ADVERTISEMENT

ಚೀನಾ: ಜೆ–20 ಯುದ್ಧವಿಮಾನದ ಪರಿಕ್ಷಾರ್ಥ ಹಾರಾಟ

ಏಜೆನ್ಸೀಸ್
Published 10 ಮೇ 2018, 15:11 IST
Last Updated 10 ಮೇ 2018, 15:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌ : ರಡಾರ್‌ಗಳ ಕಣ್ಗಾವಲನ್ನು ತಪ್ಪಿಸಿ ಹಾರಾಡಬಲ್ಲ, ಜೆ–20 ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟವನ್ನು ಸಾಗರದ ಮೇಲೆ ನಡೆಸಲಾಯಿತು ಎಂದು ಚೀನಾದ ವಾಯುಸೇನೆ ಬುಧವಾರ ತಿಳಿಸಿದೆ. ಈ ಹಾರಾಟ ನಡೆದ ನಿರ್ದಿಷ್ಟ ಜಲಪ್ರದೇಶವನ್ನು ಸೇನೆ ಬಹಿರಂಗಪಡಿಸಿಲ್ಲ.

‘ಯುದ್ಧ ಪರಿಸ್ಥಿತಿಯಲ್ಲಿ ಎದುರಿಸಬಹುದಾದ ಸನ್ನಿವೇಶವನ್ನು ಸೃಷ್ಟಿಸಿ ಸಾಗರ ಮೇಲೆ ವಿಮಾನವನ್ನು ಪರೀಕ್ಷಿಸಲಾಯಿತು. ಈ ಮೂಲಕ ಪಡೆಯ ಸಾಮರ್ಥ್ಯವನ್ನು ನವೀಕರಿಸಿಕೊಂಡಂತಾಗಿದೆ’ ಎಂದು ವಾಯುಪಡೆಯ ವಕ್ತಾರ ಶೆನ್‌ ಜಿಂಕ್‌ ರಕ್ಷಣಾಪಡೆಯ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಈ ಯುದ್ಧವಿಮಾನವು ಐದನೇ ತಲೆಮಾರಿನ ಸುಧಾರಿತ ತಂತ್ರಜ್ಞಾನ ಹೊಂದಿದೆ. ಪೈಲಟ್‌ ನಿರ್ದೇಶನಗಳನ್ನು ತ್ವರಿತವಾಗಿ ಗ್ರಹಿಸಿ ಕ್ಷಿಪ್ರವಾಗಿ ಕಾರ್ಯೋನ್ಮೂಖವಾಗುವ ತಾಂತ್ರಿಕತೆ ಹೊಂದಿದೆ. ಅಮೆರಿಕಾದ ಎಫ್‌–22, ಜಪಾನ್‌ ಮತ್ತು ದಕ್ಷಿಣ ಕೊರಿಯಾದ ಎಫ್‌–35 ಯುದ್ಧವಿಮಾನಗಳಿಗೆ ಇದು ಸರಿಸಾಟಿಯಾಗಬಲ್ಲದು’ ಎಂದು ಚೀನಾದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಬಾನಂಗಳದ ಕಾದಾಟದಲ್ಲಿ ಮೇಲುಗೈ ಸಾಧಿಸುವಲ್ಲಿ ಈ ವಿಮಾನ ಅತ್ಯುಪಯುಕ್ತ. ಎಂತಹ ಪ್ರತಿಕೂಲ ಹವಾಮಾನದ ಪರಿಸ್ಥಿತಿಯಲ್ಲೂ ಇದು ಕಾರ್ಯನಿರ್ವಹಿಸಬಲ್ಲದು’ ಎಂಬುದು ತಜ್ಞರ ಮಾತಾಗಿದೆ.

ರಕ್ಷಣಾ ವಲಯವನ್ನು ಬಲಪಡಿಸಲು ಚೀನಾ ತನ್ನ ಬಜೆಟ್‌ ಅನ್ನು ಶೇ 8ರಷ್ಟು ಹೆಚ್ಚಿಸಿದೆ. ದೂರಗಾಮಿ ಗುರಿಗಳನ್ನು ನಿಖರವಾಗಿ ತಲುಪುವ ಯುದ್ಧವಿಮಾನ ಮತ್ತು ಕ್ಷಿಪಣಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಮಿಲಿಟರಿ ಶಕ್ತಿ ಹೆಚ್ಚಿಸಿಕೊಳ್ಳಲು ಚೀನಾ ಪ್ರತಿವರ್ಷ ₹1,140ಸಾವಿರ ಕೋಟಿ ಮೀಸಲಿಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.