ADVERTISEMENT

ಕೈಲಾಸ ಯಾತ್ರೆಗೆ ಚೀನಾ ಅಡ್ಡಿ

ಮಾನಸ ಸರೋವರಕ್ಕೆ ಟಿಬೆಟ್‌ ಮಾರ್ಗ ಬಂದ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2015, 19:30 IST
Last Updated 1 ಜೂನ್ 2015, 19:30 IST
ಕೈಲಾಸ ಯಾತ್ರೆಗೆ ಚೀನಾ ಅಡ್ಡಿ
ಕೈಲಾಸ ಯಾತ್ರೆಗೆ ಚೀನಾ ಅಡ್ಡಿ   

ಕಠ್ಮಂಡು (ಐಎಎನ್‌ಎಸ್‌): ಚೀನಾ ಸರ್ಕಾರ ಟಿಬೆಟ್‌ ಗಡಿಯನ್ನು ಮುಚ್ಚಿದ್ದು, ಇದರಿಂದ ನೇಪಾಳ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಲು ಬಯಸಿರುವ 25 ಸಾವಿರಕ್ಕೂ ಅಧಿಕ ಯಾತ್ರಿಗಳಿಗೆ ತೊಂದರೆಯಾಗಿದೆ.

ನೇಪಾಳ ಮತ್ತು ಟಿಬೆಟ್‌ನಲ್ಲಿ ಈಚೆಗೆ ಭಾರಿ ಭೂಕಂಪ ಸಂಭವಿಸಿದ  ಕಾರಣ ಚೀನಾ ಸರ್ಕಾರ ಈ ಗಡಿ ಮುಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಗಡಿಗೆ ತಾಗಿಕೊಂಡಿರುವ ರಸ್ತೆಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿದೆ. ಇಲ್ಲಿ ಪ್ರಯಾಣ ಮಾಡುವುದು ಕಠಿಣ. ಮುನ್ನೆಚ್ಚರಿಕೆ ಕ್ರಮವಾಗಿ ಚೀನಾ ಗಡಿಯನ್ನು ಮುಚ್ಚಿದೆ’ ಎಂದು ವರದಿಗಳು ತಿಳಿಸಿವೆ.

ಚೀನಾ ಗಡಿ ಮುಚ್ಚಿರುವ ಕಾರಣ ನೇಪಾಳದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಏಕೆಂದರೆ 25 ಸಾವಿರಕ್ಕೂ ಅಧಿಕ ಮಂದಿ ತಮ್ಮ ಕೈಲಾಸ ಸರೋವರ ಯಾತ್ರೆಯನ್ನು  ನೇಪಾಳದ ಸುಮಾರು 38 ಟೂರ್‌ ಮತ್ತು ಟ್ರಾವೆಲ್‌ ಕಂಪೆನಿಗಳ ಮೂಲಕ ಬುಕ್‌ ಮಾಡಿದ್ದರು. ಇದೀಗ ಇವರಿಗೆ ವೇಳಾಪಟ್ಟಿ ಬದಲಿಸುವ ಅಥವಾ ಯಾತ್ರೆ ರದ್ದು ಮಾಡುವ ಅನಿವಾರ್ಯತೆ  ಎದುರಾಗಿದೆ.

ಭಾರತ, ರಷ್ಯಾ, ಮಲೇಷ್ಯಾ ಮತ್ತು ಯೂರೋಪ್‌ ದೇಶಗಳ ಯಾತ್ರಿಗಳು ಇದರಲ್ಲಿ ಒಳಗೊಂಡಿದ್ದಾರೆ. ಭಾರತದ 40 ಸಾವಿರ ಮಂದಿ ಪ್ರತಿವರ್ಷ ನೇಪಾಳ ಮಾರ್ಗವಾಗಿ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಾರೆ. ಮೇ– ಜುಲೈ ಅವಧಿಯಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು ಬರುತ್ತಾರೆ.

‘ಚೀನಾ ಸರ್ಕಾರದ ಜತೆ ಮಾತುಕತೆ ನಡೆಸಿ ಗಡಿಯನ್ನು ತೆರೆಯಲು ಕ್ರಮ ಕೈಗೊಳ್ಳಬೇಕು’ ಎಂದು ನೇಪಾಳದ ಪ್ರವಾಸೋದ್ಯಮ ಸಚಿವಾಲಯ ನೇಪಾಳ ಸರ್ಕಾರವನ್ನು ಕೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.