ADVERTISEMENT

ಒಬಾಮ ವೈಫಲ್ಯಗಳಿಗೆ ಕಟು ಟೀಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST
ಒಬಾಮ ವೈಫಲ್ಯಗಳಿಗೆ ಕಟು ಟೀಕೆ
ಒಬಾಮ ವೈಫಲ್ಯಗಳಿಗೆ ಕಟು ಟೀಕೆ   

ಡೆನ್ವರ್ (ಪಿಟಿಐ): ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಏರ್ಪಡಿಸಿದ್ದ ಪ್ರಥಮ ಮುಕ್ತ ಚರ್ಚೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಿಟ್ ರೋಮ್ನಿ ಅವರು ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗದ ಬಗ್ಗೆ ಪ್ರಶ್ನಿಸಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಇರುಸುಮುರುಸು ಉಂಟು ಮಾಡಿದರು.

ದೇಶವನ್ನು  ಭಾರಿ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ರೋಮ್ನಿ  ಆರೋಪಿಸಿದರಲ್ಲದೆ 90 ನಿಮಿಷಗಳ ಚರ್ಚೆಯಲ್ಲಿ ಒಬಾಮ ಸರ್ಕಾರದ ವೈಫಲ್ಯಗಳನ್ನು ಕಟುವಾಗಿ ಟೀಕಿಸಿದರು.

ಎಲ್ಲಾ ಸುದ್ದಿ ವಾಹಿನಿಗಳೂ ರೋಮ್ನಿ ಅವರ ಭಾಷಣಕ್ಕೆ ವ್ಯಾಪಕ ಪ್ರಚಾರ ನೀಡಿದವು. ಸಿಎನ್‌ಎನ್ ಮತ್ತು ಸಿಬಿಸಿ ನಡೆಸಿದ ಕ್ಷಿಪ್ರ ಸಮೀಕ್ಷೆಯಲ್ಲಿ ರೋಮ್ನಿ ಅವರಿಗೆ ಶೇಕಡಾ 67ರಷ್ಟು ಬೆಂಬಲ ವ್ಯಕ್ತವಾಗಿದ್ದು, ಅಧ್ಯಕ್ಷ ಒಬಾಮ ಅವರಿಗೆ ಶೇಕಡಾ 25ರಷ್ಟು ಜನರು ಬೆಂಬಲ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಮುಕ್ತ ಚರ್ಚೆ ಏರ್ಪಡಿಸುವುದು 1960ರಿಂದಲೂ ಅಮೆರಿಕದಲ್ಲಿ ರೂಢಿಯಲ್ಲಿದೆ. ಚರ್ಚೆಯಲ್ಲಿ ಒಳಗೊಂಡ ಎಲ್ಲಾ ವಿಷಯಗಳಲ್ಲೂ ರೋಮ್ನಿ ಮುಂದಿರುವುದು ಇದುವರೆಗೆ ನಡೆಸಲಾಗಿರುವ ಅನೇಕ ಸಮೀಕ್ಷೆಗಳಿಂದ ವ್ಯಕ್ತವಾಗಿದ್ದು ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಭಾರಿ ಪೈಪೋಟಿಯಿಂದ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ.  ಉದ್ಯೋಗ ಸೃಷ್ಟಿಯಲ್ಲಿ ಒಬಾಮ ಅಡಳಿತ ವಿಫಲವಾಗಿರುವುದನ್ನೇ ರೋಮ್ನಿ ಅವರು ಪ್ರಮುಖ ಅಸ್ತ್ರವಾಗಿ ಬಳಸುತ್ತಿರುವುದರಿಂದ ಅವರಿಗೆ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಅಮೆರಿಕದ ಜನರಿಗೆ ಒಬಾಮ ಅವರು ಆರ್ಥಿಕ ಹಿಂಜರಿತಕ್ಕೆ ನೀಡುತ್ತಿರುವ ಸಮಜಾಯಿಷಿ ಜನರನ್ನು ಸಮಾಧಾನಪಡಿಸುತ್ತಿಲ್ಲ ಎಂಬುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.