ADVERTISEMENT

ಚುನಾಯಿತರಲ್ಲದ ಪ್ರಧಾನಿ: ಎಸ್ ಅಂಡ್ ಪಿ ವಿಶ್ಲೇಷಣೆಗೆ ಮೊಯಿಲಿ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

 ಕೊಚ್ಚಿ (ಪಿಟಿಐ): ಜಾಗತಿಕ ರೇಟಿಂಗ್ ಸಂಸ್ಥೆ `ಸ್ಟಾಂಡರ್ಡ್ ಅಂಡ್ ಪೂರ್~ ಭಾರತದ ಹೂಡಿಕೆ ಕುರಿತು ಮೌಲ್ಯಮಾಪನ ಮಾಡಿರುವುದರ ಜತೆಗೇ ಕೇಂದ್ರದಲ್ಲಿನ ರಾಜಕೀಯ ಅಧಿಕಾರ ಹಂಚಿಕೆ ಬಗ್ಗೆ ಸೋಮವಾರ ಮಾಡಿರುವ ವಿಶ್ಲೇಷಣೆಗೆ ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯಿಲಿ, ಪ್ರಣವ್ ಮುಖರ್ಜಿ ಮತ್ತು ಹಣಕಾಸು ಸಚಿವಾಲಯದಿಂದ ಮಂಗಳವಾರ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮನಮೋಹನ್ ಸಿಂಗ್ ಕುರಿತು `ಜನರಿಂದ ನೇರ ಚುನಾಯಿತರಾಗದ ಪ್ರಧಾನಿ~ ಎಂದು ಎಸ್ ಅಂಡ್ ಪಿ ವಿಶ್ಲೇಷಣೆ ಮಾಡಿರುವುದಕ್ಕೆ, `ಇದೊಂದು ರಾಜಕೀಯ ಪ್ರಹಾರ~ ಎಂದು ಸಚಿವ ಮೊಯಿಲಿ ಕಿಡಿಕಾರಿದ್ದಾರೆ.
`ಇಂಥ ರೇಟಿಂಗ್ ಸಂಸ್ಥೆ ಅದು ಹೇಗೆ ರಾಜಕೀಯ ಪಕ್ಷ ಮತ್ತು ನಾಯಕತ್ವದ ವಿಚಾರದಲ್ಲಿ ವಿಶ್ಲೇಷಣೆ ನಡೆಸಲು ಸಾಧ್ಯ?~ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಮತ್ತು ಪ್ರಧಾನಿ ನಡುವೆ ಅಧಿಕಾರ ಹಂಚಿಕೆಯಾಗಿದೆ ಎಂಬ ಎಸ್ ಅಂಡ್ ಪಿ ವರದಿಗೆ ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದ ಮೊಯಿಲಿ, ಪ್ರಧಾನಿ ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞ ಮತ್ತು ಆಡಳಿತಗಾರರು. ಬಹಳ ವರ್ಷಗಳಿಂದ ಅವರು ಕೇಂದ್ರ ಸರ್ಕಾರವನ್ನು ತುಂಬಾ ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

`ರೇಟಿಂಗ್ ಸಂಸ್ಥೆಯೊಂದು ಪ್ರಧಾನಿಯನ್ನೇ `ಚುನಾಯಿತರಲ್ಲದವರು~ ಎಂದು ಅದು ಹೇಗೆ ವಿಶ್ಲೇಷಿಸಬಲ್ಲದು? ಅವರು ರಾಜ್ಯಸಭೆಯ ಚುನಾಯಿತ ಸದಸ್ಯ. ಅಲ್ಲದೆ, ಅವರು ಸರ್ಕಾರದಲ್ಲಿ ಮಿತ್ರಪಕ್ಷಗಳೂ ಸೇರಿದಂತೆ 350 ಸದಸ್ಯರ ಬಹುಮತದ ಬೆಂಬಲವನ್ನೂ ಹೊಂದಿದ್ದಾರೆ~ ಎಂದಿರುವ ಸಚಿವರು, `ಎಸ್  ಅಂಡ್ ಪಿ ತಕ್ಷಣವೇ ತನ್ನ ತಪ್ಪು ಒಪ್ಪಿಕೊಂಡು ತಿದ್ದಿಕೊಳ್ಳಲಿ~ ಎಂದು ಆಗ್ರಹಿಸಿದ್ದಾರೆ.

ಅಧಿಕಾರ ಹಂಚಿಕೆ ತೊಡರುಗಾಲು: `ನೀತಿ ನಿರೂಪಣೆಯಲ್ಲಿನ ವೈಫಲ್ಯ, ಕೇಂದ್ರ ನಾಯಕತ್ವದಲ್ಲಿನ ಸಮಸ್ಯೆ, ಆರ್ಥಿಕ ವೃದ್ಧಿ ದರ ಕುಸಿತ ಇತ್ಯಾದಿ ಸಂಗತಿಗಳಿಂದ `ಬ್ರಿಕ್~ ದೇಶಗಳ ಸಾಲಿನಲ್ಲಿ ಹೂಡಿಕೆ ಶ್ರೇಣಿ ಕಳೆದುಕೊಳ್ಳಲಿರುವ ಮೊದಲ ದೇಶ ಭಾರತವಾಗಲಿದೆ~ ಎಂದು `ಎಸ್ ಅಂಡ್ ಪಿ~ ಎಚ್ಚರಿಸಿತ್ತು.

ಜತೆಗೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು `ಜನರಿಂದ  ನೇರವಾಗಿ ಆಯ್ಕೆಯಾಗದ~ ಪ್ರಧಾನಿ ಮನಮೋಹನ್ ಸಿಂಗ್ ನಡುವೆ ಅಧಿಕಾರದ ಹಂಚಿಕೆಯಾಗಿರುವುದೇ ಭಾರತದ ಆರ್ಥಿಕ ಸುಧಾರಣೆಗೆ ತೊಡರುಗಾಲಾಗಿದೆ ಎಂದೂ ವಿಶ್ಲೇಷಿಸಿತ್ತು.

ಆರ್ಥಿಕ ನೀತಿ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಗಂಭೀರ ಸ್ವರೂಪದ ಸುಧಾರಣೆ ವಿಚಾರ ಬಂದಾಗಲೆಲ್ಲ ಆ ಪಕ್ಷದೊಳಗೇ ವಿರೋಧಿ ಚಟುವಟಿಕೆಗಳೂ  ನಡೆಯುತ್ತವೆ. ಈ ಅಂಶಗಳೇ ಅಡ್ಡಿ ಉಂಟು ಮಾಡುವಂತಹವಾಗಿವೆ ಎಂದು `ಸಮಸ್ಯೆಯ ಕೇಂದ್ರ~ದತ್ತ ಬೊಟ್ಟು ಮಾಡಿತ್ತು.

ಎಲ್ಲಕ್ಕಿಂತ ಬಹಳ ಮುಖ್ಯವಾಗಿ, ಸಂಪುಟದಲ್ಲಿ ಯಾವುದೇ ಸ್ಥಾನ ಹೊಂದಿಲ್ಲದೇ ಇದ್ದರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲಿಯೇ ಅತ್ಯುನ್ನತ ರಾಜಕೀಯ ಅಧಿಕಾರ ಉಳಿದುಬಿಟ್ಟಿದೆ. ಆದರೆ, ಸರ್ಕಾರ ಮುನ್ನಡೆಸುವ ಹೊಣೆ ಪ್ರಧಾನಿ ಮನಮೋಹನ್ ಸಿಂಗ್ ಅವರದ್ದಾಗಿದೆ. ಅಲ್ಲದೆ, ಸಿಂಗ್ ಅವರಿಗೆ `ಸ್ವಂತದ್ದು~ ಎಂದುಕೊಳ್ಳುವ ರಾಜಕೀಯ ಹಿನ್ನೆಲೆಯೂ ಇಲ್ಲ. ಇದೆಲ್ಲ ಅಂಶವೂ ಭಾರತದ ಪ್ರಗತಿಗತಿಗೆ ಅಡ್ಡಗಾಲಾಗಿದೆ ಎಂದೇ ವ್ಯಾಖ್ಯಾನಿಸಿತ್ತು.

ಹೀಗೆ ರಾಜಕೀಯ ಅಧಿಕಾರವು ಕಾಂಗ್ರೆಸ್ ಅಧ್ಯಕ್ಷೆ ಮತ್ತು `ನೇಮಕಗೊಂಡ ಪ್ರಧಾನಿ~ ನಡುವೆ ಹಂಚಿ ಹೋಗಿರುವುದೇ ಸುಧಾರಣೆಗೆ ಅಗತ್ಯವಾದ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯನ್ನೇ ದುರ್ಬಲಗೊಳಿಸಿದೆ. ಪರಿಣಾಮವಾಗಿ ಪ್ರಧಾನಿ ತಮ್ಮ ಸಂಪುಟ ಸಹೋದ್ಯೋಗಿಗಳನ್ನೂ ಪ್ರಭಾವಿತಗೊಳಿಸುವುದರಲ್ಲಿ ಸೋಲುತ್ತಿದ್ದಾರೆ. ತಾವು ಇಚ್ಛಿಸುವ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವ ವಿಚಾರದಲ್ಲಿಯೂ ಬಹಳ ಇತಿಮಿತಿ ಹೊಂದಿದ್ದಾರೆ. ಇದು ನಮ್ಮ ಸ್ಪಷ್ಟ ವಿಶ್ಲೇಷಣೆ ಎಂದು ಈ ಜಾಗತಿಕ  ರೇಟಿಂಗ್ ಸಂಸ್ಥೆ ನೇರವಾಗಿಯೇ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.