅದಕ್ಕೆ ಸಹಿ ಹಾಕಿದ್ದಾರೆ.

ಒಂದು ವೇಳೆ ಒಪ್ಪಂದವನ್ನು ಸರ್ಕಾರ ಜಾರಿಗೊಳಿಸದೇ ಹೋದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಹಕ್ಕು ತಮಗಿದೆ ಎಂದು ಖಾದ್ರಿ ಎಚ್ಚರಿಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಗುರುವಾರ ರಾತ್ರಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಖಾದ್ರಿ ಶುಕ್ರವಾರ ಲಾಹೋರ್‌ಗೆ ತೆರಳಿದ್ದಾರೆ.

ತಮ್ಮ `ಸುದೀರ್ಘ ನಡಿಗೆ' ಚಳವಳಿ `ಯಶಸ್ವಿಯಾಗಿದೆ' ಎಂದು ಹೇಳಿಕೊಂಡಿರುವ  ಖಾದ್ರಿ, ಹೋರಾಟ ಯಶಸ್ವಿಯಾಗಿರುವುದಕ್ಕೆ ಇಡೀ ರಾಷ್ಟ್ರದ ಜನತೆಯನ್ನು ಅಭಿನಂದಿಸಿದ್ದಾರೆ.

ಕಳೆದ ಭಾನುವಾರ ಲಾಹೋರ್‌ನಿಂದ  ತಮ್ಮ `ಸುದೀರ್ಘ ನಡಿಗೆ'ಯನ್ನು ಆರಂಭಿಸಿದ್ದ ತೆಹ್ರಿರ್ ಉಲ್ ಖಾದ್ರಿ,  ಮಂಗಳವಾರದಿಂದ ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

`ಇಸ್ಲಾಮಾಬಾದ್ ಸುದೀರ್ಘ ನಡಿಗೆ ಘೋಷಣೆ' ಎಂದು ಕರೆದಿರುವ ಒಪ್ಪಂದಕ್ಕೆ ಗುರುವಾರ ಪ್ರಧಾನಿ ಅಶ್ರಫ್ ಸಹಿ ಹಾಕಿದ್ದಾರೆ. ಪ್ರಧಾನಿ ಅಶ್ರಫ್ ನೇಮಿಸಿದ್ದ ಹತ್ತು ಸದಸ್ಯರ ಸಮಿತಿಯು ಖಾದ್ರಿ ಅವರೊಂದಿಗೆ ಮಾತುಕತೆ ನಡೆಸಿ ಈ ಒಪ್ಪಂದಕ್ಕೆ ಬಂದಿತು.

ಪೂರ್ವ ನಿಗದಿತ ದಿನವಾದ ಮಾ. 16ರ ಒಳಗಾಗಿ ಯಾವಾಗಬೇಕಾದರೂ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಬಹುದು. ನಂತರ 90 ದಿನಗಳ ಒಳಗಾಗಿ ಸಾರ್ವತ್ರಿಕ ಚುನಾವಣೆ ನಡೆಯಬೇಕು.  ನಾಮಪತ್ರ ಸಲ್ಲಿಸಲು ಮತ್ತು ಹಿಂತೆಗೆದುಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಬೇಕು ಎಂದು ಒಪ್ಪಂದದಲ್ಲಿ ಹೇಳಲಾಗಿದೆ.

ಮುಂದಿನ ಚುನಾವಣೆಯ ಒಳಗಾಗಿ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತರಲು ಕ್ರಮಕೈಗೊಳ್ಳಲು ಸರ್ಕಾರ ಸಮ್ಮತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.