ADVERTISEMENT

ದಕ್ಷಿಣ ಸುಡಾನ್‌ನಲ್ಲಿ ಯುದ್ಧ ಭೀತಿ

ಬಂಡುಕೋರರ ಹಿಡಿತದಲ್ಲಿರುವ ಪಟ್ಟಣಗಳತ್ತ ಮುನ್ನುಗ್ಗಿದ ಸೇನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಜುಬಾ (ಎಎಫ್‌ಪಿ): ಬಂಡುಕೋರರ ವಿರುದ್ಧ ಕಠಿಣ ಕ್ರಮಕ್ಕೆ ದಕ್ಷಿಣ ಸುಡಾನ್‌ ಸೇನೆ ಮುಂದಾಗಿರುವುದರಿಂದ ಯುದ್ಧ ಭೀತಿ ಕಾಣಿಸಿಕೊಂಡಿದೆ.

ಶಾಂತಿ, ಸಂಧಾನಕ್ಕೆ ಅಂತರ­ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿ­ರುವ ಶಾಂತಿ ಯತ್ನಗಳ ಹೊರತಾ­ಗಿಯೂ ಹಿಂಸಾಚಾರ ಮುಂದುವರೆ­ದಿದ್ದು ದೇಶದ ಪದಚ್ಯುತ ಉಪಾಧ್ಯಕ್ಷ ರೀಕ್‌ ಮಾಚಾರ್‌ ನೇತೃತ್ವದ ಬಂಡು­ಕೋರರನ್ನು ಬಗ್ಗುಬಡಿಯಲು ಹಾಲಿ ಅಧ್ಯಕ್ಷ ಸಾಲ್ವಾ ಕೀರ್‌ ನಿರ್ಧರಿಸಿದ್ದಾರೆ.

ದಕ್ಷಿಣ ಸುಡಾನ್‌ನಲ್ಲಿ ಒಂದು ವಾರದಿಂದ ಹಿಂಸಾಚಾರ ನಡೆಯು ತ್ತಿದ್ದು ಸಾವಿರಾರು ನಾಗರಿಕರು ತೊಂದರೆಗೆ ಒಳಗಾಗಿದ್ದಾರೆ.
ಬೊರ್‌ ಹಾಗೂ ಬೆಂಟಿಯು ಪಟ್ಟಣ­ಗಳನ್ನು ತಮ್ಮ ಸೇನೆ ವಶಕ್ಕೆ ತೆಗೆದು­ಕೊಂಡಿದೆ ಎಂದು ಕೀರ್‌ ತಿಳಿಸಿದ್ದಾರೆ. ಮತ್ತೊಂದೆಡೆ ಈ ಸಂಬಂಧ ಹೇಳಿಕೆ ನೀಡಿರುವ ಸೇನಾ ವಕ್ತಾರ ಫಿಲಿಪ್‌ ಅಗ್ವೆರ್‌, ಬಂಡುಕೋರರ ಮೇಲೆ ಆಕ್ರ­ಮಣ ನಡೆಸಲು ಸೇನೆ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.

‘ಬಂಡುಕೋರರು ಹಿಡಿತ ಸಾಧಿಸಿ­ರುವ   ಬೊರ್‌ ಪಟ್ಟಣವನ್ನು ಮತ್ತೆ ವಶಕ್ಕೆ ಪಡೆಯಲು ನಮ್ಮ ಸೇನೆ ಸನ್ನದ್ಧವಾಗಿದೆ. ಇಲ್ಲಿ ನಾವು ಮತ್ತೆ ಜಯ ಸಾಧಿಸುತ್ತೇವೆ’ ಎಂದು ಫಿಲಿಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಸುಡಾನ್‌ನಲ್ಲಿರುವ ವಿಶ್ವ­ಸಂಸ್ಥೆಯ ಮಾನವೀಯ ವಿಭಾಗದ ಸಂಚಾಲಕ ಟೊಬಿ ಲ್ಯಾಂಜರ್‌ ಭಾನು­ವಾರ ಬೊರ್‌ ಪಟ್ಟಣಕ್ಕೆ ಭೇಟಿ ನೀಡಿದ್ದು, ‘ಸಾವಿರಾರು ಜನ ನಿರಾಶ್ರಿತ­ರಾಗಿದ್ದು ಪರಿಸ್ಥಿತಿ  ಬಿಗಡಾ­ಯಿಸಿದೆ’ ಎಂದು ಅವರು ಹೇಳಿಕೆ ನೀಡಿದ್ದರು.

