ADVERTISEMENT

‘ಚೀನಾ ಗುರಿಯಾಗಿಸಿ ಕ್ಷಿಪಣಿ ಅಭಿವೃದ್ಧಿಪಡಿಸುತ್ತಿದೆ ಭಾರತ’

ಏಜೆನ್ಸೀಸ್
Published 13 ಜುಲೈ 2017, 17:38 IST
Last Updated 13 ಜುಲೈ 2017, 17:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ದಕ್ಷಿಣ ಭಾರತದಿಂದ ಚೀನಾದಾದ್ಯಂತ ಯಾವುದೇ ನೆಲೆಯ ಮೇಲೂ ದಾಳಿ ನಡೆಸಬಲ್ಲಂಥ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಚೀನಾವನ್ನು ಗಮನದಲ್ಲಿಟ್ಟುಕೊಂಡು ಅಣ್ವಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿದೆ ಎಂದು ಅಮೆರಿಕದ ಇಬ್ಬರು ಹಿರಿಯ ಪರಮಾಣು ತಜ್ಞರು ಹೇಳಿದ್ದಾರೆ.

ಸಾಮಾನ್ಯವಾಗಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಭಾರತ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿತ್ತು. ಇದೀಗ ಚೀನಾವನ್ನು ಗುರಿಯಾಗಿಸಿದೆ ಎಂದು ಹ್ಯಾನ್ಸ್ ಎಂ ಕ್ರಿಸ್ಟೆನ್ಸನ್ ಮತ್ತು ರಾಬರ್ಟ್ ಎಸ್ ನಾರ್ರಿಸ್ ಎಂಬ ತಜ್ಞರು ‘ಇಂಡಿಯನ್ ನ್ಯೂಕ್ಲಿಯರ್ ಫೋರ್ಸಸ್ 2017’ ಎಂಬ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

150–200ರಷ್ಟು ಅಣ್ವಸ್ತ್ರ ಸಿಡಿತಲೆಗಳನ್ನು ತಯಾರಿಸಲು ಬೇಕಾಗಬಲ್ಲ 600 ಕಿಲೋದಷ್ಟು ಪ್ಲುಟೋನಿಯಂ ಅನ್ನು ಭಾರತ ಉತ್ಪಾದಿಸಿದೆ. ಆದರೆ, ಅದೆಲ್ಲವನ್ನೂ ಅಣ್ವಸ್ತ್ರ ಸಿಡಿತಲೆಗಳನ್ನಾಗಿ ಪರಿವರ್ತಿಸಿಲ್ಲ. ಸದ್ಯ 120–130 ಅಣ್ವಸ್ತ್ರ ಸಿಡಿತಲೆಗಳನ್ನು ಅಭಿವೃದ್ಧಿಪಡಿಸಿರುವ ಸಾಧ್ಯತೆ ಇದೆ ಎಂದು ಲೇಖನದಲ್ಲಿ ಹೇಳಲಾಗಿದೆ.

ADVERTISEMENT

**

ಪಾಕಿಸ್ತಾನ, ಚೀನಾ ಮತ್ತು ಅಗ್ನಿ ಕ್ಷಿಪಣಿ

ಭಾರತದ ಅಗ್ನಿ ಸರಣಿಯ ಕ್ಷಿಪಣಿಗಳನ್ನು ಕೇಂದ್ರವಾಗಿರಿಸಿಕೊಂಡು ವಿಶ್ಲೇಷಣೆ ಮಾಡಲಾಗಿದೆ.  ‘ಸದ್ಯ ಈಶಾನ್ಯ ಭಾರತದ ಗಡಿಯಿಂದ ಉಡಾವಣೆ ಮಾಡಿದರಷ್ಟೇ ಚೀನಾದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಕ್ಷಿಪಣಿಗಳು ಭಾರತದ ಬಳಿ ಇವೆ. ಇವುಗಳ ಸಾಮರ್ಥ್ಯ ಹೆಚ್ಚಿಸಲು ಭಾರತ ಯೋಜನೆ ರೂಪಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಭಾರತದಲ್ಲಿರುವ ಸೇನಾ ನೆಲೆಗಳಿಂದ ಉಡಾವಣೆ ಮಾಡಿದರೂ, ಚೀನಾದ ಯಾವುದೇ ಪ್ರದೇಶವನ್ನು ತಲುಪಬಲ್ಲ ಸಾಮರ್ಥ್ಯವಿರುವ ಅಗ್ನಿ–5 ಖಂಡಾಂತರ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ.  ಭಾರತದ ಅಣ್ವಸ್ತ್ರ ದಾಳಿ ಸಾಮರ್ಥ್ಯವನ್ನು ಅಗ್ನಿ–5 ಎರಡುಪಟ್ಟು ಹೆಚ್ಚಿಸುತ್ತದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

**

ಸಿಡಿತಲೆಗಳ ಭಾರಿ ಸಂಗ್ರಹ
‘ಅಣು ಸಿಡಿತಲೆ (ನ್ಯೂಕ್ಲಿಯರ್ ವಾರ್‌ ಹೆಡ್‌) ತಯಾರಿಕೆಗೆ ಬೇಕಾದ ಪ್ಲುಟೋನಿಯಂನ ಸಂಗ್ರಹ ಭಾರತದ ಬಳಿ ಸಾಕಷ್ಟಿದೆ. ಹೀಗಾಗಿ ಬೇಕಾದಷ್ಟು ಅಣು ಸಿಡಿತಲೆಗಳನ್ನು ತಯಾರಿಸಲು ಭಾರತದ ಶಕ್ತವಾಗಿದೆ’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿರುವ ಅಣು ವಿದ್ಯುತ್‌ ಸ್ಥಾವರಗಳ ಸಂಖ್ಯೆಯ ಆಧಾರದಲ್ಲಿ  ಪ್ಲುಟೋನಿಯಂ ಪ್ರಮಾಣವನ್ನು ಅವರು ಅಂದಾಜಿಸಿದ್ದಾರೆ.

*

600 ಕೆ.ಜಿ: ಭಾರತದ ಬಳಿ ಇರುವ ಅಣ್ವಸ್ತ್ರ ತಯಾರಿಕಾ ಗುಣಮಟ್ಟದ ಪ್ಲುಟೋನಿಯಂ

*

120–130: ಭಾರತ ಈಗಾಗಲೇ ತಯಾರಿಸಿರಬಹುದಾದ ಅಣು ಸಿಡಿತಲೆಗಳ ಸಂಖ್ಯೆ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.