ADVERTISEMENT

ಜಪಾನ್‌ನಲ್ಲಿ ಭೂಕಂಪ: 3 ಸಾವು

ಏಜೆನ್ಸೀಸ್
Published 18 ಜೂನ್ 2018, 16:34 IST
Last Updated 18 ಜೂನ್ 2018, 16:34 IST
ಭೂಕಂಪನದಿಂದ ಟಕಾಸುಕಿಯ ರಸ್ತೆಯೊಂದರಲ್ಲಿ ದೊಡ್ಡ ಬಿರುಕು ಮೂಡಿದೆ –ಎಪಿ ಚಿತ್ರ
ಭೂಕಂಪನದಿಂದ ಟಕಾಸುಕಿಯ ರಸ್ತೆಯೊಂದರಲ್ಲಿ ದೊಡ್ಡ ಬಿರುಕು ಮೂಡಿದೆ –ಎಪಿ ಚಿತ್ರ   

ಟೋಕಿಯೊ: ಜಪಾನ್‌ನ ಒಸಾಕದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಮೂವರು ಬಲಿಯಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಂಪನದ ಪರಿಣಾಮ ಕಟ್ಟಡಗಳು ನಡುಗುತ್ತಿರುವ ಹಾಗೂ ದೊಡ್ಡ ಪೈಪ್‌ಗಳು ಒಡೆದು ನೀರು ಚಿಮ್ಮುತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ಬಿತ್ತರಿಸಿವೆ.

ಸುನಾಮಿ ಮುನ್ನೆಚ್ಚರಿಕೆ ಇಲ್ಲ: ರಿಕ್ಟರ್ ಮಾಪಕದಲ್ಲಿ ಭೂಕಂಪ ತೀವ್ರತೆ 5.3ರಷ್ಟು ದಾಖಲಾಗಿದೆ. ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿಲ್ಲ. ದೊಡ್ಡ ಪ್ರಮಾಣದ ಹಾನಿಯೂ ಆಗಿಲ್ಲ. ಆದರೆ ವಿದ್ಯುತ್ ಪೂರೈಕೆ ಇಲ್ಲದ ಕಾರಣ ನಗರದ ಸಾವಿರಾರು ಜನರು ಹಾಗೂ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

ADVERTISEMENT

ಕೆಲವು ಬಾರಿ ಭೂಮಿ ನಡುಗಿದ ಅನುಭವವೂ ಆಯಿತು. ಹೀಗಾಗಿ ಬುಲೆಟ್ ರೈಲು ಸೇರಿದಂತೆ ಇತರೆ ರೈಲುಗಳು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 80 ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಲಾಯಿತು. ಸ್ಥಳೀಯ ರೈಲು ಸೇವೆಯೂ ರದ್ದಾದ ಪರಿಣಾಮ ಪ್ರಯಾಣಿಕರು ಟ್ಯಾಕ್ಸಿಗಾಗಿ ಸಾಲುಗಟ್ಟಿ ಕಾಯುತ್ತಿದ್ದ ದೃಶ್ಯ ಕಂಡುಬಂದಿತು.

ಒಸಾಕ ನಗರದ ಉತ್ತರಕ್ಕಿರುವ ಟಕಾಸುಕಿಯಲ್ಲಿ ಕುಸಿದ ಗೋಡೆಯಡಿ ಸಿಲುಕಿ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಗೋಡೆ ಕುಸಿದು 80 ವರ್ಷದ ವೃದ್ಧ ಹಾಗೂ ಮನೆಯಲ್ಲಿ ಪುಸ್ತಕದ ಶೆಲ್ಫ್ ಬಿದ್ದಿದ್ದರಿಂದ 84 ವರ್ಷದ ಮತ್ತೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಎಲ್ಲ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದು, ಜೀವ ರಕ್ಷಣೆಗೆ ಮೊದಲ ಆದ್ಯತೆ ಎಂದು ಪ್ರಧಾನಿ ಶಿಂಜೊ ಅಬೆ ತಿಳಿಸಿದ್ದಾರೆ. ಪರಮಾಣು ಘಟಕಗಳು ಸುರಕ್ಷಿತವಾಗಿವೆ ಎಂದು ಪರಮಾಣು ಪ್ರಾಧಿಕಾರ ಸ್ಪಷ್ಟಪಡಿಸಿದೆ.

*
ಮುಂದಿನ ಎರಡು–ಮೂರು ದಿನಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸುವ ಸಾಧ್ಯತೆಗಳಿವೆ.
-ಯೊಶಿಹಿದೆ ಸುಗಾ, ಸರ್ಕಾರದ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.