ಸುಡಾನ್‌ ದೇಶದಿಂದ 2011ರಲ್ಲಿ ಸ್ವತಂತ್ರಗೊಂಡ ದಕ್ಷಿಣ ಸುಡಾನ್‌ನಲ್ಲಿ  ತೈಲ ಸಂಪತ್ತು ಹೇರಳವಾಗಿದ್ದು ಅಲ್ಲೀಗ ಹಿಂಸಾಚಾರ ಭುಗಿಲೆದ್ದಿದೆ;  ನಿರಾಶ್ರಿ­ತರಾದ ಸಾವಿರಾರು ಜನರಿಗೆ ವಿಶ್ವಸಂಸ್ಥೆಯ ಶಿಬಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಸೇನಾ ಕಾರ್ಯಾಚರಣೆ: ಒಬಾಮ
ವಾಷಿಂಗ್ಟನ್‌ (ಪಿಟಿಐ): ಹಿಂಸಾ­ಚಾರ ಭುಗಿಲೆದ್ದಿರುವ ದಕ್ಷಿಣ ಸುಡಾನ್‌ನಲ್ಲಿ ನೆಲೆಸಿರುವ ಅಮೆರಿಕ­ನ್ನರ ಸುರಕ್ಷತೆಗಾಗಿ ಮತ್ತಷ್ಟು ಸೇನಾ ಕಾರ್ಯಾಚರಣೆ ಕೈಗೊಳ್ಳುವುದಾಗಿ ಅಮೆರಿಕ ಹೇಳಿದೆ. ಅಮೆರಿಕ ಸರ್ಕಾರ ಇನ್ನೂ 46 ರಕ್ಷಣಾ ಸಿಬ್ಬಂದಿಯನ್ನು ದಕ್ಷಿಣ ಸುಡಾನ್‌ಗೆ ಕಳುಹಿಸಿದೆ. ‘ಅಮೆರಿಕ­ನ್ನರ ಹಾಗೂ ಅವರ ಆಸ್ತಿಪಾಸ್ತಿ ರಕ್ಷಣೆ, ನಮ್ಮ ರಾಯ­ಭಾರ  ಕಚೇ­ರಿಯ ಸಂರಕ್ಷಣೆಗಾಗಿ ಮತ್ತಷ್ಟು ಸೇನಾ ಕಾರ್ಯಾಚರಣೆ ಕೈಗೊಳ್ಳ­ಲಾ­ಗು­ವುದು’ ಎಂದು ಅಧ್ಯಕ್ಷ ಬರಾಕ್‌ ಒಬಾಮ ಎಚ್ಚರಿಸಿ­ದ್ದಾರೆ.

‘ನಮ್ಮ ಹಾಗೂ ನಮ್ಮ ಮಿತ್ರ ರಾಷ್ಟ್ರದ ನಾಗರಿಕರನ್ನು ಕರೆತರಲು  ಈಗಾಗಲೇ ದಕ್ಷಿಣ ಸುಡಾನ್‌ನ ತೊಂದರೆಗೆ ಒಳಗಾದ ಪ್ರದೇಶಗಳಿಗೆ ಹೆಲಿಕಾಪ್ಟರ್‌ಗಳನ್ನು ಕಳುಹಿಸಿದ್ದು ಈಗಾಗಲೇ ಕೆಲವರು ಬೊರ್‌ ಪಟ್ಟಣದಿಂದ ಜುಬಾಕ್ಕೆ ಪ್ರಯಾಣ ಬೆಳೆಸಿದ್ದಾರೆ’ ಎಂದು ಅಮೆರಿಕದ ವಿದೇಶಾಂಗ ಖಾತೆ ವಕ್ತಾರ ಜೆನ್‌ ಪಾಸ್ಕಿ ಹೇಳಿದ್ದಾರೆ.

ಈಗಾಗಲೇ ಅಮೆರಿಕದ ಸುಮಾರು 380 ಹಾಗೂ ಇತರ ದೇಶ­ಗಳ 300 ನಾಗರಿಕರನ್ನು ಅಮೆ­ರಿಕದ ಐದು ಸೇನಾ ವಿಮಾನ­ಗಳ ಮೂಲಕ ಕೀನ್ಯಾ ಮತ್ತಿತರ ದೇಶ­ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪಾಸ್ಕಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT