ADVERTISEMENT

ತಾಲಿಬಾನಿಗಳನ್ನು ಕೆರಳಿಸಿದ ವಿಡಿಯೊ: ಅಮೆರಿಕ ಯೋಧರ ವಿಕೃತಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST
ತಾಲಿಬಾನಿಗಳನ್ನು ಕೆರಳಿಸಿದ ವಿಡಿಯೊ: ಅಮೆರಿಕ ಯೋಧರ ವಿಕೃತಿ
ತಾಲಿಬಾನಿಗಳನ್ನು ಕೆರಳಿಸಿದ ವಿಡಿಯೊ: ಅಮೆರಿಕ ಯೋಧರ ವಿಕೃತಿ   

ಕಾಬೂಲ್: ಮೃತ ತಾಲಿಬಾನ್ ಬಂಡುಕೋರರ ರಕ್ತಸಿಕ್ತ ದೇಹದ ಮೇಲೆ ಅಮೆರಿಕ ಸೈನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೊ ದೃಶ್ಯಾವಳಿಯೊಂದು ಈಗ ಕೋಲಾಹಲಕ್ಕೆ ಕಾರಣವಾಗಿದೆ.

ಆಫ್ಘಾನಿಸ್ತಾನದ ಟೊಲೊ ಸುದ್ದಿವಾಹಿನಿ ಬಿತ್ತರಿಸಿರುವ ಈ ದೃಶ್ಯಾವಳಿ ಆಫ್ಘಾನಿಸ್ತಾನ ಸರ್ಕಾರ ಹಾಗೂ ಅಮೆರಿಕ ಸೇನೆಯಲ್ಲಿ ತೀವ್ರ ತಳಮಳಕ್ಕೆ ಕಾರಣವಾಗಿದೆ.

ತಾಲಿಬಾನ್ ಮುಖ್ಯಸ್ಥರೊಂದಿಗೆ ಅಮೆರಿಕ ಸೇನೆ ಆರಂಭಿಸಿರುವ ಶಾಂತಿ ಪ್ರಕ್ರಿಯೆಗೆ ಈ ವಿಡಿಯೊ ದೃಶ್ಯದ ತುಣುಕು ತಡೆಯೊಡ್ಡಬಹುದು ಎಂಬ ಆತಂಕವೂ ಈಗ ಕಾಡುತ್ತಿದೆ.

ADVERTISEMENT

ವಿಡಿಯೊದಲ್ಲಿರುವ ದೃಶ್ಯ ನೈಜವಾದದ್ದು ಎಂದು ಸಾಬೀತಾದಲ್ಲಿ ಅಮೆರಿಕ ಪಡೆಗಳು ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ಈ ಹಿಂದೆ ನಡೆಸಿದ್ದ ದೌರ್ಜನ್ಯದ ನೆನಪನ್ನು ಹಸಿರುಗೊಳಿಸಿ, ಮುಸ್ಲಿಂ ರಾಷ್ಟ್ರಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಿಯೋನ್ ಪೆನೆಟ್ಟಾ, ಇದು ಅತ್ಯಂತ ಹೇಯ ದೃಶ್ಯ. ಯಾರೇ ಇಂತಹ ಅನುಚಿತ ವರ್ತನೆ ತೋರಿದ್ದರೂ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು  ಹೇಳಿದ್ದಾರೆ. ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಸಹ ಇದನ್ನು ಕಟು ಮಾತುಗಳಲ್ಲಿ ಖಂಡಿಸಿದ್ದಾರೆ. ತಾಲಿಬಾನ್ ಸಂಘಟನೆಯೂ ಸಹಾ ಈ ಕೃತ್ಯವನ್ನು ಖಂಡಿಸಿದ್ದರೂ ಶಾಂತಿ ಮಾತುಕತೆಯಿಂದ ಹಿಂದಕ್ಕೆ ಸರಿಯುವ ಯಾವುದೇ ಇಂಗಿತವನ್ನು ಮಾತ್ರ ಈತನಕ ವ್ಯಕ್ತಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.