ಸಿಂಫೆರೊಪೋಲ್/ ಕೀವ್ (ರಾಯಿಟರ್ಸ್): ಕ್ರೀಮಿಯಾದಲ್ಲಿ ನಡೆದ ಜನಮತಗಣನೆಯಲ್ಲಿ ಶೇಕಡಾ 96ರಷ್ಟು ಮತಗಳು ಉಕ್ರೇನ್ ತ್ಯಜಿಸಿ ರಷ್ಯಾಕ್ಕೆ ಸೇರ್ಪಡೆಯಾಗುವುದರ ಪರ ಬಂದಿವೆ ಎಂಬುದಾಗಿ ಕ್ರೀಮಿಯಾದ ಮಾಸ್ಕೋ ಬೆಂಬಲಿತ ನಾಯಕರು ಸೋಮವಾರ ಘೋಷಿಸಿದ್ದಾರೆ.
ಬೆನ್ನಲ್ಲೇ ಇದನ್ನು ತಿರಸ್ಕರಿಸಿರುವ ಪಾಶ್ಚಿಮಾತ್ಯ ರಾಷ್ಟ್ರಗಳು 'ಜನಮತ ಗಣನೆಯನ್ನು' ಅಕ್ರಮ ಎಂಬುದಾಗಿ ಬಣ್ಣಿಸಿ ತತ್ ಕ್ಷಣವೇ ದಿಗ್ಬಂಧನ ವಿಧಿಸುವುದಾಗಿ ಪ್ರಕಟಿಸಿವೆ.
ಅಮೆರಿಕವನ್ನು 'ವಿಕಿರಣ ಬೂದಿ'ಯನ್ನಾಗಿಸುವ ಶಕ್ತಿ ತನಗಿರುವುದಾಗಿ ರಷ್ಯಾದ ಸರ್ಕಾರಿ ಮಾಧ್ಯಮ ನೆನಪಿಸಿದ್ದು, ಇದೇ ವೇಳೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಜೊತೆಗೆ ಮಾತನಾಡಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ತಾನು ಮತ್ತು ತನ್ನ ಐರೋಪ್ಯ ಮಿತ್ರರು ಉಕ್ರೇನ್ ಪ್ರದೇಶದಲ್ಲಿ ಅತಿಕ್ರಮಿಸಿದ್ದಕ್ಕಾಗಿ ರಷ್ಯಾದ ಮೇಲೆ 'ಹೆಚ್ಚಿನ ಬೆಲೆ ತೆರುವಂತೆ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.
ಶೀತಲ ಸಮರದ ಬಳಿಕ ಪೂರ್ವ- ಪಶ್ಚಿಮ ಬಾಂಧ್ಯವ್ಯದಲ್ಲಿ ಉದ್ಭವಿಸಿರುವ ಅತ್ಯಂತ ಗಂಭೀರ ಬಿಕ್ಕಟ್ಟು ಇದಾಗಿದ್ದು ಇದನ್ನು ಬಗೆ ಹರಿಸಲು ರಾಜತಾಂತ್ರಿಕ ಮಾರ್ಗಗಳನ್ನು ಒಬಾಮಾ ಮತ್ತು ಪುಟಿನ್ ಕಂಡುಕೊಳ್ಳುವರು ಎಂದು ಕ್ರೆಮ್ಲಿನ್ ಮತ್ತು ಶ್ವೇತಭವನಗಳು ಪ್ರಕಟಣೆಗಳನ್ನು ಹೊರಡಿಸಿವೆ.
ಆದರೆ ತನ್ನ ಹಿಂದಿನ ಸೋಮಿಯತ್ ನೆರೆ ರಾಷ್ಟ್ರದೊಳಗಿನ ಅತಿಕ್ರಮಣಗಳನ್ನು ರಷ್ಟದ ಪಡೆಗಳು ಹಿಂತೆಗೆದುಕೊಳ್ಳಬೇಕು ಎಂದು ಒಬಾಮಾ ಹೇಳಿದ್ದರೆ, ಕಳೆದ ತಿಂಗಳು ಮಿತ್ರ ರಾಷ್ಟ್ರ ಉಕ್ರೇನ್ ನಲ್ಲಿ ನಡೆದ ನಡೆದ ಚುನಾವಣೆ ವಿರುದ್ಧ ದಂಗೆ ನಡೆಸಿ ಅಧಿಕಾರಕ್ಕೆ ಬಂದಿರುವ ಹೊಸ ನಾಯಕತ್ವವು ಹಿಂಸಾತ್ಮಕ ಉಕ್ರೇನ್ ರಾಷ್ಟ್ರವಾದಿಗಳ ವಿರುದ್ಧ ಮಾತನಾಡುವ ರಷ್ಯನ್ನರಿಗೆ ರಕ್ಷಣೆ ಒದಗಿಸಲು ವಿಫಲವಾಗಿದೆ ಎಂಬ ತನ್ನ ಆರೋಪವನ್ನು ಪುಟಿನ್ ಪುನರುಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.